Monday, August 28, 2023

 ಉಮೇಶ ತಿಮ್ಮಾಪುರ ಅವರ 

‘ಹೆಜ್ಜೆ ಊರದ ಬಯಲು’

ಕವನ ಸಂಕಲನಕ್ಕೆ ಬರೆದ ಮುನ್ನುಡಿ


- ಡಾ. ಪ್ರಕಾಶ ಗ. ಖಾಡೆ

ಕಾಲಘಟ್ಟ ಬದಲಾಗಿದೆ. ಬದುಕು ಮತ್ತೊಂದು ಮಗ್ಗಲು ಬದಲಿಸಿದೆ. ಇಡೀ ಜಗತ್ತನ್ನೇ ಕಾಡಿದ ಕೋವಿಡ್ ಹತ್ತೊಂಬತ್ತು ಕೊರೊನಾ ವೈರಸ್ಸು ಮಾನವ ಜೀವ ಜಗತ್ತಿನಲ್ಲಿ ಉಂಟು ಮಾಡಿದ ತಲ್ಲಣ, ಆತಂಕ, ಅವಘಡ, ಅನಾಹುತವನ್ನೆಲ್ಲ ದಾಟಿ ಮತ್ತೆ ಎಂದಿನ ಬದುಕಿಗೆ ತೆರೆದುಕೊಂಡಿದ್ದೇವೆ. ಕೊರೊನಾ ವೈರಸ್ಸು ಹಬ್ಬುವುದನ್ನು ತಡೆಯಲು ಉಂಟು ಮಾಡಿದ ಪ್ರಯತ್ನಗಳಲ್ಲಿ ಲಾಕ್‍ಡೌನ್‍ವೂ ಒಂದು. ಎಲ್ಲವೂ ಸ್ಥಬ್ದವಾದ ಕಾಲ ಅದು. ಮನೆಯಲ್ಲಿಯೇ ಇರಬೇಕಾದ ಸ್ಥಿತಿ. ಮನುಷ್ಯ ಮನುಷ್ಯರು ಮುಖಾಮುಖಿಯಾಗದ ದುರಂತ. ಬಸ್ಸು, ವಿಮಾನ, ರೈಲು ಎಲ್ಲ ಸಾರಿಗೆಯೂ ಬಂದ್. ಹೊರಗಡೆ ಪಶು ಪಕ್ಷಿಗಳ ಕಲರವ ಬಿಟ್ಟರೆ ಬೇರೆ ಯಾವ ಸದ್ದೂ ಇಲ್ಲ. ಅದೊಂದು ದಿನಮಾನ ಕಟ್ಟಿಹಾಕಿದಂತೆ ಬದುಕು ನಮಗೆ ನಾವೇ ಬಂಧಿಯಾದ ಅನುಭವ. ಇಂಥ ಸಂದರ್ಭದಲ್ಲಿ ಸೃಜನಶೀಲ ಮನಸ್ಸಿನ ಹೊಸತನ್ನು ಕಟ್ಟಿಕೊಡುವ ಕವಿಗಳು, ಕಥೆಗಾರರು, ಕಲಾವಿದರು, ಗಾಯಕರು ತಮ್ಮದೇಯಾದ ನೆಲೆಯಲ್ಲಿ ಹೊಸದನ್ನು ಹೊಸೆದು ಕಟ್ಟುವ ಸೃಜನಶೀಲ ಕ್ರಿಯೆಯಲ್ಲಿ ಮುಂದಾದರು. ಇಂಥದೊಂದು ಸಂದರ್ಭದಲ್ಲಿ ಮನೆಯಲ್ಲಿಯೇ ಕುಳಿತು ಕವಿ ಉಮೇಶ ತಿಮ್ಮಾಪುರ ಅವರು ಬರೆದ ಕವಿತೆಗಳ ಸಂಕಲನ ‘ಹೆಜ್ಜೆ ಊರದ ಬಯಲು’ ಈಗ ನಮ್ಮ ಮುಂದಿದೆ. ಇದರ ಮೊದಲ ಓದುಗನಾಗಿ ಒಂದಿಷ್ಟು ಮಾತುಗಳನ್ನು ಹಂಚಿಕೊಳ್ಳಲು ನನಗೆ, ತುಂಬಾ ಹೆಮ್ಮೆ ಎನಿಸುತ್ತಿದೆ. ಯಾಕೆಂದರೆ ಕವಿ, ಕತೆಗಾರ ಉಮೇಶ ತಿಮ್ಮಾಪುರ ಅವರು ನನ್ನ ಪರಮ ಆಪ್ತರಲ್ಲಿ ಒಬ್ಬರು. ಗ್ರಾಮೀಣ ಸೊಗಡಿನ ಭಾಷಿಕ ಶೈಲಿಯಲ್ಲಿ ಬರೆದ ಅವರ ಕತೆಗಳು ಹಳ್ಳಿಗರ ಬದುಕು ಬವಣೆ, ರಂಜೆಗಳನೆನಲ್ಲವನ್ನು ಯಥಾವತ್ತಾಗಿ ಕಟ್ಟಿಕೊಟ್ಟವರು ಗುಡ್ಡ ಬೆಟ್ಟಗಳಿಂದ, ಹಸಿರ ಸೊಬಗಿನಿಂದ ಕೂಡಿದ ಕಪ್ಪತ್ತುಗುಡ್ಡ ಪರಿಸರದ ಕೆಲೂರು ಎಂಬ ಸಣ್ಣ ಹಳ್ಳಿಯ ಈ ಅಪ್ಪಟ ಗ್ರಾಮೀಣ ಪ್ರತಿಭೆ, ಧಾರವಾಡ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಅಧ್ಯಯನ ಮಾಡಿ ಸ್ನಾತಕೋತ್ತರ ಪದವಿ ಪೂರೈಸಿ, ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಂಶೋಧನಾ ಮಹಾಪ್ರಬಂಧ ಮಂಡಿಸಿ ಇನ್ನಷ್ಟೇ ‘ಡಾಕ್ಡರೇಟ್’ ಪದವಿಗೆ ಪಾತ್ರರಾಗಲಿರುವ ಅಪ್ಪಟ ಪ್ರತಿಭಾವಂತ ಗೆಳೆಯ ಉಮೇಶ ತಿಮ್ಮಾಪುರ.

