Friday, September 22, 2023

ಕಥೆ : ಯಾಗದ ಕುದುರೆ ರಚನೆ -ಡಾ.ಪ್ರಕಾಶ ಗ.ಖಾಡೆ

 ಸುಧಾದಲ್ಲಿ ಪ್ರಕಟವಾದ ಕಥೆ

ಯಾಗದ ಕುದುರೆ

ಡಾ.ಪ್ರಕಾಶ ಗ.ಖಾಡೆ


         ಮೂಡಗಲ್ಲು ಸಂಸ್ಥಾನದ ಮಹಾರಾಜರ ಕುದುರಿ ಏಕಾಏಕಿ ತಪ್ಪಿಸಿಕೊಂಡು ಕಾಡು ಸೇರಿದ ಸುದ್ದಿ ಬೆಳಗು ಮುಂಜಾನಿ ಹೊತ್ತಿಗೆ ಸುತ್ತ ಏಳೂರಿಗೆ ತಲುಪಿ ಮಹಾರಾಜರನ್ನು ಸೇರಿ, ಜನತೆಯನ್ನೂ ಚಿಂತೆಗೀಡು ಮಾಡಿತು. ಹಾಗೆ ನೋಡಿದರೆ ಅರಮನೆಯ ಹತ್ತಾರು ಕುದುರೆಗಳಲ್ಲಿ ಈಗಷ್ಟೇ ಎರಡು ದಿನಗಳ ಹಿಂದೆ ಬಂದು ಸೇರಿದ್ದ ಈ ಕುದುರೆ ತಪ್ಪಿಸಿಕೊಳ್ಳಲು ಕಾರಣವೂ ಇತ್ತು. ಕುದುರೆ ತಪ್ಪಿಸಿಕೊಂಡ ಸಂಗತಿ ಸ್ವತಃ ಮಹಾರಾಜರನ್ನೂ ಸೇರಿ ಮಹಾರಾಣಿಯವರಿಗೂ ತೀವ್ರವಾದ ಖಿನ್ನತೆಯನ್ನುಂಟು ಮಾಡಿತು. ಮಹಾರಾಜರು ತಮ್ಮ ಸಂಸ್ಥಾನದ ತೆರೆದ ಜೀಪನ್ನು ಸಿದ್ದ ಮಾಡಿಡಲು ಅರಮನೆಯ ಆಳುಗಳಿಗೆ ಹೇಳಿದರು. ಕುದುರೆ ಹುಡುಕಲು ಮಹಾರಾಜರೊಂದಿಗೆ ಮಹಾರಾಣಿಯವರೂ ಬರುವುದಾಗಿಯೂ ತಮ್ಮನ್ನೂ ಕರೆದುಕೊಂಡು ಹೋಗಬೇಕೆಂದು ಕೇಳಿಕೊಂಡಾಗ, ಮಹಾರಾಣಿಯವರ ಮನಸ್ಸನ್ನು ನೋಯಿಸುವ ಮನಸ್ಸು ಮಹಾರಾಜರಿಗೆ ಇರಲಿಲ್ಲ. ‘ಸರಿ ಸಿದ್ದರಾಗಿರಿ’ ಎಂದರು. ಜೀಪಿನಲ್ಲಿ ಬಂದೂಕು, ದಾರಿಯ ಆಯಾಸ ಕಳೆಯಲು ನೀರು, ಅಷ್ಟಿಷ್ಟು ಆಹಾರ ಎಲ್ಲವನ್ನು ಕೂಡಿಟ್ಟುಕೊಂಡು, ಬೆಳಗಿನ ಉಪಹಾರ ಮುಗಿಸಿ ಕುದುರೆ ಹುಡುಕಲು ರಾಜದಂಪತಿ ಹೊರನಡೆದರು.

