Saturday, January 14, 2023

ಡಾ ಪ್ರಕಾಶ ಖಾಡೆಯವರ "ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ" - ಡಾ.ಯ.ಮಾ.ಯಾಕೊಳ್ಳಿ,

ಮುತ್ತಿನ ಹನಿಗಳ ಸಂಗ್ರಹ ‘ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ’









ಡಾ ಪ್ರಕಾಶ ಖಾಡೆಯವರ "ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ" ಪದ್ಯ ಸಂಕಲನದ ಕುರಿತು ಡಾ.ಯ.ಮಾ.ಯಾಕೊಳ್ಳಿ, ಸವದತ್ತಿ ಅವರು ಬರೆದ ವಿಮರ್ಶೆ ನಿಮ್ಮ ಓದಿಗಾಗಿ...

ಖಾಲಿಯಾಗದ
ಒರತೆ
ಒಡನಿರುವ
ಕವಿತೆ
ಎಂದು ನಂಬಿ ಬರೆಯುತ್ತಿರುವ ಕವಿ ಬಾಗಲಕೋಟೆಯ ಡಾ.ಪ್ರಕಾಶ ಖಾಡೆಯವರು. ಅವರು ಸಂಶೋಧನೆ ವಿಮರ್ಶೆ ,ಜಾನಪದ,ಸಂಪಾದನೆ ಇತ್ಯಾದಿ ಹಲವು ಪ್ರಕಾರಗಳಲ್ಲಿ ಕೃತಿ ರಚನೆ ಮಾಡಿದ್ದರೂ ಮುಖ್ಯವಾಗಿ ಕವಿಗಳು ಎಂಬುದನ್ನು ಮರೆಯಲಾಗದು.ಕವಿತೆಯನ್ನು ತುಂಬ ಗಂಭೀರವಾಗಿ ತಗೆದುಕೊಂಡಿರುವ ಡಾ.ಖಾಡೆ ಯವರು ಇತ್ತಿಚೆಗಂತೂ ತುಂಬ ಸಾಮಾಜಿಕ ಜಾಲತಾಣ ದಲ್ಲಿ ಸಕ್ರೀಯವಾಗಿದ್ದಾರೆ‌.

ಅಂತರ್ಜಾಲದ ಬ್ಲಾಗ್, ಪೇಸ್ಬುಕ್ ಮೊದಲಾದ ಮಾಧ್ಯಮಗಳಲ್ಲಿ ನಿತ್ಯವೂ ಬರೆಯುತ್ತಿರುವ ಈ ಕವಿ ಬರೆದಿರುವ ಚೆಂದನೆಯ 306 ಹನಿಗಳನ್ನು ಸಂಗ್ರಹಿಸಿ "ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ "ಎಂಬ ಸುಂದರ ಸಂಕಲನವನ್ನು 2019 ರಲ್ಲಿಯೆ ಬಾಗಲಕೋಟೆಯ ಅನಿಕೇತ ಪ್ರಕಾಶನದಿಂದ ಹೊರತಂದಿದ್ದಾರೆ.

ಇವು ಹನಿಗವಿತೆಗಳೇ?,ಮಿನಿಗವಿತೆಗಳೇ? ಚುಟುಕುಗಳೇ ? ಏನು ಎಂಬುದನ್ನು ಹೇಳುವದು ಕಷ್ಟದ ಕೆಲಸ .ಆದರೆ ಕವಿತೆಗಳೆಂಬುದು ಮಾತ್ರ ನೂರಕ್ಕೆ ನೂರು ನಿಜ.ಇಲ್ಲಿ ಏನೆಲ್ಲ ಸಮಾಹಿತವಾಗಿದೆ ಎನ್ನುವದನ್ನು ಮುನ್ನುಡಿ ಬರೆದ ವಿಮರ್ಶಕ ಗೆಳೆಯ ರಾಗಂ ಅವರು‌
-" ಇಂಗ್ಲೀಷಿನ‌ ಮೆಟಾಪಿಜಿಕಲ್ ,ಚೈನಾ ಝೆನ್,ಜಪಾನಿನ ಹಾಯ್ಕು,ಭಾರತದ ದೋಹೆಗಳ ಒಟ್ಟು ಶ್ರಮವನ್ನು ಸೌಂದರ್ಯವನ್ನು ಗರ್ಭೀಕರಿಸಿಕೊಂಡ ನುಡಿಕಿಡಿಗಳು" ಎಂದು ವ್ಯಾಖ್ಯಾನಿಸಿದ್ದಾರೆ.