ಕಥೆ, ಕಾವ್ಯ, ವಿಮರ್ಶೆ ಸಂಬಂಧಿಸಿದಂತೆ ಈಗಾಗಲೇ ಇವರ ಬಿರಿದ ನೆನಪುಗಳು, ಮೇಘಧ್ವನಿ, ಸಮುಕ್ಷಾ, ತೊಯ್ದ ಬದುಕಿನ ಸಾಲು, ಕಾಡು ದಾರಿಯ ಕಂದೀಲು ಹಾಗೂ ನಡುಹಗಲ ಸಂಜೆ ಕೃತಿಗಳು ಪ್ರಕಟವಾಗಿ ಕನ್ನಡ ಓದುಗರ ಪ್ರೀತಿಗೆ ಪಾತ್ರವಾಗಿವೆ. ಈಗ ಈ ‘ಹೆಜ್ಜೆ ಊರದ ಬಯಲು’ ಕವನ ಸಂಕಲನವು ಅವರ ಪ್ರತಿಭೆಯ ಏರುಸ್ತರದ ಹೆಜ್ಜೆಗಳನ್ನು ಇನ್ನಷ್ಟು ವಿಸ್ತರಿಸಿದ ಭಾವಸಂಕುಲವಾಗಿದೆ.

ಮುಖ್ಯವಾಗಿ ಹೆಜ್ಜೆ ಊರದ ಬಯಲಿನಲ್ಲಿ ಮೂರು ಬಗೆಯ ರಚನೆಗಳು ತುಂಬಾ ದಟ್ಟವಾಗಿ ಬಂದಿವೆ. ಒಂದು ಕವಿಗೆ ಕಾಡಿದ ಹೆಣ್ಣು, ಕವಿಗೆ ತಟ್ಟಿದ ಶೋಷಿತರ ಭಾವಣೆ ಹಾಗೂ ಮೂರನೆಯದು ಸಾಮಾಜಿಕ ನ್ಯಾಯದ ತುಡಿತ. ಹೀಗಾಗಿ ಕವಿ ತನ್ನ ನೆಲದ ಮೇಲೆ ನಿಂತು ಒಮ್ಮೆ ಹೂವಾಗಿ, ಒಮ್ಮೆ ಉಕ್ಕೇರುವ ಸಮುದ್ರವಾಗಿ ಸುಡುವ ಕೆಂಡವಾಗಿ ತೋರುತ್ತಾಳೆ. ಇವೆಲ್ಲ ಕವಿ ವಾಸ್ತವದೊಂದಿಗೆ ಮುಖಾಮುಖಿಯಾದುದರ ಸಂಕೇತವಾಗಿದೆ.

ಕಾಯ ಕಲ್ಲು ಮಾಡಿದ ದೇವ

ಕಾಯ ದಂಡಿಗೆಯಲಿ

ಜ್ಞಾನದ ತಿರುಳು ಹೊಡಮರಳಿ

ಅನುದಿನಕೆ ತನುವರಳಿಸಿದ ತಥಾಗತ