*

       ಸಂಸ್ಥಾನಕ್ಕೆ ಈಗಷ್ಟೇ ಸೇರಿದ್ದ ಈ ಕುದುರೆಗೆ ಒಂದು ಇತಿಹಾಸವಿತ್ತು. ಕುದುರೆ ಸುತ್ತಮುತ್ತ ಏಳೂರಿಗೆ ಆಶ್ಚರ್ಯದ ಸಂಕೇತವಾಗಿತ್ತು. ಅದು ಒಂದು ಸಾಧಾರಣ ಕುದುರೆಯಾಗಿರದೆ, ಅದಕ್ಕಿರುವ ಹೆಚ್ಚುಗಾರಿಕೆಯಿಂದ ಕುದುರೆಯನ್ನು ಕಣ್ಣಾರೆ ನೋಡುವುದೇ ಒಂದು ಪೂಜ್ಯನೀಯ ಮತ್ತು ಖುಷಿಯ ವಿಷಯವಾಗಿತ್ತು. ಮೂಲ ಜೈಪುರ ಸಂಸ್ಥಾನಕ್ಕೆ ಸೇರಿದ್ದ ಈ ಕುದುರೆ ಅದ್ಹೇಗೋ ಕರುನಾಡಿನ ಕೆಚ್ಚೆದೆಯ ಗಂಡುಮೆಟ್ಟಿನ ನೆಲ ಮೂಡಗಲ್ಲು ಸಂಸ್ಥಾನಕ್ಕೆ ಬಂದು ಸೇರಿತ್ತು. ಈ ಸೇರುವಿಕೆಯ ಹಿಂದೆ ಒಂದು ಇತಿಹಾಸವಿದೆ. ಸಂಸ್ಥಾನದ ಸರಹದ್ದಿನಲ್ಲಿ ಬರುವ ಗುಣಸಿರಿ ಗ್ರಾಮದ ಹೊರಗೆ ಮಹಾರಾಜರ ಪೂರ್ವಿಕರು ಬೇಸಿಗೆಯಲ್ಲಿ ಉಳಿದುಕೊಳ್ಳಲು ಒಂದು ಬೇಸಿಗೆ ಅರಮನೆ ಕಟ್ಟಿದ್ದರು. ಸುತ್ತ ಹಸಿರು ಚೆಲ್ಲಿದ ಪರಿಸರದಲ್ಲಿ ತುಂಬಾ ಎತ್ತರಕ್ಕಿರುವ ಸಮತಟ್ಟಾದ ಪ್ರದೇಶದಲ್ಲಿ ಕಟ್ಟಿದ ಈ ಬೇಸಿಗೆ ಅರಮನೆಯನ್ನು ಬಹುದೂರದಿಂದಲೂ ಗುರುತಿಸಬಹುದಿತ್ತು. ಬೇಸಿಗೆ ಅರಮನೆಗೆ ರಾಜರು ಬರುವುದು ತುಂಬಾ ಕಡಿಮೆ. ಈ ಭಾಗಕ್ಕೆ ಬೇಟೆಯಾಡಲು ಬಂದಾಗ ಮತ್ತು ರಾಜ್ಯಭಾರದ ಆಯಾಸ ಕಳೆಯಲು ಮಾತ್ರ ಬರುತ್ತಿದ್ದರು. ಉಳಿದಂತೆ ಇಲ್ಲಿಯ ಅರಮನೆಯ ಕೆಲಸಗಾರರು ಮತ್ತವರ ಕುಟುಂಬವರ್ಗದವರು ಅರಮನೆಯನ್ನು ನೋಡಿಕೊಳ್ಳುತ್ತಿದ್ದರು. 