ಈ ಸಂಕಲನವನ್ನು ತಂದುದರ ಹಿಂದಿನ ಉದ್ದೇಶವನ್ನುಸ್ವತಃ ಕವಿಯೆ - ಈ ಫೇಸ್ ಬುಕ್‌ಎಂಬ ಮಾಯೆ ನಿಜವಾಗಿಯೂ ನನ್ನಲ್ಲಿ ಹಲವು ಭಾವಗಳ ರೆಕ್ಕೆಗೆ ಆಡುಂಬೋಲವಾಯಿತು.ಪದ್ಯಗಳ ಹುಟ್ಟಿಗೆ ಹರವಿಕೊಂಡ ಭಿತ್ತಿಯಾಯಿತು.ದೇಶ ವಿದೇಶಗಳಲ್ಲಿ‌ಕನ್ನಡದ ಜನ ಓದಿ ,ಸಂಭ್ರಮಿಸಿ ಹಂಚಿಕೊಂಡ ಒಡಲಾಳದ ಮಿಡಿತಗಳೇ ನನ್ನೊಳಗೆ ನಿತ್ಯವೂ ಪದ್ಯಗಳ ಹೊಸೆವ ನವಿರತೆಗೆ ಸಾಕ್ಷಿಯಾಯಿತು.ಹೀಗೆ ನಿತ್ಯ ಹುಟ್ಟಿಕೊಂಡ ಪದ್ಯಗಳ ಸೂಡು ಕಟ್ಟಿ ಒಟ್ಟಿಗೆ ಈ ಸಂಕಲನ ಮೂಲಕ ತಮಗೆ ಒಪಗಪಿಸುತ್ತಿದ್ದೇನೆ" ಎಂದು ನಿವೇದಿಸಿಕೊಂಡಿರು ವದರಲ್ಲಿ ಅವರ ಉದ್ದೇಶ ಸ್ಪಷ್ಟವಾಗಿದೆ.ಇಲ್ಲಿನ ಕವಿತೆಗಳ ವ್ಯಾಪ್ತಿ ಮೂರು ಸಾಲಿನಿಂದ ಆರು ಸಾಲುಗಳವರೆಗಿದೆ.ಆದರೆ ಹೆಚ್ಚಿನ ಚುಟುಕುಗಳು ನಾಲ್ಕು ಸಾಲಿನಲ್ಲಿಯೇ ಇರುವದು ವಿಶೇಷ.

ಈ‌ ನಾಲ್ಕು ಸಾಲಿನ ನುಡಿಗಳ ವ್ಯಾಪ್ತಿ "ಹಿಡಿದರೆ ಹಿಡಿ ತುಂಬ ಬಿಟ್ಟರೆ ಜಗ ತುಂಬ" ಎನ್ನುವ ರೀತಿಯದ್ದು.ನಾಲ್ಕು ಸಾಲಿನ ಪದ್ಯವನ್ನು ವಿಸ್ತರಿಸ ಹೋಗುವದು ಕಷ್ಟಕರವೇ‌ .ವಿಸ್ತರಿಸದಿದ್ದರೂ ಕಷ್ಟವೇ ಎನ್ನುವ ಸಂಕಷ್ಟ ನಮ್ಮಂತಹ ಓದುಗರದ್ದು. ಈ‌ ಕವಿತೆಗಳಿಗೆ ನಮಗೆ ಗೊತ್ತಿಲ್ಲದಂತೆಯೆ ಜಗತ್ತಿನ ತುಂಬಾ ಓದುಗರಿರುತ್ತಾರೆ.ನಮಗರಿವಿಲ್ಲದಂತೆಯೇ ಓದಿ ಪ್ರೇರಣೆ ಪಡೆದವರಿರುತ್ತಾರೆ.ಲೈಕ್ ಮಾಡುವ ಕಾಮೆಂಟ್ ಮಾಡುವ ಕೆಲವರನ್ನು ಬಿಟ್ಟರೂ ಓದಿ ಸುಮ್ಮನೆ ಇರುವವವರ ಸಂಖ್ಯೆ ಸಾವಿರಾರು.ಆದರೆ ಪೇಸ್ ಬುಕ್ಕಿನಲ್ಲಿ ಬರುವ‌ ಲೈಕು‌,ಕಾಮೆಂಟುಗಳು‌ ಪುಕ್ಕಟೆ ಸಿಗಲಾರವು.ಅಲ್ಲಿ ಓದಿ ಸ್ಪಂದಿಸಿರುವಲ್ಲಿ ಒಂದು‌ ಕಾವ್ಯ‌ಪ್ರಿಯ ಮನಸ್ಸು‌ ಇರುತ್ತದೆ ಎಂಬುದಕ್ಕೆ