‘ಬುದ್ಧನ ಕರುಣೆ’ ಯ ಈ ಕವಿತೆಯಲ್ಲಿ ಕವಿಗೆ ಜ್ಞಾನದ ತಿರುಳು ಹುಡುಕಿ ಸಾಗುವ ದಾರಿಯಲ್ಲಿ ಉಂಟಾಗುವ ಕಷ್ಟ ಕೋಟಲೆಗಳ ಅರಿವಿದೆ. ಹಾಗಾಗಿ ಕವಿಗೆ ಅನುದಿನವೂ ಹೊಸತಾಗುವ ಹಂಬಲದ ಚೇತನ ಕಾಪಿಟ್ಟುಕೊಂಡು ಬರುವ ಕಸಿವು ಇದೆ.

ಇಲ್ಲಿನ ‘ಜೀವಯಾಣದ ಪಯಣ’ ಕವಿತೆಯೂ ಒಟ್ಟು ಸಂಕಲನದ ಪ್ರವೇಶಿಕೆಯಂತಿದೆ. ಏಕೆಂದರೆ ಹೆಣ್ಣು ದಾರಿಯ ಹೆಜ್ಜೆಗಳೇ ಬಹುಮುಖಿಯಲ್ಲಿ ಸಂಕಲನದ ಬಯಲಿನಲ್ಲಿ ಮೂಡಿ ಮತ್ತೆ ಮತ್ತೆ ಕವಿಗೆ ಕಾಡಿವೆ. ಕವಿ ದಾಂಪತ್ಯದ ಚಿತ್ರಣದಲ್ಲಿ ಪುರಾಣ ಕಾಲದ ಮಹಾಪುರುಷರ ಪತ್ನಿಯರ ಹೆಸರಿಸುತ್ತಾ ನಿರಂತರ ಹೊಂದಾಣಿಕೆಯ ಪಯಣದ ಅರ್ಥ ಸಾರುತ್ತಾರೆ. ಇಲ್ಲಿ ಮಾದ್ರಿ, ಕುಂತಿ, ಕೌಶಲ್ಯ, ಗಾಂಧಾರಿ, ಚಂದ್ರಮತಿ, ಸೀತೆ ಹೀಗೆ ಪುರಾಣ ಪಾತ್ರಗಳು ಮತ್ತು ಅವರು ಪತಿಯೊಂದಿಗಿನ ಬದುಕಿನ ಚಿತ್ರಣದ ಒಟ್ಟು ನಡೆಯನ್ನು ಚಿತ್ರಿಸುತ್ತಾ ‘ದಾಂಪತ್ಯವೆಂದರೆ ಬಂಧುಗಳ ಒತ್ತಾಯಕ್ಕೆ, ಮತ್ತ್ಯಾವುದೋ ಸ್ಥಿತಿಗೆ ಕೊರಳೊಡ್ಡುವ ಕ್ರಿಯೆ ಅಲ್ಲ. ಅದು ಅಪರಿಚಿತ ಜೀವ ಜಗತ್ತಿಗೆ ಅನುಸಂಧಾನಗೊಳ್ಳುವ ಕ್ರಿಯೆ’ ಎಂದು ಸಾರುತ್ತಾರೆ. ಇಲ್ಲಿ ಕವಿ ಸಂಬಂಧಗಳ ಬೆಸುಗೆಯ ಸಂಯಮ, ಮಮತೆ, ನಿಷ್ಠೆ, ಸತ್ಯ ಈ ಎಲ್ಲ ಮಾನವೀಯ ನೆಲೆಗಳ ಪದಗಳನ್ನು ಬಳಸಿ ‘ಎರಡು ಜೀವಗಳ ನಿರಂತರ ಹೊಂದಾಣಿಕೆಯ ಪಯಣಕ್ಕೆ ದಾರಿ ರೂಪಿಸುತ್ತಾರೆ.

