Sunday, February 21, 2021

 ಕವನ ಸಂಕಲನ:- ಶಾಂತಿ ಬೀಜಗಳ ಜತನ




ಲೇಖಕರು:- ಡಾ. ಪ್ರಕಾಶ ಗ ಖಾಡೆ
ಪ್ರಕಾಶಕರು:- ಯಾಜಿ ಪ್ರಕಾಶನ, ಪುಟಗಳು:- 108
ಬೆಲೆ:- 120
"ತೆರೆಯ ಮರೆಯಿಂದ ಹೊರಬಿದ್ದ ಶಾಂತಿ ಬೀಜಗಳು"
ವಾಣಿ ಭಂಡಾರಿ
ಕಾವ್ಯ ಮೀಮಾಂಸಕನಾದ ರಾಜಶೇಖರನು ಕಾವ್ಯ ರಚಿಸುವ ಸಲುವಾಗಿ
"ಸ್ವಾಸ್ತ್ಯಂ ಪ್ರತಿಭಾಭ್ಯಾಸೋ
ಭಕ್ತಿರ್ವಿದ್ವತ್ಕಥಾ ಬಹುಶ್ರುತತಾ ಸ್ಪೃತಿದಾರ್ಢ್ಯ ಮನಿರ್ವೇದಶ್ಚ ಮಾತರೋಷ್ಟೌ ಕವಿತ್ವಸ್ಯ" ಎಂದು ಹೇಳಿದನು.
ಅಂದರೆ ದೇಹ ಹಾಗೂ ಮನಸ್ಸುಗಳ ಸ್ವಾಸ್ಥ್ಯತೆ,ಪ್ರತಿಭೆ, ಅಭ್ಯಾಸ,ಭಕ್ತಿ, ವಿದ್ವಾಂಸರೊಡನೆ ಚರ್ಚೆ, ಪಾಂಡಿತ್ಯ,ದೃಢವಾದ ಜ್ಞಾಪಕಶಕ್ತಿ,ಮತ್ತು ಉತ್ಸಾಹ. ಈ ಮೇಲಿನ ಎಂಟು ಗುಣಗಳು ಯಾರ ಹತ್ತಿರ ಇರುತ್ತವೆಯೋ ಅವರು ಕಾವ್ಯ ರಚಿಸಲಿಕ್ಕೆ ಸಾಧ್ಯವೆಂದು ಹೇಳುತ್ತಾನೆ. ಈ ಎಂಟು ಗುಣಗಳು ಕವಿತೆಯ 'ತಾಯಿಯರು' ಎಂದು ಉಲ್ಲೇಖಿಸುತ್ತಾನೆ.ಈ ಮಾತೃ ಗುಣದಲ್ಲಿ ಕವಿತೆಗೆ ಹೆತ್ತ ತಾಯಿ "ಪ್ರತಿಭೆ" ಮಿಕ್ಕೆಲ್ಲವುಗಳೆಲ್ಲ ಸಾಕು ತಾಯಿಯರೆಂದು ಆತನು ವ್ಯಕ್ತಪಡಿಸುತ್ತಾನೆ.
ಮೇಲಿನ ಹೇಳಿಕೆಯನ್ನು ವಿವೇಚಿಸಿ ಮುಂದೆ ಸಾಗಿದಾಗ ಕವಿಗಳಾದ ಖಾಡೆಯವರ ಈ ಕೆಳಗಿನ ಸಾಲು ತಡೆದು ನಿಲ್ಲಿಸುತ್ತದೆ.
"ಕಿತ್ತಷ್ಟು ಬೆಳೆವ ಕಸಕ್ಕೆ
ಹೇಳದೆ ಬರುವ ಕನಸಿಗೆ
ತೆರೆದಷ್ಟು ಆಕಾಶ,
ಉಳಿದಷ್ಟು ಪ್ರಕಾಶ". ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶ ನಾನು ಎಂಬ ಧ್ವನಿಯೂ ಸರ್ವಕಾಲಿಕವಾಗಿ ತನ್ನ ತನವನ್ನು ವ್ಯಾಪಿಸಿಕೊಂಡು ಸಾರ್ವಕಾಲಿಕ ಸತ್ಯತೆಯನ್ನು ಮೂಡಿಸುವಂತದ್ದು. ಮೂರ್ತ ರೂಪದೊಂದಿಗೆ ಅಮೂರ್ತ ಭಾವನೆಗಳು ಮೂಡುವುದು ಸಹಜವಾಗಿ ಕಂಡುಬರುವ ದಿಗ್ದರ್ಶನ ಎನ್ನಬಹುದು.