ಪ್ರತಿ‌ ಲೈಕಿನ
ಜೊತೆಗೆ ಒಂದು
ಜೀವ ಮಿಡಿತದ
ಉಸಿರಿದೆ

ಎಂಬ ಸಾಲುಗಳೇ ಸಾಕ್ಷಿ. ಇಂದು‌ ಕವಿತೆಯನ್ನು ಓದುವ,ಸ್ಪಂದಿಸುವ ರೀತಿ ಕೂಡ ಭಿನ್ನವಾಗಿದೆ ಎನ್ನುವದನ್ನು‌ ಈ ಕಾಲದ ಕವಿಗಳು ಅರಿಯುವದು ಅನಿವಾರ್ಯವಾಗಿದೆ.
ಇಲ್ಲಿನ ಹನಿಗಳಲ್ಲಿ ಓದಿದೊಡನೆ ಖುಷಿ ಕೊಡುವ ಹಲವಾರು ಪದ್ಯಗಳಿವೆ. ನಮ್ಮ‌ ಮನದಲ್ಲಿ ಒಂದು ಬಗೆಯ ಬೆಳಕು ಜಗ್ಗೆಂದು ಹೊತ್ತಿ ಪ್ರಕಾಶ ಬೀರಿ ಒಂದು ಸಮಾಧಾನ ನೆಮ್ಮದಿ,ಮೂಡುತ್ತದೆ. ದೀರ್ಘ‌ ಕವಿತೆಯೆ ಇರಲಿ ಚುಟುಕು ಕಾವ್ಯವೇ ಇರಲಿ ಓದುಗನಲ್ಲಿ ಮೂಡುವ ಈ ಸಂತೃಪ್ತಿಯೇ ಕಾವ್ಯದ ಅಂತಿಮ ಉದ್ದೇಶ. ಇದನ್ನೆ ವರಕವಿ ಬೇಂದ್ರೆ‌ 'ಕಲ್ಲು ಸಕ್ಕರೆಯಂತಹ ಎದೆಯು‌ ಕರಗಿ ನೀರಾಗಿ ಹರಿಯುವದು 'ಎಂದಿದ್ದರು.ಅಂತಹ ಸಂತೃಪ್ತ ಭಾವ ಇಲ್ಲಿನ ಅನೇಕ ಪದ್ಯಗಳನ್ನು ಓದಿದಾಗ‌ ಖಂಡಿತ ಆಗುತ್ತದೆ. ಉದಾಹರಣೆಗೆ ಗಮನಿಸುವದಾದರೆ

ಅಗಳು
ಹುಡುಕಿಕೊಂಡು
ಬಂದ ಕಾಗೆ ;
ಬಳಗ ಕಟ್ಟಿಕೊಂಡಿತು

ಈಜಿ
ಜಯಿಸಿದವರು ;
ಮೈಲುಗಲ್ಲುಗಳ
ನೆಟ್ಟರು

ಇಂಥ ಹನಿಗಳನ್ನು ಓದಿದಾಗ ಆಗುವ ಸಂತೋಷ ಬಣ್ಣನೆಗೆ ನಿಲುಕದ್ದು.