        ದೇಶÀಕ್ಕೆ ಸ್ವಾತಂತ್ರ್ಯ ಬಂದು ಸಂಸ್ಥಾನಗಳು ಒಕ್ಕೂಟ ಸರಕಾರದಲ್ಲಿ ವಿಲೀನವಾದಾಗ ಮೂಡಗಲ್ಲು ಸಂಸ್ಥಾನವೂ ಇದಕ್ಕೆ ಹೊರತಾಗಲಿಲ್ಲ. ಆವಾಗ ಆಡಳಿತವೆಲ್ಲ ಸರಕಾರದ ಕೈ ಸೇರಿದಾಗ ಸಂಸ್ಥಾನದ ಅರಸರು ಅರಮನೆಯ ಅಸ್ತಿತ್ವ ಉಳಿಸಿಕೊಂಡು ಕೆಲವರು ಇಲ್ಲಿಯೇ ಉಳಿದರೇ, ಉಳಿದಂತೆ ರಾಜ ವೈಭೋಗಕ್ಕಾಗಿ ಕೆಲವರು ಕೊಲ್ಲಾಪುರ, ನಾಸಿಕ, ಪುಣೆ, ಮುಂಬೈ ಸೇರಿದ್ದರು. ಮೂಡಗಲ್ಲು ಸಂಸ್ಥಾನದಲ್ಲಿ ಉಳಿದುಕೊಂಡಿದ್ದ ಮಹಾರಾಜರು ಕೃಷಿಕರು, ಪ್ರಕೃತಿಪ್ರಿಯರು ಮತ್ತು ಜನ ಆರಾಧಕರೂ ಆಗಿದ್ದರು. ಸಂಸ್ಥಾನದ ಕಾರುಭಾರ ಹೋದರೂ ಜನತೆಯೊಂದಿಗಿನ ತಮ್ಮ ಹಿರಿತನವನ್ನು ಅವರೆಂದೂ ಕಳೆದುಕೊಂಡಿರಲಿಲ್ಲ. ಸ್ವತಃ ಕೃಷಿಕರಾಗಿದ್ದ ಮಹಾರಾಜರು ತೋಟ ಮಾಡಿಕೊಂಡು ಕಬ್ಬು, ತೆಂಗು, ಬಾಳೆ ಮೊದಲಾದ ಹಣ್ಣುಹಂಪಲ ಬೆಳೆದು ಈ ಭಾಗದಲ್ಲಿ ಹೆಸರಾಗಿದ್ದರು. ಮಹಾರಾಜರಿಗೆ ಹಳೆಯ ಕಾಲದ ಜೀಪು ಕಾರುಗಳನ್ನು ಸಂಗ್ರಹಿಸುವುದು, ಅತ್ಯುತ್ತಮ ಕುದುರೆಗಳು ಎಲ್ಲಿಯೇ ಇರಲಿ ಅವನ್ನು ಖರೀದಿಸುವುದು ಮತ್ತು ಕಲೆ, ಕ್ರೀಡೆಗಳಿಗೆ ಪ್ರೋತ್ಸಾಹ ಕೊಡುವುದು ಅವರ ಬದುಕಿನ ಹವ್ಯಾಸವಾಗಿತ್ತು. ಮಹಾರಾಜರಿಗೆ ಪೂರಕವಾಗಿ ಮಹಾರಾಣಿಯವರೂ ಇದೇ ರೀತಿಯ ಮನೋಭಾವ ಹೊಂದಿದ್ದರು. ಹೀಗಾಗಿ ಸಂಸ್ಥಾನದ ಕುಟುಂಬವರ್ಗದವರನ್ನು ಸುತ್ತ ಹಳ್ಳಿಯವರು ತುಂಬಾ ಪ್ರೀತಿಯಿಂದ ಕಾಣುತ್ತಿದ್ದರು.

*

       ಪ್ರಜಾಪ್ರತಿನಿಧಿ ಸರಕಾರಗಳು ಬಂದು ಸಂಸ್ಥಾನದ ಆಡಳಿತ ಹೊರಟು ಹೋದಾಗ ಗುಣಸಿರಿಯ ಬೇಸಿಗೆ ಅರಮನೆಗೆ ಮಹಾರಾಜರ ಪರಿವಾರ ಬರುವುದು ಕಡಿಮೆಯಾಯಿತು. ಅರಮನೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಕೆಲಸದವರಿಗೆ ಸರಿಯಾದ ಸಂಬಳ ಸಿಗದೇ ಅವರೂ ಕಡಿಮೆಯಾಗುತ್ತಾ ಬಂದರು. ಹೀಗಾಗಿ ತುಂಬಾ ಬೆಲೆಬಾಳುವ ಅರಮನೆ, ಸುತ್ತಲಿನ ಹತ್ತಾರು ಎಕರೆ ಜಮೀನು ಉಸ್ತುವಾರಿಯಿಲ್ಲದೇ ಬಿಕೋ ಎನ್ನತೊಡಗಿತು, ಇಂಥ ಸುಸಜ್ಜಿತವಾದ ಕಟ್ಟಡ ಮತ್ತು ಆವರಣದಲ್ಲಿ ಒಂದು ಯೋಗ ಶಾಲೆಯನ್ನು ತೆರೆಯುವ ಯೋಚನೆ ಕೆಲ ಕ್ರೀಡಾಸಕ್ತರಲ್ಲಿ ಮೂಡಿತು, ಅವರು ತಡ ಮಾಡದೇ ಮಹಾರಾಜರಿಗೆ ತಮ್ಮ ಬೇಸಿಗೆ ಅರಮನೆಯನ್ನು ಬಿಟ್ಟುಕೊಡಲು ಕೇಳಿದರು. 