ಕವಿಯಾಗಿ ಮೂಡುವುದು ಅಷ್ಟು ಸುಲಭ ಸಾಧ್ಯವಾದ ಮಾತಲ್ಲ. ಈಗಷ್ಟೇ ಬೀಜ ಬಿತ್ತಿ ಮೂರು ತಿಂಗಳ ಒಳಗೆ ಫಸಲು ತೆಗೆಯುವಂತಹ ಕೆಲವು ವಾಣಿಜ್ಯೀಕರಣಗೊಂಡು ಬೆಳೆಯುವ ಬೆಳೆಯು ಅಲ್ಲ.
ತನ್ನದೇ ಆದ "ಭಾವವೆಂಬ ಬತ್ತಿಯನ್ನು ಸತತ ಅಭ್ಯಾಸದೊಳು ಪ್ರತಿಭೆ ಎಂಬ ತೈಲದಲ್ಲಿ ಅದ್ದಿ,ಚಿತ್ತ‌ ಸ್ವಾಸ್ಥವೆಂಬ ಅಗ್ನಿಯನ್ನು ಸ್ಪರ್ಶಿಸಿದಾಗ ಕಾವ್ಯವೆಂಬ ದೀವಿಗೆ ಪ್ರಕಾಶಿಸುತ್ತದೆ" ಎಂಬ ಚಿಂತನೆಯಲ್ಲಿ ಹರಿತಗೊಂಡು ದೇದೀಪ್ಯಮಾನವಾಗಿ ಪ್ರಕಾಶಿಸುವವರು ಕವಿಗಳಾದ ಡಾ||ಪ್ರಕಾಶ್ ಖಾಡೆ ಅವರು.
ಖಾಡೆಯವರು ಮೂಲತಃ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತೊದಲಬಾಗಿಯಲ್ಲಿ ಜನಿಸಿದವರು,ಎಂ.ಎ.ಪದವಿಯನ್ನು ದಾರವಾಡದಲ್ಲಿ ಮುಗಿಸಿ, "ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ" ಎಂಬ ವಿಷಯದ ಮೇಲೆ ಸಂಶೋಧನಾ ಮಹಾ ಪ್ರಬಂಧವನ್ನು ಸಿದ್ಧಪಡಿಸಿ 2005ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದರು. ಈಗಾಗಲೇ ಕಾವ್ಯ, ಕಥೆ, ನಾಟಕ, ಜೀವನಚರಿತ್ರೆ, ಸಂಶೋಧನೆ, ಸಂಪಾದನೆ, ಜಾನಪದ,ಹಾಗೂ ವಿಮರ್ಶೆಗಳು ಸೇರಿದಂತೆ ಹಲವು ಪ್ರಕಾರಗಳಲ್ಲಿ ತಮ್ಮ ಪ್ರತಿಭೆ ತೋರ್ಪಡಿಸಿರುವ ಇವರು,25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. "ಕನ್ನಡ ಸಾಹಿತ್ಯ ಪರಿಷತ್ತು ಪುಸ್ತಕ ದತ್ತಿ ಪ್ರಶಸ್ತಿ, "ಬೇಂದ್ರೆ ಸಾಹಿತ್ಯ ಪ್ರಶಸ್ತಿ", "ಹುಬ್ಬಳ್ಳಿಯ ಬೊಮ್ಮಾಯಿ ಪ್ರತಿಷ್ಠಾನ ಪ್ರಶಸ್ತಿ", ಮತ್ತು "ಸಂಕ್ರಮಣ ಸಾಹಿತ್ಯ ಪ್ರಶಸ್ತಿ" ಗಳಿಗೆ ಭಾಜನರಾಗಿರುವ ಇವರು 2008ರಿಂದ 2012ರವರೆಗೆ ಬಾಗಲಕೋಟೆ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿಯಾಗಿ ಸಹ ಕಾರ್ಯವನ್ನು ನಿರ್ವಹಿಸಿರುತ್ತಾರೆ. "ಶಾಂತಿ ಬೀಜಗಳ ಜತನ" ಎಂಬ ಕವನ ಸಂಕಲನ ಇವರ ನಾಲ್ಕನೆಯ ಕವನ ಸಂಕಲನವಾಗಿದ್ದು, ಇದರಲ್ಲಿ 81 ಕವಿತೆಗಳು ಅಡಕವಾಗಿ ಕುಳಿತಿವೆ.