ಕವಿ ವರ್ಡ್ಸವರ್ಥ್ Our sweetest songs are those ,which are our saddest thoughts "ದುಃಖದ ಮನಸ್ಸುಗಳ ಭಾವ ದೀಪ್ತಿ‌ ಮಾತ್ರ ಸುಂದರ ಕಾವ್ಯವಾಗಬಹುದು" ಎಂದಿದ್ದ ಮಾತು ಎಲ್ಲ ಕಾಲದ ಸತ್ಯವೇ .ನೋವಿನ ತೀವ್ರತೆ ಮಾತ್ರ ಉತ್ತಮ ಕಾವ್ಯ ಸೃಷ್ಟಿಸಬಲ್ಲುದು.ನೋವು ಕಡಿಮೆಯಾದಂತೆ ,ಕಾವ್ಯ ಕರಗುತ್ತಾ ಹೋಗುತ್ತದೆ ಎನ್ನುತ್ತಾರೆ ಒಂದು‌ ಹನಿಯಲ್ಲಿ

ಗಾಯದ ನೋವು
ಮಾಯುತ್ತಾ ಬಂದಂತೆ ;
ಕವಿತೆ ಕರಗುತ್ತಾ ಹೋಗುತ್ತದೆ

ಎನ್ನುತ್ತಾರೆ‌.ಅವರ ಕವಿತೆಗಳಲ್ಲಿರುವ ನವಿರಾದ ಭಾವಕ್ಕೆ ಉದಾಹರಣೆ ಈ ಕೆಳಗಿನ ಸಾಲು

ಮಗು‌
ಮಲಗಿತು ಎಂದಳು ;
ಲಾಲಿ ಹಾಡು
ಬದಲಿಸು ಎಂದೆ

ನಾಲ್ಕೆ ಸಾಲುಗಳ ಈ‌ ಪದ್ಯ ಒಂದು ಇಡೀ ದಾಂಪತ್ಯದ ಸವಿಯನ್ನು, ಅವರ ಮೋಹಕ ಬದುಕನ್ನು ,ಅವರ ಪ್ರೇಮವನ್ನು ಹಿಡಿದಿಟ್ಟಿರುವ ರೀತಿಯನ್ನು ವಿವರಿಸ ಹೊರಟರೆ ನಾವು‌ ಮೂರ್ಖರಾಗುತ್ತೇವೆ.
ಮೂರೇ ಮೂರು ಸಾಲಿನಲ್ಲಿ‌ ಇಡೀ ಬದುಕನ್ನೇ ಹಿಡಿದಿಟ್ಟ ಪರಿಗೆ -

ಬದುಕಿನ‌
ಪಠ್ಯದ ಹೆಸರೇ ;
ಬೇವು ಬೆಲ್ಲ

ಒಂದು ಇಡೀ ಮಹಾಕಾವ್ಯ ಸ್ಪುರಿಸುವ ಅರ್ಥವನ್ನು ಈ ಮೂರು ಸಾಲಿನ ಪದ್ಯ ಹೇಳುವದು ಕವಿಯ ಸೂಕ್ಷ್ಮದರ್ಶಿತ್ವಕ್ಕೆ ಸಾಕ್ಷಿಯಾಗಿದೆ.

ಕವಿ ಬರೀ ಸುಂದರ ಸಾಲುಗಳನ್ನು ಬರೆದು ತೃಪ್ತರಾಗುವದಿಲ್ಲ.ಅವರೊಳಗಿನ ಹೋರಾಟದ ಮನಸ್ಸು ಸಿಡಿಯುತ್ತದೆ.