ಸಂಕಲನದ ‘ನೀಲಾಂಜನೆಯ ಧ್ಯಾನ’ ಕವಿತೆ ಹೆಚ್ಚು ಹಿಡಿಸುತ್ತದೆ. ಇಲ್ಲಿ ‘ಅವಳು’ ಕಾಯುವಲ್ಲಿ ಕನಸು ಕಟ್ಟುವಲ್ಲಿ ಕನವರಿಕೆಯಲ್ಲಿ, ಚಡಪಡಿಕೆಯಲ್ಲಿ ಕವಿ ತೋಡುವ ಪದಗಳ ಗುಂಡಿಗೆ ಯಾರೂ ಬೀಳದಾದೀತೆ?

ಬರಲಿಲ್ಲವೇಕೆ

ಹದವೇರಿದ ಎದೆಗೆ

ಕೈ ಕೊಳಲು ಮಾಡಿ

ತೊಡೆಯ ನಡುದಾರಿಯಲಿ

ಇಳಿದು ಹೋಗುವ ಪುಂಡ

ಹೀಗೆ ಕವಿತೆಯ ಸಾಲುಗಳಲ್ಲಿ ‘ನಾಚಿಕೆಯ ಸೋಪಾನ’ ‘ಲೋಲಾಕಿನ ಗಿಲುಕಿ’ ಮಲೆಯ ಹೆಗಲೇರಿ, ಮಳೆಯಿಂದ ನೆಲ, ಹೀಗೆ ಒಂದೊಂದು ಪದವನ್ನು ರಸಿಕತೆಯಿಂದ ಹರಿದು ಬಿಡುವ ಕವಿ.

ಜಿನುಗಿ ತೊಟ್ಟಿಕ್ಕುವ ಹನಿಗೆ

ಮೊಳೆಕೆಯೊಡೆಯುವ ಉನ್ಮಾದ

ತುಟಿ ಕಚ್ಚಿ ಮುಡಿ ಬಿಚ್ಚಿ

ಭೂಮಿಯಾಗುವ ಬಯಕೆ

ಎಂಬಲ್ಲಿ ಫಲವಂತಿಕೆಯ ನಿರಂತರತೆಯನ್ನು ಕವಿ ಸಾರುತ್ತಾರೆ. ‘ಅವಳು’ ಕವಿಗೆ ಕಾಡಿದಷ್ಟು ಕವಿತೆಗೂ ಕಾಡಿದ್ದಾಳೆ. ಅವಳು ಎದುರಿಸಿದ್ದರೆ ನಾನು ಅನಂತ ಹವಣಿಕೆಗಳ ಅದುಮಿಟ್ಟುಕೊಂಡ ಸಂತ, ಅವಳ ಸ್ಪರ್ಶವೆಂದರೆ, ಮತ್ತೆ ನನ್ನ ಮರುಹುಟ್ಟು ಎನ್ನುವ ಕವಿ.