ನಾನು ಸತ್ಯವನ್ನು
ಸುಳ್ಳು ಮಾಡಲು ನೋಡಿದೆ
ಅದೆಷ್ಟು ಸತ್ಯಗಳು ಸುಳ್ಳಾಗಿ ಕುಳಿತಿದ್ದವು".
ಬಹುಶಃ ಬದುಕಿನ ದುರಂತ ಎಂದರೆ ಇದೇ ಇರಬೇಕು ಎಂದು ಒಮ್ಮೊಮ್ಮೆ ಅನಿಸದೆ ಇರಲಾರದು. ಏಕೆಂದರೆ ಸಮಾಜದಲ್ಲಿ ಅಡಗಿರುವ ದೌರ್ಬಲ್ಯ, ಅಸಹನೆ, ಸ್ವಾರ್ಥಚಿಂತನೆ,ಸುಳ್ಳು,ಮೋಸ,ದಗ,ಕಪಟ,ವಂಚನೆ,ಇಂತಹ ಅನೇಕ ವಿಚಾರಗಳು ಕವಿಯ ಮನಸ್ಸಿನಲ್ಲಿ ನೋವನ್ನು ಮೂಡಿಸಿವೆ. ಒಳಿತು ಕೆಡುಕಿನ ನಡುವೆ ಮನಸ್ಸು ಜಿಜ್ಞಾಸೆಗೊಳಪಟ್ಟಿದೆ. ಇಲ್ಲಿ ಕವಿತೆ ಗಂಭೀರವಾದ ಚಿಂತನೆಯನ್ನು ಒಡಮೂಡಿಸುತ್ತದೆ. ಎಲ್ಲಾ ಕಡೆಯೂ ಕಸವೇ ಬಿದ್ದಿರುವಾಗ ಸ್ವಚ್ಛತೆಯನ್ನು ಹೇಗೆ ಬಯಸುವುದು?. ಶುದ್ಧ ಎಂದುಕೊಂಡ ಕಡೆಯಲ್ಲ ಅಶುದ್ಧತೆಯೆ ತುಂಬಿರುವಾಗ ಸ್ವಸ್ಥತೆಯನ್ನು ಬಯಸುವುದಾದರೂ ಹೇಗೆ ಎಂಬ ಪ್ರಶ್ನಾತೀತ ನಿಲುವನ್ನು ಕವಿತೆ ವ್ಯಕ್ತಪಡಿಸುತ್ತದೆ.
"ನೂರು ಸಾಸಿರ ಕಾಲ ಬದುಕಿ ಕೊಂಡವರ ದಾರಿಗೆ
ಮುಳ್ಳು ಹಚ್ಚಿದವರೂ ಉಳಿದಿಲ್ಲ ಎಲ್ಲೂ,
ನಿಮ್ಮ ಮನಸ್ಸಲ್ಲಷ್ಟು ಜಾಗ ಕೊಡಿ
ಶಾಂತಿ ಬೀಜಗಳ ಊರಿ ಸಂಭ್ರಮಿಸುವೆ".
ಏನಿದ್ದರೇನಂತೆ ಕೊನೆಗೆ ಉಳಿಯುವುದು ಮೂರಡಿ,ಆರಡಿ ಎಂಬ ಸತ್ಯವು ಮನುಷ್ಯನಿಗೆ ಅರಿವಾಗುವುದರೊಳಗೆ ತನ್ನತನವನ್ನು ಸ್ವಾರ್ಥತೆಗೆ ಮಾರಿಕೊಳ್ಳುತ್ತದೆ. ಆದರೆ ಇಲ್ಲಿ ಕವಿ ಶಾಂತಿಯ ಬೀಜವನ್ನು ಬಿತ್ತಲು ಹೊರಟು, ವಿಶ್ವ ಮಾನವತೆಗೆ ಮುನ್ನುಡಿ ಬರೆಯುತ್ತಿದ್ದಾರೆ.ಈ ನೆಲದ ಮಣ್ಣು ಮನಸ್ಸು ಕಲುಷಿತಗೊಂಡಿರುವುದರ ವಿರುದ್ಧ ಕವಿಮನಸ್ಸು ಸಿಡಿದೆದ್ದು ಕಿಂಚಿತ್ತು ಕೈ ಮುಷ್ಟಿ ಅಗಲ ಜಾಗ ಕೊಡಿ, ಅಲ್ಲಿ ಶಾಂತಿಯ ಮಂತ್ರವನ್ನು ನಾನು ಬಿತ್ತುತ್ತೇನೆ. ಈ ಹೊಡೆದಾಟ ಕಚ್ಚಾಟ ಅಧರ್ಮ ದುಷ್ಕರ್ಮ, ಅಸತ್ಯ ಅನ್ಯಾಯಗಳ ಕೊಳಕನ್ನು ಕಿತ್ತೆಸೆದು ಶಾಂತಿಯ ಬೀಜವನ್ನು