ಪಲ್ಲಕ್ಕಿ‌ ಮೇಲೆ
ಕುಳಿತಿದ್ದಾರೆ ಪ್ರಭುಗಳು ;
ಹೊರುವವರಿಗಾಗಿ
ಕಾಯುತ್ತಿದ್ದಾರೆ‌ ಹಿಂಬಾಲಕರು

ಇಲ್ಕಿರುವ ವ್ಯಂಗ್ಯ ಮಾತಿಗೆ‌ ಮೀರಿದ್ದು. ಇಂದು ಪ್ರಭುಗಳನ್ನು ಹೊರಲು ಜನವೂ ಇಲ್ಲ. ಅವರಿಗಾಗಿ‌ ಕಾಯಬೇಕಾದ ಸ್ಥಿತಿ ಪ್ರಭುಗಳಿಗೆ ಬಂದೊದಗಿದೆ ಎಂಬ ಸೂಕ್ಷ್ಮ‌ವಿಡಂಬನೆ‌ ಅಲ್ಲಿದೆ . ಕವಿಯ‌ ಮನಸ್ಸು ಬಡವರನ್ನು‌,ನಿರ್ಗತಿಕರನ್ನು ಕಂಡು ಮಿಡಿಯುತ್ತದೆ.ಅಂತೆಯೇ

ಚಳಿಗೆ ನಡುಗುವ ಮಕ್ಕಳಿಗೆ
ಹೊದಿಕೆಯಾಗಲಿ ನನ್ನ ಕವನ,
ಮುದುಡಿ‌ ಮಲಗಿದ್ದ ಕಂದಮ್ಮಗಳಿಗೆ
ತಾಯ ಮಡಿಲಾಗಲಿ‌ ನನ್ನ‌ ಕವನ

ಎಂದು ಹಂಬಲಿಸುತ್ತಾರೆ.ಇಲ್ಲಿನ‌ ದೇವರು ಮಸೀದಿ ಚರ್ಚಗಳು‌,ಸ್ವಾಮಿ‌,ಬಾಬಾ,ಪಾದರ್ ಗಳು ಜಗತ್ತಿನಲ್ಲಿ ತುಂಬಿದ ಹಿಂಸೆಯನ್ನು ಕಡಿಮೆ‌ ಮಾಡುತ್ತಿಲ್ಲವಲ್ಲ ಎಂಬ‌ ವಿಷಾದ ಕಾಡಿದೆ ಕವಿಗೆ.ಅದನ್ನೆ

ಅಡಿಗಡಿಗೆ ಇವೆ ಗುಡಿಗಳು
ಚರ್ಚ ಮಸೀದಿಗಳು
ಆದರೂ ತುಂಬುತ್ತಿವೆ ಪತ್ರಿಕೆಯಲ್ಲಿ
ಅಪರಾಧ ಪುಟಗಳು

ಎಂಬ ಹನಿ ವಿವರಿಸಲು ಯತ್ನಿಸಿದೆ.ನಾವೇ ಸೃಷ್ಟಿಸಿದ ಗುಡಿ ಗುಂಡಾರಗಳು ಚರ್ಚು ಮಸೀದಿಗಳು‌ ಮಾನವೀಯತೆಯ ನಡುವೆ ಬಿರುಕು‌ ಮಾಡಿಸುವ ಕೆಲಸ ಮಾಡುತ್ತಿರುವದು ಕವಿಗೆ ಕಾಡಿದೆ. ಹಾಗಾಗಿ‌ ಕವಿಯ‌ ಮನ ಕೋಪಗೊಂಡು‌ ಇಂತಹ‌ ಆಕ್ರೋಶ‌ ಹೊರಗೆಡಹುತ್ತದೆ.