     ಮೊದಲೇ ಕ್ರೀಡೆ, ಕಲೆ, ಸಂಸ್ಕøತಿಯ ಪೋಷಕರಾಗಿದ್ದ ಮಹಾರಾಜರು ಮತ್ತು ಅವರ ಕುಟುಂಬವರ್ಗದವರು ಪೂರ್ಣ ಅನುಮತಿಯೊಂದಿಗೆ ಗುಣಸಿರಿಯ ಬೇಸಿಗೆ ಅರಮನೆಯನ್ನು ಅದಕ್ಕೆ ಹೊಂದಿಕೊಂಡ ಅಷ್ಟಿಷ್ಟು ಜಮೀನನ್ನು ಸಂತೋಷದಿಂದ ಬಿಟ್ಟುಕೊಟ್ಟಾಗ, ಗುಣಸಿರಿಯಲ್ಲಿ ರಾಜ್ಯದಲ್ಲಿಯೇ ಅಪರೂಪವಾದ ಒಂದು ಯೋಗ ವಿದ್ಯಾಲಯ ತೆಲೆ ಎತ್ತಿತು. ಇಲ್ಲಿ ಯೋಗ, ಕ್ರೀಡೆ, ಈಜು, ಕುದುರೆ ಸವಾರಿ ಹೀಗೆ ತರತರದ ವಿದ್ಯೆ ಹೇಳಿಕೊಡಲಾಗುವುದು, ವಸತಿಯುಕ್ತ ವಿದ್ಯಾಲಯವಾಗಿದ್ದು, ಎಂಟನೆಯ ತರಗತಿಯಿಂದ ಮೇಲಿನ ಮಕ್ಕಳು ಹೆಸರು ಹಚ್ಚಬಹುದು ಎಂದಾಗ ರಾಜ್ಯವ್ಯಾಪಿ ವಿದ್ಯಾರ್ಥಿಗಳು ಇಲ್ಲಿ ಕಲಿಯಲು ಬರತೊಡಗಿದರು.