ಬಿತ್ತಿ,ಇದರ ಮೂಲಕ ಸಮತಾವಾದದ ನೆಲೆಗಟ್ಟಿಗೆ ತರಲು ಮನಸ್ಸು ಹಾತೊರೆಯುತ್ತಿದೆ. ರಾಮಾಯಣದಿಂದ ಮಹಾಭಾರತ, ಇಂದಿನವರೆಗೂ ನಾವು ಹಿನ್ನೋಟವನ್ನು ಬೀರಿದಾಗ ನಮಗೆ ಸಿಗುವುದು ಕೇವಲ ಪಾತ್ರಚಿತ್ರಣಗಳು ಅಷ್ಟೇ ವಿನಹ, ಈ ನೆಲ ಯಾರನ್ನು ಉಳಿಸಿಕೊಂಡಿಲ್ಲ.ತನ್ನ ಗರ್ಭದೊಳಗೆ ಸೇರಿಸಿಕೊಂಡಿದೆ. ಹಾಗಿದ್ದ ಮೇಲೆ ಶಾಂತಿ ಬೀಜಗಳ ಬಿತ್ತಿ ಸಂಭ್ರಮಿಸಿ ಹೋಗುವುದರಲ್ಲಿ ತಪ್ಪೇನು? ಎಂಬಂತಹ ಮಾರ್ಮಿಕ ಮಾತುಗಳು ಸಹೃದಯನ ಎದೆಬಡಿತಕ್ಕೆ ಒಮ್ಮೆಲೆ ತಾಗಿ ಚಕಿತರನ್ನಾಗಿ ಮಾಡಿಸುತ್ತದೆ.
"ನನ್ನ ಚೆಲುವನಷ್ಟೆ
ನನಗೆ ಒಪ್ಪಿಸುವ ಕನ್ನಡಿಯೇ ಒಂದಿಷ್ಟು ಕಾಲ ವಿರಮಿಸು
ಮನದ ಕನ್ನಡಿಯ ಆಹ್ವಾನಿಸಿದ್ದೇನೆ ನೋಡಿಕೊಳ್ಳಬೇಕು ಸರಿ-ತಪ್ಪುಗಳ ಲೆಕ್ಕ".
ಬಹುಶಃ ಪ್ರತಿಯೊಬ್ಬ ಮಾನವರು ತಮ್ಮನ್ನು ತಾವು ಸ್ವವಿಮರ್ಶೆಗೆ ಒಳಪಡಿಸಿಕೊಂಡಾಗ ಮನುಷ್ಯರಲ್ಲಿ ಆಗಿರುವ ಸರಿತಪ್ಪುಗಳ ಲೆಕ್ಕವನ್ನು ತುಲನೆಮಾಡಬಹುದು.ನಮ್ಮ ತಪ್ಪುಗಳನ್ನು ವಿಮರ್ಶೆ ಮಾಡಿಕೊಳ್ಳುತ್ತಾ ಸಾಗಿ,ಆತ್ಮಾನುಸಂದಾನ ಕ್ಕೊಳಪಡಿಸಿದಾಗ, ಅನುಭವದ ಮೂಟೆಯು ವಿಸ್ತಾರಗೊಳ್ಳುತ್ತದೆ.ಇಲ್ಲಿ ಕವಿಯು ತನ್ನನ್ನು ತಾನು ತೆರೆದುಕೊಂಡಿರುವ ಆಳ ಅಗಲ ವಿಸ್ತಾರತೆಯ ಒಳ ಹರಿವನ್ನು ವಿವರಿಸಲು ಸಾಧ್ಯವೇ? ಖಂಡಿತ ಇಲ್ಲ. ಇದಕ್ಕಿಂತ ಆತ್ಮವಿಮರ್ಶೆಯ ಪರಿದಿಯ ವಿಸ್ತಾರತೆಯನ್ನು ನಿರೀಕ್ಷಿಸಿದರೆ ತಪ್ಪಾಗುತ್ತದೆ.ಕೇವಲ ಜೊಳ್ಳು ಸುಳ್ಳು ಪೊಳ್ಳು ಕಾಳಾಗದೆ,ಕಷ್ಟಸುಖ ನೋವು ನಲಿವೆಂಬ ನೀರಿನಲ್ಲಿ ನೆಂದು ಅನುಭವವೆಂಬ ಮೂಟೆಯಲ್ಲಿ ಬಲಿತು ಪಕ್ವಗೊಂಡು ಮೊಳಕೆಯೊಡೆದು ಕಾಳಾಗಿರುವ ಕವಿತೆಯು ಅವರಿಂದ ಹೊರಬಂದು ಸ್ಪಷ್ಟ ದಾರಿಯಲ್ಲಿ ಸಾಗುತ್ತಿರುವುದು ಸಹೃದಯರ ಪಾಲಿಗೆ ಅದೃಷ್ಟವೇ ಸರಿ ಎನ್ನಬಹುದು.