ಅವಳ ನೆನಪೆಂದರೆ

ಕುಡಿದಿಟ್ಟ ಗ್ಲಾಸು

ಮತ್ತೆ ಮತ್ತೆ

ತುಂಬಬೇಕೆಂಬ ಹಂಬಲ

ಎಂಬಲ್ಲಿ ಕವಿ ನಿಶಾಧರೆಯ ಭರ್ತಿಗೆ ಹಂಬಲಿಸುತ್ತಾ ಹೊಸಲೋಕದ ಅನುಸಂಧಾನಕ್ಕೆ ಕಾವ್ಯವನ್ನು ‘ಅನುಸಂಧಾನ’ ಕವಿತೆಯಲ್ಲಿ ಹುರಿಗೊಳಿಸುತ್ತಾರೆ. ‘ಭೂಮಿಯಾದಳು ಪ್ರತಿಮೆ’ ಕವಿತೆಯು ಹೆಣ್ಣು ಕುಲದ ಶೋಷಣೆಯ ಚಿತ್ರಣ ನೀಡಿದರೆ, ಕೆಂಡ ಸಂಪಿಗೆ ಕವಿತೆಯಲ್ಲಿ ಹೋರಾಟದ ಬೇಗುದಿ ಇದೆ. ‘ಮುತ್ತುಗದ ಹೂ’ ಕವಿಗೆಯು ಚೈತನ್ಯದ ಜೀವಜಲವನ್ನು ಹೊಮ್ಮಿಸುತ್ತದೆ. ಸುಡುವ ಕೆಂಡಗಳ ನಡುವೆ ಕವಿತೆಯಲ್ಲಿ ನೀಲಿ ಕಣ್ಣಿನ ಹುಡುಗಿಯ ಕನವರಿಕೆ ಇದೆ. ಇಂಥ ಹಲವು ಕವಿತೆಯಲ್ಲಿ ಕಾಡುವ ಸಾಲುಗಳು ಇಂತಿವೆ.

ಅಲ್ಲಿ ಬೆಳಕಿನ ಬೇಲಿ ಕಟ್ಟಿ

ಬಿಂಬವಾಗುವ ಬಯಕೆ

(ಮರೆಯಾದಳು ಬಿಂಬ)

ಅವಳ ಮೈಸಿರಿಯಲ್ಲಿ ತೇಲಿ

ಕಣ್ಣು ನೋಟದಲ್ಲಿ ಕಳೆದು ಹೋಗುವೆ (ನೀಲ ಜಲ)

ಪ್ರಕೃತಿ ಪರಿಶುದ್ಧವಾದರೇನು

ಮನಸ್ಸುಗಳು ಮಲೀನವಾಗಿರುವಾಗ

ನನ್ನ ಸಲುಗೆಯಲಿ

ಮಾತು ಟಿಸಿಲೊಡೆದು

ಅದೆಷ್ಟು ಸಾಮ್ರಾಜ್ಯಗಳನ್ನು

ಕಟ್ಟಿ ಕೆಡವಿದೆವು (ನೆನಪಿದೆಯೇ ನಿನಗೆ)

ಒಡಲು ತುಂಬಿ ಹರಿವ

ಸಮುದ್ರ 

ನನ್ನಂತೆಯೇ ಬರಿದಾದ ಬಂಡೆಗಲ್ಲು

(ಕಡಲ ಒಡಲಿನ ಕರುಣೆ)


ಹೀಗೆ ಕವಿತೆಗಳ ಒಡಲಲ್ಲಿ ಅಡಗಿರುವ ಇಂಥ ಅನೇಕ ಸಾಲುಗಳ ಹಲವು ಅರ್ಥಗಳನ್ನು ಸ್ಫುರಿಸುತ್ತವೆ. ಹೀಗಾಗಿ ಕವಿಯ ರಚನೆಯ ಸಾರ್ಥಕತೆ ಕಾಣುತ್ತೇವೆ. ಪ್ರತಿ ಸಾಲೂ, ಪ್ರತಿ ಕವಿತೆಯೂ ತನ್ನ ರಾಜನಿಕತೆ ಮತ್ತು ವಸ್ತು ವಿಷಯದ ನೆಲೆಯಲ್ಲಿ ಹೊಸತನದಿಂದ ಕೂಡಿರುವುದು ತಿಮ್ಮಾಪುರರ ಕವಿತೆಗಳ ಹೆಚ್ಚುಗಾರಿಕೆಯಾಗಿದೆ.