              ನೋಡ ನೋಡುತ್ತಿದ್ದಂತೆ ವಸತಿ ಯೋಗ ವಿದ್ಯಾಲಯ ಹತ್ತಾರು ಎಕರೆ ವಿಸ್ತೀರ್ಣ, ವಿವಿಧ ಕ್ರೀಡಾಂಗಣ, ಶಾಲಾ ಕೊಠಡಿಗಳು, ವಸತಿ ನಿಲಯಗಳು, ಈಜುಗೊಳ, ಭೋಜನಾಲಯ, ಕಲಾ ಮಂದಿರ, ವಿಜ್ಞಾನ ತಂತ್ರಜ್ಞಾನ ಕೊಠಡಿಗಳು ಮೊದಲಾದವುಗಳಿಂದ ವಿದ್ಯಾಲಯ ಬೃಹದ್ದಾಕಾರವಾಗಿ ಬೆಳೆಯತೊಡಗಿತು, ಆಟೋಟಗಳಲ್ಲಿ ಇಲ್ಲಿನ ಮಕ್ಕಳು ರಾಜ್ಯ ಮತ್ತು ರಾಷ್ಠ್ರೀಯ ಪ್ರಶಸ್ತಿಗೆ ಭಾಜನರಾಗತೊಡಗಿದರು. ರಾಜ್ಯ ಮತ್ತು ಕೇಂದ್ರ ಸರಕಾರಗಳ ಗಮನ ಸೆಳೆದು ಸೈ ಎನಿಸಿಕೊಂಡಿತು. ಒಂದು ಪ್ರೇಕ್ಷಣೀಯ ಸ್ಥಳವಾಗಿ ರೂಪುಗೊಂಡಾಗ ಜನ ಇಲ್ಲಿಗೆ ಬರುವುದು ಹೆಚ್ಚಾಗತೊಡಗಿತು. ರಾಜ್ಯದ  ಬಹುತೇಕ ಜಿಲ್ಲೆಗಳ ವಿದ್ಯಾರ್ಥಿಗಳು ಇಲ್ಲಿದ್ದು ವಿದ್ಯಾಭ್ಯಾಸದೊಂದಿಗೆ ವಿವಿಧ ಆಟೋಟ, ಯೋಗ, ಈಜು, ಸೈಕ್ಲಿಂಗ್ ಮೊದಲಾದವನ್ನು ಕಲಿಯುವಂತಾಯಿತು. ಓದು ಮತ್ತು ಆಟದಲ್ಲಿ ಈ ಕೇಂದ್ರದ ಕೀರ್ತಿ ಮೊಳಗಿತು. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಇಲ್ಲಿಯ ಬಾಲಕರು ವಿವಿಧ ಕ್ರೀಡೆ, ಯೋಗಾಸನಗಳಲ್ಲಿ ಹೆಸರು ಮಾಡಿದರು. ಬೇರೆ ಬೇರೆ ಮಂತ್ರಿಗಳು, ಮುಖ್ಯಮಂತ್ರಿಗಳು ಈ ಕೇಂದ್ರಕ್ಕೆ ಬರುವುದು, ಭೇಟಿ ಕೊಡುವುದು ನಡೆಯಿತು. ಹೀಗೆ ಈ ಕೇಂದ್ರವನ್ನು ನೋಡಲು ಬಂದಿದ್ದ ರಾಜ್ಯದ ಕ್ರೀಡಾ ಮಂತ್ರಿ ಬಾಪುರಾಮ ಅವರು ಈ ಕೇಂದ್ರಕ್ಕೆ ಏನಾದರೂ ಕಾಣಿಕೆ ಕೊಡಬೇಕೆಂದು ಮನಸ್ಸು ಮಾಡಿ ರಾಜಧಾನಿಗೆ ಹೋದವರು ಅಲ್ಲಿಂದ ಕೇಂದ್ರದ ಮುಖ್ಯಸ್ಥರಿಗೆ ದೂರವಾಣಿ ಕರೆ ಮಾಡಿ ‘ರಾಜಧಾನಿಯಿಂದ ಒಂದು ಅತ್ಯುತ್ತಮವಾದ ಕುದುರೆಯನ್ನು ನಿಮ್ಮ ಕೇಂದ್ರಕ್ಕೆ ಕಳಿಸುತ್ತಿದ್ದೇನೆ, ಇದು ನಿಮ್ಮ ಕೇಂದ್ರದ ಮಕ್ಕಳಿಗೆ ಕುದುರೆ ಸವಾರಿ ಕಲಿಸಲು ಅನುಕೂಲವಾಗುತ್ತದೆ’ ಎಂಬ ಸಂದೇಶದೊಂದಿಗೆ ಕುದುರೆಯನ್ನು ಕಳಿಸುವ ವ್ಯವಸ್ಥೆ ಮಾಡಿದರು. 

*

           ಸಚಿವ ಬಾಪುರಾಮ ಅವರು ಕಳಿಸಿದ ಕುದುರೆ ಅಂತಿಂಥ ಕುದುರೆಯಾಗಿರಲಿಲ್ಲ. ಇಡೀ ದೇಶದ ಜನತೆಯನ್ನು ರವಿವಾರದ ಟಿ.ವಿ. ಎದಿರು ಕೂಡುವಂತೆ ಮಾಡಿದ್ದ ‘ರಾಮಾಯಣ’ ಸಿರಿಯಲ್‍ದಲ್ಲಿನ ಅಶ್ವಮೇಧಯಾಗದ ಕುದುರೆಯಾಗಿತ್ತು. ಬಾಪುರಾಮ ಅವರು ತುಂಬಾ ಖರ್ಚು ಮಾಡಿ ಈ ಕುದುರೆಯನ್ನು ಕೊಂಡಿದ್ದರು. ತಾವು ಭೇಟಿ ನೀಡಿದ ಪ್ರೀತಿಯ ನೆನಪಿಗಾಗಿ ಈ ಯೋಗ ಶಾಲೆಗೆ ಕುದುರೆ ಕೊಡಲು ತೀರ್ಮಾನಿಸಿದ್ದರು. ಈ ಸಂಗತಿಯನ್ನು ತಿಳಿದ ಶಾಲೆಯವರು ತುಂಬಾ ಅದ್ದೂರಿಯಿಂದಲೇ ಕುದುರೆಯನ್ನು ಬರಮಾಡಿಕೊಂಡರು. ಬೆಳಗು ಹರಿಯುವ ಹೊತ್ತಿಗೆ ಗುಣಸಿರಿ ಯೋಗಶಾಲೆಯ ಈ ಕುದುರೆಯನ್ನು ನೋಡಲು ಜನ ತಂಡೋಪತಂಡವಾಗಿ ಬರತೊಡಗಿದರು. ಕುದುರೆಯ ವಿಶೇಷ ಆಹಾರಗಳು ಜಿಲ್ಲಾ ಕೇಂದ್ರದಿಂದ ರವಾನೆಯಾದವು. ನೋಡ ನೋಡುತ್ತಿದ್ದಂತೆ ಕುದುರೆ ಸುತ್ತೇಲ್ಲ ಊರಿನ ಆಕರ್ಷಣೀಯ ವಸ್ತುವಾಯಿತು. 