"ಯಾವ ಹಾಡಲ್ಲೂ
ಹೃದಯದಲ್ಲಿ ಅದ್ದಿ ತೆಗೆದ ಪದಗಳಿಲ್ಲದೆ
ರಕ್ತ ಕಾರುವ ಭಾವಗಳ ನಾಗಾಲೋಟಕ್ಕೆ
ತತ್ತರಿಸಿ ಹೋಗದೆ ಶಾಂತಿ ಬೀಜಗಳ ಜತನವಾಗಿಟ್ಟುಕೊಳ್ಳಬೇಕೆಂದದ್ದೇನೆ".
ಈ ಮೇಲಿನ ಸಾಲನ್ನು ದಿಟ್ಟಿಸಿದಾಗ,ಇತಿಹಾಸದ ಪುಟಗಳನ್ನು ತೆರೆದಾಗಲೆಲ್ಲ ಇಂತಹ ಶಾಂತಿ ಬೀಜಮಂತ್ರಗಳು ನಮಗೆ ಕಾಣುತ್ತವೆ. ಬುದ್ಧ ಗಾಂಧಿಯ ಶಾಂತಿ ಮಂತ್ರಗಳಂತೆ,
"ಎಲ್ಲರೂ ಖರೀದಿಗೆ ನಿಂತಿದ್ದಾರೆ
ಮಲಗಿದವರ ಕನಸುಗಳಿಗೆ ಬೆಂಕಿಹಚ್ಚಿ"
ಇಂತಹ ಸಾಲುಗಳು ಕಾವ್ಯದ ಒಳದನಿಯನ್ನು ಸಮರ್ಥವಾಗಿ ಎತ್ತಿ ಹಿಡಿಯುತ್ತವೆ.
ಆದರೆ ಇದು ಇಂದು ನೆನ್ನೆಯ ವಿಚಾರವಲ್ಲ ಅನಾದಿಕಾಲದಿಂದಲೂ ದುಷ್ಟ ಶಿಷ್ಟ ವಿಚಾರಧಾರೆಗಳು ಆಗಿಂದಾಗೆ ಹಣಾಹಣಿಗೆ ಒಳಗಾಗುತ್ತಲೇ ಇರುತ್ತವೆ.
ದುರ್ಮಾರ್ಗಿಗಳು ಅನ್ಯಾಯವನ್ನು ಮಾಡುತ್ತಲೇ ಸಾಗುತ್ತಾರೆ. ನೋವು ಅಸಹನೆಯನ್ನು ನುಂಗಿಕೊಂಡು ಬದುಕುವ ಅದೆಷ್ಟೋ ಬವಣೆಯ ಜೀವಗಳನ್ನು ಇಂದಿಗೂ ನೋಡುತ್ತಲೇ ಬರುತ್ತಿದ್ದೇವೆ. ಸದಾ ಉಳ್ಳವರ ದರ್ಪಕ್ಕೆ ನಲುಗುವ ಜೀವಗಳು ಧರೆಗೆ ಜೀವ ತೇಯುತ್ತಾರೆ. ಅಂಥವರ ಕನಸುಗಳಿಗೆ ಬೆಂಕಿ ಹಚ್ಚಿ,ಆ ಬೆಂಕಿಯಲ್ಲಿ ಚಳಿಯನ್ನು ಕಾಯಿಸಿಕೊಂಡು ಮೈ ಬೆಚ್ಚಗಾಗಿಸಿ ಕೊಳ್ಳುವ ದುಷ್ಟತೆ ಇಂದಿನ ಸಮಾಜದಲ್ಲಿ ಪರಾಕಾಷ್ಟೆಗೆ ಏರಿರುವುದು ದುರಂತವೇ ಸರಿ.