ಮತ್ತೆ ಮತ್ತೆ ಕಾಡುವ ಹಲವು ರಚನೆಗಳು ಇಲ್ಲಿವೆ. ‘ಬೆರಗುಗೊಂಡ ಬಯಲು’ ಕವಿತೆಯಲ್ಲಿ ಗೆಳತಿಯ ಜೊತೆಗಿನ ಅನುಸಂಧಾನವಿದೆ. ‘ನಿನ್ನ ತುಂಬು ಎದೆಯ ಮೇಲೆ ತಲೆಯಿಟ್ಟು ಕೇಶರಾಶಿಯಲಿ ಮರೆಯಾಗುವ ತುಡಿತ’ ಹೊಂದಿದ ಕವಿ.

ಗರಿಬಿಚ್ಚಿ ಹಾರಾಡುವ ನಿನ್ನ

ಹದಮೀರಿದ ಹರೆಯದಲಿ

ತುಳುಕಿ ಪುಳಕಗೊಳ್ಳುವ ಹುಚ್ಚು

ಎಂಬಲ್ಲಿ ಬಿಡಿಸಲಾಗದ ಬೆರಕೆಯ ಅನುಸಂಧಾನದಲ್ಲಿ ಬಯಲಾಗುವ ಬಯಲಿನ ಬೆರಗಿದೆ.

ಕವಿ ಉಮೇಶ ತಿಮ್ಮಾಪುರರ ಕವಿತೆಗಳ ರಾಚನಿಕ ಶೈಲಿ ವಿಶಿಷ್ಟವಾದುದು. ಪದಗಳನ್ನು ಅಳೆದು ತೂಗಿ ನೋಡದೇ ಹೊಸತನದಿಂದ ಕೂಡಿದ ಪದಗಳನ್ನು ತಾವೇ ಸೃಜಿಸಿ, ಠಂಕಿಸಿ, ಸರಿಜೋಡಿಸುವಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ಇಂಥಲ್ಲಿ ಕವಿಗಿರುವ ಭಾಷಾ ಪದಗಳ ಶಕ್ತಿ ಅರ್ಥವಾಗುತ್ತದೆ. ಇಲ್ಲಿನ ಭಾವಗೀತಾತ್ಮಕ ಕವಿತೆಗಳೂ ಇಂಥ ಶಕ್ತಿಯನ್ನೇ ಪಡೆದಿವೆ. ಇಲ್ಲಿನ ‘ನೀಲ ನಭ’ ಒಂದು ಭಾವಗೀತೆ. ಗೆಳತಿಯನ್ನೂ ಕವಿ ನೀಲನಭದಲ್ಲಿ ಹೊಳೆವ ಕೋಲ್ಮಿಂಚಿನ ಝಳಪಿಗೆ ಕಾಜಾಣದ ಮಧುರ ಧ್ವನಿಗೆ, ಚೆಲ್ಲುವರೆದ ಮಂಜು ಹನಿಗೆ ಹೀಗೆ ಹಲವು ವಿಧದಲ್ಲಿ ಬಣ್ಣಿಸುತ್ತಾರೆ. ಭಾವಗೀತೆಗಳಾಗಿ ಮೊಗ್ಗಿನ ಮಾಲೆ, ತೇವ ತುಂಬಿದ ಮೋಡ, ಜೀವ ಕಾಯುವ ಮಾಯೆ, ಕಾಂಚಾಣ ಮೊದಲಾದವು ಹಾಡುಬಲ್ಲ ರಚನೆಗಳಾಗಿ ಗೆಲ್ಲುತ್ತವೆ.