      ಹೀಗೆ ಜನ ಬರುವುದು ಶಾಲೆಯವರಿಗೆ ಕಿರಿಕಿರಿಯಾಯಿತು. ಜೊತೆಗೆ ಅಶ್ವಮೇಧಯಾಗದ ಈ ಕುದುರೆಗೆ ಇಲ್ಲಿನ ಬಿರು ಬಿಸಿಲು ಹಾಗೂ ರುಚಿಸದ ಆಹಾರದಿಂದ ಯಾರೊಂದಿಗೂ ಸರಳವಾಗಿ ಬೆರೆÉಯಲಿಲ್ಲ. ಮಾನ್ಯ ಮಂತ್ರಿಗಳು ಕುದುರೆಯೊಂದಿಗೆ ಇದರ ಉಸ್ತುವಾರಿ ನೋಡಿಕೊಳ್ಳಲು ಇರಲೆಂದು ತಮ್ಮೂರಿನ ಒಬ್ಬ ಆಳುಮನುಷ್ಯ ಸಂಗಪ್ಪನನ್ನು ಕೊಟ್ಟು ಕಳಿಸಿದ್ದರು. ಕುದುರೆಯ ರ ಠ ಈ ಕ ಬಲ್ಲ ಈ ಸಂಗಪ್ಪ ಅದರ ಮೈಮೇಲೆ ಕೈ ಸವರಿ ಆತ್ಮೀಯತೆ ಬೆಳೆಸಿಕೊಂಡಿದ್ದ, ಹೀಗಾಗಿ ಅವನಿಗಷ್ಟೇ ಅದು ಸಹಕರಿಸತೊಡಗಿತು. ಸವಾರಿಗೆ ಬಳಸಿಕೊಳ್ಳಬೇಕೆಂದರೆ ಹತ್ತಿದವರನ್ನು ಕೆಡವಿ, ಹಿಂಗಾಲಿನಿಂದ ಒದ್ದು ಎಂತಿಂಥವರನ್ನೂ ಹಿಗ್ಗಾ ಮುಗ್ಗಾ ಝಾಡಿಸಿ ಬಿಡುತಿತ್ತು.