ಇಂತಹ ಮನಸ್ಥಿತಿಗಳ ವಿರುದ್ಧ ಕವಿಭಾವ ಮುಕ್ತವಾಗಿ ಧ್ವನಿಸಿರುವುದು ಕವಿತೆಯ ಮೆರಗನ್ನು ಇಮ್ಮಡಿ ಗೊಳಿಸಿದೆ.
ನೋಡಲಷ್ಟೇ ಇವರ ಕವಿತೆ ಸಂಕ್ಷಿಪ್ತ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತಿದೆ ಅನಿಸುತ್ತದೆ. ಆದರೆ ನಿಜವಾದ ವಸ್ತು ವಿಷಯ ಅದಲ್ಲ. ಕವಿತೆಯ ಆಳ-ಅಗಲ ಒಳಹರಿವಿಗೆ ತೆರೆದುಕೊಂಡಂತೆ, ಕವಿ ಭಾವದ ಆಳಕ್ಕೆ ಇಳಿಯುತ್ತಾ ಹೋದಂತೆ,ಮತ್ತಷ್ಟು ಮಗದಷ್ಟು ಕಾವ್ಯದ ಜೀವಜಲದ ಹೂರಣ ಸಿಗುತ್ತಲೇ ಹೋಗುತ್ತದೆ. ಇದೇ ಖಾಡೆಯವರ ಕವಿತೆಗಳ ನಿಜವಾದ ತಾಕತ್ತು ಎನ್ನ ಬಹುದು. ಸದಾ ಜಿಜ್ಞಾಸೆಗೆ ಒಳಪಡಿಸುತ್ತದೆ ಸಹೃದಯರನ್ನು, ಮತ್ತೆ ಮತ್ತೆ ಓದುವಂತೆ ಕಾಡಿಸುತ್ತದೆ ಪೀಡಿಸುತ್ತದೆ. ಹೃದಯಮಂದಿರದಲ್ಲಿ ತಳಮಳವನ್ನು ಹುಟ್ಟುಹಾಕುತ್ತದೆ ಚಿಂತನೆಗೆ ಒರೆಹಚ್ಚಿ ಮೌನಿಯಾಗಿ ಧ್ಯಾನಿಸುವಂತೆ ಮಾಡುತ್ತದೆ.
ಹಾಗಾದರೆ ಒಂದು ಕವಿತೆ ಅಥವಾ ಕಾವ್ಯ ಗೆಲ್ಲಲು ಏನುಬೇಕು? ಸದಾ ಸಹೃದಯರ ಹೃದಯಮಂಡಲದಲ್ಲಿ ವಿರಾಜಮಾನವಾಗಿರಲು ಕೇವಲ ಶಬ್ದಸಂಪತ್ತು ಒಂದಿದ್ದರೆ ಸಾಕು.ಪ್ರತಿಭೆಯೊಂದಿದ್ದರೆ ಸಾಕು ಎನ್ನುವವರಿಗೆ ಇವರ ಸಾಹಿತ್ಯ ಮಾದರಿಯಾಗಿ ನಿಲ್ಲುತ್ತದೆ.ಶಬ್ದಸಂಪತ್ತು ಪ್ರತಿಭೆ ಇದ್ದರಷ್ಟೆ ಸಾಲದು ಕಾವ್ಯ ರಚನೆಗೆ.ಅದರ ಜೊತೆ ಜೊತೆಯಲ್ಲಿಯೇ ಮಿಮಾಂಸಕನಾದ ರಾಜಶೇಖರನು ಹೇಳುವ ಆ ಎಂಟು ಅಂಶಗಳು ಸಹ ಬೇಕಾಗುತ್ತದೆ.
ಕವಿ ಇಂದು ಸಾಯಬಹುದು ಆದರೆ ಕಾವ್ಯ ಸಾಯಬಾರದು. ಸಾಯಲಾರದಂತಹ ಕಾವ್ಯ ರಚನೆ ಮಾಡಿದಾಗಷ್ಟೇ ಕವಿಗೆ ಬೆಲೆ ನೆಲೆ ಮೌಲ್ಯ ದೊರಕುತ್ತದೆ.