ನಾಳೆಗಳಿವೆ ಎಂದು

ಹಾಳೆಯಲಿ ಗೀಚುವೆನು

ನೆನಪುಗಳ ಹಾದಿಯಲಿ ಬಂದು ಹೇಳು

ಏನು ಬರೆಯಲಿ

‘ಕಾಂಚಾಣ’ ಈ ಕವಿತೆಯಲ್ಲಿ ಕವಿಯು ಭರವಷೆಯ ಜಾಡಿನಲ್ಲಿ ತನ್ನದೇ ದಾರಿ ರೂಪಿಸಿಕೊಳ್ಳುತ್ತಾರೆ.

ಉಮೇಶ ತಿಮ್ಮಾಪುರರ ಕವಿತೆಗಳು ಬಂಡಾಯದ ಧ್ವನಿ ಹೊಂದಿದ ರಚನೆಗಳನ್ನು ದಟ್ಟವಾಗಿ ಕಾಣುತ್ತೇವೆ.

ಸಿಡಿಲು ಬಾಯಿ ಬಿರಿದು

ಮಿಂಚು ಕಣ್ಣು ತೆರೆದು

ಗುಡಿಸಲು ನಡುಗಿದಾಗ

ಜೀವಹೋದಂತೆ ಬದುಕು

ಕೂಗಿಲ್ಲದ ಕೊರಳು ಕವಿತೆಯಲ್ಲಿ ಬಯಲಲ್ಲಿ ಬದುಕ ಕಟ್ಟಿಕೊಂಡವರ ನೋವಿದ್ದರೆ, ‘ಬೇಲಿಯ ಮೇಲಿನ ಬದುಕು’ ‘ಕವಿತೆ ನೊಂದವರ, ದೌರ್ಜನ್ಯಕ್ಕೆ ಒಳಗಾದವರ ಧ್ವನಿಯಾಗಿದೆ. ‘ಕೆನೆಗಟ್ಟಿದ ಒಡಲ ವೇದನೆಯಲಿ ಗಾಂಧಿ ಮಂತ್ರ ಜಪಿಸುವ ಇವರು ಭರವಸೆಯ ಬೆಂಕಿಯಲ್ಲಿ ಬೆಂದು ಹೆಣವಾಗಿಸಿದವರ ಹೆಸರಲ್ಲಿ ಕೂಗು ಕಳೆದುಕೊಳ್ಳುತ್ತಾರೆ.’ ಎಂಬಲ್ಲಿ ಕವಿ ಆಕ್ರೋಶ ವ್ಯಕ್ತಪಡಿಸುತ್ತಾರೆ. ‘ಲೋಕ ಚಿತ್ತ’ ಕವಿತೆಯು ಬದುಕಿನ ಜಂಜಾಟದಲ್ಲಿ ಕಳೆದುಹೋಗುವ ಅಮಾಯಕರ ದಾರಿಯ ಚಿತ್ರಣಗಳಿವೆ. ನೋವು, ಅಪಮಾನ, ರೋಪ, ಇಂಥ ಅನಿಯಮಿತತೆಯಲ್ಲಿ ಚಿಗುರೊಡೆವ ಜೀವ ಕನಸಿನಲ್ಲಿ ‘ಕಣ್ಣಿಗೆ ಕಟ್ಟಿತು ಊರಿನ ನೂರು ಗಂಟು’ ಎಂಬಲ್ಲಿ ಕವಿಯ ಆಶಾವಾದವಿದೆ.