ಇಲ್ಲಿನ ಎಲ್ಲ ಮುನ್ನೂರು ಹನಿಗಳು ಶ್ರೇಷ್ಠ ಕಾವ್ಯ ವಾಗಿವೆ ಎಂದು ನನ್ನ ಅಭಿಪ್ರಾಯವಲ್ಲ.ಸುಮ್ಮನೆ ಹೊಸೆದ, ಪದದ ಕೆಳಗೆ‌ ಪದವಿಟ್ಟ ಕೆಲವು ರಚನೆಗಳು ಇರದಿದ್ದರೆ ಚೆನ್ನಿತ್ತು‌ ಎಂದು ಅನ್ನಿಸಿದ್ದು ಇದೆ.ಆದರೆ ಕವಿ ತಾಯಿಯಂತೆ .ಅವನ‌ ಕವಿತೆಗಳಲ್ಲಿ ಯಾವುದು ಶ್ರೇಷ್ಠ,? ಯಾವುದು‌ ಕನಿಷ್ಠ ಎಂದು ಆತ ಅಂತರ ಮಾಡಲಾರ .ಹಾಗಾಗಿ ಎಲ್ಲ ರಚನೆಗಳನ್ನು ಆತ ಸೇರಿಸಿ ಬಿಡುತ್ತಾನೆ. ಕವಿಯ ಪ್ರತಿ ಕವಿತೆ ಶ್ರೇಷ್ಠವಾಗಿಯೇ ತೀರುತ್ತದೆ ಎಂದೇನಿಲ್ಲ ಅದು ಕವಿಗೂ ಗೊತ್ತಿದ್ದದ್ದೇ ಆಗಿದೆ.ಅಂತೆಯೆ ಅವರೇ

ಎಲ್ಲವೂ ಕಾವ್ಯವಾಗಬೇಕಿಲ್ಲ
ಅನುಭವದ ಮೂಸೆಯಲ್ಲಿ
ಎಷ್ಟೊಂದು ಉಳಿದಿಲ್ಲ
ಮೊಳಕೆಯೊಡೆಯದ ಬೀಜ
ಭೂ ತಾಯಿಯ ಒಡಲಲ್ಲಿ

ಎಂಬ ಸಮಜಾಯಿಷಿಯನ್ನೂ ನೀಡುತ್ತಾರೆ.ಎಲ್ಲ‌ ಕವಿ ಎದುರಿಸಬೇಕಾದ ಅಗ್ನಿದಿವ್ಯವಿದು.

ಇಲ್ಲಿನ‌ ಎಲ್ಲ ಹನಿಗಳನ್ನು‌ ಉದಾಹರಿಸಬೇಕೆಂಬ‌ ಆಸೆ ನನಗೆ. ಆದರೆ ಅದು ವಿಮರ್ಶಕನ‌ ಕೆಲಸವಲ್ಲ. ಆತ ಏನಿದ್ದರೂ ತಾಯಿ‌ ಕೂಸು‌ ಹೆರುವಾಗ ದಾಯಿಯಂತೆ‌. ಇದು ಕವಿಯ ಕವಿತೆ ಎಂದು‌ ಮಾತ್ರ ತೋರಿಸಿ ದೂರ ಸರಿಯಬೇಕು.ಇನ್ನು ಕವಿತೆಯುಂಟು. ಓದುಗರಾದವ ರುಂಟು. ಇಂತಹದೊಂದು ,ನಿಮ್ಮ ಸಾರ್ಥಕ ಓದಿಗೆ ಕವಳವಾಗಬಲ್ಲಸಂಕನವಿದೆಯಂದು ಸೂಚಿಸುವದಷ್ಟೇ ಕೆಲಸ.ಈ ಚಂದನೆಯ ಸಂಕಲನ ನೀಡಿದ್ದಕ್ಕೆ ಕವಿಗೆ ಶುಭಾಶಯಗಳು.

- ಡಾ.ಯ.ಮಾ.ಯಾಕೊಳ್ಳಿ, ಸವದತ್ತಿ

Shivaratri -Dr.Prakash Khade

 ಶಿವರಾತ್ರಿ ವಿಶೇಷ ಲೇಖನ   : ಜನಪದರ ಹಾಡುಗಳಲ್ಲಿ ಶಿವರಾತ್ರಿ :  -ಡಾ.ಪ್ರಕಾಶ ಗ. ಖಾಡೆ,    ಬಾಗಲಕೋಟ ಮೊ. 9845500890    ಭಾರತೀಯ ಸಂಸ್ಕøತಿಯ ಬೇರುಗಳು ನಮ್ಮ ಜನಪದರ...