ಇಂದಿಗೂ ಸಹ ವ್ಯಾಸ ವಾಲ್ಮೀಕಿ,ಭಾಸ ,ಕಾಳಿದಾಸ, ಪಂಪ, ಶೇಕ್ಸಪಿಯರ್ ಹೋಮರ್, ಇಂತಹ ಬಹಳಷ್ಟು ಮಹನೀಯರು ನಮ್ಮ ಮನದಂಗಳದಲ್ಲಿ ನೆಲೆ ನಿಂತಿದ್ದಾರೆ. ಕಾರಣ
"ಕವಿ ತೆರೆದ ಕಣ್ಣಿನಿಂದ ಪರಿಶೀಲಿಸ ಬಲ್ಲವನಾಗಿರಬೇಕು. ತನ್ನ ಕಾಲ ದೇಶ ಪರಿಮಿತಿಯಿಂದ ಪಾರಾಗಬಲ್ಲವನು ಆಗಿರಬೇಕು. ಒಳಿತು-ಕೆಡುಕುಗಳ ಅಂತಃಸತ್ವವನ್ನು, ತಾರತಮ್ಯಗಳ ಜ್ಞಾನವನ್ನು ಅರಗಿಸಿಕೊಳ್ಳಬಲ್ಲವನಾಗಿರಬೇಕು.ತನ್ನ ಕಾಲದ ಸಂಕುಚಿತ ನಿಯಮ ನಿಬಂಧನೆಗಳನ್ನು ಮೀರಿ ಸಾರ್ವಕಾಲಿಕವಾದ ಅನೇಕ ಸತ್ಯಗಳನ್ನು ಅಬಾಧಿತವಾದ ಸ್ಥಿತಿಯಲ್ಲಿ ಕಂಡುಕೊಳ್ಳುವ ಅಂತರ್ದೃಷ್ಟಿಯುಳ್ಳವನಾಗಿರಬೇಕು" ಎಂಬ "ಡಾ.ಜಾನ್ಸನ್" ಅವರ ಮಾತುಗಳು ಕವಿಯ ಪರಿಧಿಯನ್ನು ಬಹಳ ಸೂಕ್ಷ್ಮವಾಗಿ ಕಟ್ಟಿ ಕೊಡುತ್ತವೆ. ನಿಟ್ಟಿನಲ್ಲಿ ಖಾಡೆಯವರ ಕವಿತೆಗಳನ್ನು ತೌಲನಿಕವಾಗಿ ವಿವೇಚಿಸಿದಾಗ ಸಾರ್ವಕಾಲಿಕ ವಾಗಿರುವ ಮೌಲ್ಯತೆಯನ್ನು ಹೊಂದಿರುವ ಕವಿತೆಗಳು ಬಿತ್ತರಗೊಂಡಿರುವುದು ಕಂಡುಬರುತ್ತದೆ. ನವೋದಯವು ಅಲ್ಲದೆ ನವ್ಯವು ಅಲ್ಲದೆ, ಒಮ್ಮೊಮ್ಮೆ ಬಂಡಾಯದ ಕಹಳೆಯನ್ನು ಊದಿದರೆ ಮತ್ತೊಮ್ಮೆ ಭಾವ ಮಗ್ನತೆಯಲ್ಲಿ ತಲ್ಲೀನರಾಗಿ ಭಾವಸಾಂದ್ರತೆಗೊಳಪಟ್ಟಿರುವು ಕಂಡುಬರುತ್ತದೆ.
ಅವರ ಸಾಹಿತ್ಯದಲ್ಲಿ ಎಲ್ಲಿಯೂ ಏಕತಾನತೆ ಕಂಡುಬರುವುದಿಲ್ಲ. ಒತ್ತಾಯಪೂರ್ವಕವಾಗಿ ಶಬ್ದ ಭಂಡಾರವನ್ನು ತುರುಕುವ ಕೆಲಸ ಇಲ್ಲವೆ ಇಲ್ಲ. ಒಮ್ಮೊಮ್ಮೆ ಹೇಳಿಕೆ ಅನಿಸಿದರೂ ಸಹ ಕೊನೆಗೆ ಕೊಡುವ ಒಂದು ಪಂಚಿಂಗ್ ಸಾಲು ಇಡೀ ಕಾವ್ಯದ ತೂಕವನ್ನು ಎತ್ತಿಹಿಡಿದಿದೆ. ಬಹಳ ಮುಖ್ಯವಾಗಿ ಗಮನಿಸಿರುವಂತಹದ್ದು ಪ್ರತಿ ಕವಿತೆಯ ಮೊದಲ ಸಾಲುಗಳು ಶೀರ್ಷಿಕೆಯಾಗಿ ಕಂಡು ಬಂದಿರುವುದು ವಿಶೇಷ. ಸಮಾಜಕ್ಕೆ ಬೀಸಿದ ಚಾಟಿಯಲ್ಲಿ ವ್ಯಂಗ್ಯಾರ್ಥವು ಅಡಕವಾಗಿದ್ದು ಕಾವ್ಯದ ಇನ್ನೊಂದು ಮಗ್ಗಲನ್ನು ಪರಿಚಯಿಸುತ್ತದೆ. ಪ್ರಾದೇಶಿಕ ಭಾಷೆಯನ್ನು ಸಮರ್ಥವಾಗಿ ದುಡಿಸಿಕೊಂಡಿರುವುದು ಮತ್ತು ಕೆಲವು ಕಡೆ ಮೂಡಿದ ವಾಚ್ಯಾರ್ಥವು ಸೂಚ್ಯವಾಗಿ ಕಾವ್ಯದ ಸೊಗಡನ್ನು ಹೆಚ್ಚಿಸಲು ಕಾರಣವಾಗಿದೆ. ಯಾವೊಂದು ಸಾಹಿತ್ಯದ ಘಟ್ಟಗಳಿಗೆ ಒಳಗಾಗದೆ ತಮ್ಮದೇ ಆದ ಒಂದು ವಿಶಿಷ್ಟ ದಾಟಿಯನ್ನು ಇರಿಸಿರುವುದು ಅವರ ಪ್ರತಿ ಕವಿತೆಯ ಸಾಲುಗಳಲ್ಲಿ ಗೋಚರಿಸುತ್ತದೆ.