ಈ ಸಂಕಲದಲ್ಲಿ ಕೊರೊನಾ ಮಾಹಾಮಾರಿಗೆ ಮಹಾ ವಲಸೆಯ ಮನುಕುಲದ ಹಾಡು-ಪಾಡು ತುಂಬಾ ನೋವಿನಿಂದ ಕಟ್ಟಿಕೊಟ್ಟಿದ್ದಾರೆ. ದಿನದ ದುಡಿಮೆಗೆ ಕಲ್ಲು ಬಿದ್ದು ಕಾರ್ಮಿಕರಿಗಿಲ್ಲ ಕೆಲಸ. ದಿನಗೂಲಿಗಳಿಗೆ ಅರ್ಧ ಚಂದ್ರ, ಹೀಗೆ ಭೀಕರ ನರಕ ದೃಶ್ಯಗಳನ್ನು ದಾಖಲಿಸಿದ್ದಾರೆ. ಕಾಲನ ಲೀಲೆಗೆ ಮನಸ್ಸು ಕಲ್ಲು ಮಾಡಿದವರ ಕಥನ ಇಲ್ಲಿದೆ.

ತುಂಬಾ ಭರವಸೆಯ ಕಾವ್ಯ ಸಂಕಲನವಿದು. ಕನ್ನಡದಲ್ಲಿ ಹೊಸತನದಿಂದ ಬರೆಯುತ್ತಿರುವ ಕವಿಗಳಲ್ಲಿ ಉಮೇಶ ತಿಮ್ಮಾಪುರ ಅವರ ಈ ಸಂಕಲನವು ಹೆಚ್ಚು ಚರ್ಚೆಗೆ ತೆರೆದುಕೊಳ್ಳುವ ಎಲ್ಲ ಲಕ್ಷಣಗಳನ್ನೂ ಹೊಂದಿದೆ. ಹೇಳಬಲ್ಲ ವಸ್ತು ಸಂಗತಿಗಳಿಗೆ ಬಣ್ಣ ಬಳಿದು ಓರುಗನ ಲಕ್ಷ್ಯ ಸೆಳೆಯುವ ಯಾವ ಮಡಿವಂತಿಕೆಯೂ ಇಲ್ಲದೇ ಇಲ್ಲಿನ ಕವಿತೆಗಳು ನಿರಾಡಂಬರವಾಗಿ ಸಾಗಿ ಕವಿಯ ಶಕ್ತಿಯನ್ನು ಪ್ರಕಟಪಡಿಸುತ್ತವೆ.

ಎಷ್ಟು ದಿನ ಬದುಕಿದ್ದರೇನು

ಬೆಳಕಿಗೆ ಬೇಲಿ ಕಟ್ಟುವವರ ನಡುವೆ

ಎಂಬ ಆತಂಕದ ಸಾಲುಗಳ ನಡುವೆಯೂ ‘ಕಣ್ಣು ಬಿಡುವ ಬದುಕಿಗೆ, ಭರವಸೆಯೇ ಸಾಕಲ್ಲವೇ’ ಎಂಬ ಸಮಾಧಾನದಿಂದಲೇ ಕಾವ್ಯದ ಹಿರಿಮೆಗೆ ಸಾಧ್ಯತೆಗಳನ್ನ ತೋರುವ ಗೆಳೆಯ ಕವಿ ಉಮೇಶ ತಿಮ್ಮಾಪುರ ಅವರ ಈ ‘ಹೆಜ್ಜೆ ಊರದ ಬಯಲು’ ಕವಿತಾ ಸಂಕಲನವನ್ನು ಕನ್ನಡ ಮನಸ್ಸುಗಳ ತುಂಬಾ ಆಪ್ತವಾಗಿ ತಮ್ಮದಾಗಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. 

- ಡಾ. ಪ್ರಕಾಶ ಗ. ಖಾಡೆ

Shivaratri -Dr.Prakash Khade

 ಶಿವರಾತ್ರಿ ವಿಶೇಷ ಲೇಖನ   : ಜನಪದರ ಹಾಡುಗಳಲ್ಲಿ ಶಿವರಾತ್ರಿ :  -ಡಾ.ಪ್ರಕಾಶ ಗ. ಖಾಡೆ,    ಬಾಗಲಕೋಟ ಮೊ. 9845500890    ಭಾರತೀಯ ಸಂಸ್ಕøತಿಯ ಬೇರುಗಳು ನಮ್ಮ ಜನಪದರ...