ಅವ್ವ, ನ್ಯಾಯ, ನೀತಿ, ಧರ್ಮ, ಕರ್ಮ, ಆಚಾರ-ವಿಚಾರ ನಲಿವು ಚಲನೆ, ಗೆಲುವು, ಕಾಲ, ಅಳಿವು, ದ್ವೇಷ, ಗುರು, ಅಕ್ಷರ, ಪ್ರಕೃತಿ, ಹೀಗೆ ಸಾಲು ಸಾಲು ವಸ್ತು ವೈವಿಧ್ಯಮಯ ವಿಚಾರಗಳನ್ನಿರಸಿ ಕವಿತೆಯ ಹೊರಬಂದಿರುವುದರಿಂದ ಓದುಗರನ್ನು ತಮ್ಮತ್ತ ಸೆಳೆಯುತ್ತವೆ
ಆನಂದವರ್ಧನ ಹೇಳಿರುವಂತೆ,
"ಅಪಾರೇ ಕಾವ್ಯಸಂಸಾರೇ ಕವಿರೇವ ಪ್ರಹಾಪತಿಃ
ಯಥಾಸ್ಮೈ ರೋಚತೇ ವಿಶ್ವಂ ತಥೇವಂ ಪರಿವರ್ತತೇ" ಎಂಬಂತೆ ಅಪಾರವಾದ ಕಾವ್ಯ ಸಂಸಾರದಲ್ಲಿ ಕವಿಯೇ ಬ್ರಹ್ಮ ಅವನ ಇಷ್ಟದಂತೆ ಇಡೀ ವಿಶ್ವವೇ ಪರಿವರ್ತನೆಯನ್ನು ಪಡೆಯುತ್ತದೆ ಎಂಬಂತೆ ಕವಿಗಳಾದ ಖಾಡೆಯವರು ತಮ್ಮದೇ ಆದ ವಿಶಿಷ್ಟ ಛಾಪನ್ನು ಕನ್ನಡ ಸಾಹಿತ್ಯಲೋಕದಲ್ಲಿ ಮೂಡಿಸಿ ಸಾಗುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಈ ನಿಟ್ಟಿನಲ್ಲಿ ಮತ್ತಷ್ಟು ಸಾಹಿತ್ಯ‌ ಕೃಷಿ ಅವರಿಂದ ನಡೆದು, ಕನ್ನಡ ಸಾರಸ್ವತ ಲೋಕಕ್ಕೆ ಮಗದಷ್ಟು ಕೃತಿಗಳು ಅವರಿಂದ ಅರ್ಪಣೆ ಅಗಲಿ ಎಂದು ಈ ಮೂಲಕ‌ ಹಾರೈಸುತ್ತೇನೆ.
- ವಾಣಿ ಭಂಡಾರಿ

Shivaratri -Dr.Prakash Khade

 ಶಿವರಾತ್ರಿ ವಿಶೇಷ ಲೇಖನ   : ಜನಪದರ ಹಾಡುಗಳಲ್ಲಿ ಶಿವರಾತ್ರಿ :  -ಡಾ.ಪ್ರಕಾಶ ಗ. ಖಾಡೆ,    ಬಾಗಲಕೋಟ ಮೊ. 9845500890    ಭಾರತೀಯ ಸಂಸ್ಕøತಿಯ ಬೇರುಗಳು ನಮ್ಮ ಜನಪದರ...