       ಹೀಗೆ ಹತ್ತಾರು ದಿನಗಳು ಕಳೆದ ಮೇಲೆ ಹವಾಮಾನದ ವೈಪರಿತ್ಯದಿಂದಾಗಿಯೋ, ಆಹಾರದ ಬದಲಾವಣೆಯಿಂದಾಗಿಯೋ ಕುದುರೆ ತನ್ನ ಮುಂಚಿನ ಗತ್ತುಗಾರಿಕೆಯನ್ನು ಕಳೆದುಕೊಳ್ಳತೊಡಗಿತು. ಬಾಲಕರಿಗೆ ಕುದುರೆ ಸವಾರಿ ಮಾಡಿಸಬೇಕೆಂದರೆ ಅದರ ವಿದ್ಯೆ ಬಲ್ಲ ತರಬೇತುದಾರರ ಅಗತ್ಯವಿತ್ತು. ಯಾರೂ ಎಲ್ಲೂ ಸಿಗದಿದ್ದಾಗ ಅನಿವಾರ್ಯವಾಗಿ ಅದನ್ನು ನೆನೆ ಹಾಕಿದ ಕಾಳುಗಳಿಂದ ಮೇಯಿಸಿವುದೇ ಆಯಿತು. ಕುದುರೆಗೆ ಯಾವಾಗ ಕೆಲಸವಿಲ್ಲದಾಯಿತೋ, ಕುದುರೆ ನೋಡಿಕೊಳ್ಳುತ್ತಿದ್ದ ಸಂಗಪ್ಪನಿಗೂ ಅದರ ಆಹಾರ, ಸ್ನಾನ, ಸ್ವಚ್ಛತೆ ಬಿಟ್ಟರೆ ಬೇರೆ ಕೆಲಸವಿಲ್ಲದಾಯಿತು. ಅಷ್ಟಿಷ್ಟು ಸೆರೆ ಕುಡಿಯುವ ಚಟ ಹೊಂದಿದ್ದ ಸಂಗಪ್ಪ ಗುಣಸಿರಿಗೆ ಹೋಗಿ ಪಾಕೀಟು ಹಾಕಿ ಬರುತ್ತಿದ್ದ. ಅಲ್ಲಿ ಪಾಕೀಟು ಹೊಟ್ಟೆ ತುಂಬಾ ಹಾಕಿ ಕಂಠಪೂರ್ತಿಯಾದ ಮೇಲೆ ಕೂಡಿದ ಜನರೆದಿರು ಕುದುರೆಯ ವರ್ಣನೆ ಮಾಡುತ್ತಿದ್ದ. ‘ದೇವ ಲೋಕದಿಂದ ಬಂದ ಕುದುರೆಯನ್ನು ಸ್ವತಃ ದೇವರು ಮಾತ್ರ ನಡೆಸಬಲ್ಲ. ಆ ದೇವರು ನಾನು’ ಎಂದು ಹೇಳಿಕೊಳ್ಳುತ್ತಿದ್ದ. ಇದರಿಂದಾಗಿ ಸಹಪಾಠಿ ಪಾಕೀಟು ಪ್ರಿಯರು ಸಂಗಪ್ಪನಿಗೆ ವಿಶೇಷವಾದ ಗೌರವ ಕೊಡುತ್ತಿದ್ದರು. ಪಾಕೀಟು ದಾಸನಾದ ಸಂಗಪ್ಪನಿಗೆ ಬರುಬರುತ್ತಾ ಹಣದ ಅಗತ್ಯ ಹೆಚ್ಚಾಯಿತು. ಅವನ ಸಂಬಳದಲ್ಲಿ ಇದೆಲ್ಲಾ ಸಾಲದಾಯಿತು. ಕುದುರೆಯನ್ನು ಒಂದೇ ಕಟ್ಟಿದರೆ ಕುದುರೆ ಹೋಗಿ ಕತ್ತೆಯಾದೀತೆಂದು ಆಟದ ಮಾಸ್ತರರ ಸಲಹೆಯಂತೆ ಅದನ್ನು ಸವಾರಿ ಮಾಡಿಕೊಂಡು ಬರಲು ಸಂಗಪ್ಪ ಶಾಲೆಯಿಂದ ಐದಾರು ಕಿಲೋ ಮೀಟರು ತೆಗೆದುಕೊಂಡು ಹೋಗಿ ಬರುತ್ತಿದ್ದ. 

  ಮುಂಚಿನ ಗತ್ತುಗಾರಿಕೆಯನ್ನು ಕಳೆದುಕೊಂಡಿದ್ದ ಕುದುರೆಯನ್ನು ಈಗ ಯಾರು ಬೇಕಾದರೂ ಹತ್ತಿ ಸವಾರಿ ಮಾಡಬಹುದಾಗಿತ್ತು. ಗುಣಸಿರಿಗೆ ಹೋಗುತ್ತಿದ್ದ ಸಂಗಪ್ಪನಿಗೆ ಊರ ಹುಡುಗರು ಐದು, ಹತ್ತು ನೀಡಿ ಸಂಗಪ್ಪನೊಂದಿಗೆ ಕುದುರೆ ಸವಾರಿ ಮಾಡಿಕೊಂಡು ಬರುತ್ತಿದ್ದರು. ಆ ರೂಪಾಯಿಗಳಲ್ಲಿ ಸಂಗಪ್ಪನಿಗೆ ಪಾಕೀಟಿನ ಚಿಂತೆ ದೂರವಾಯಿತು. ಒಂದೆಡೆ ಕುದುರೆಯ ಉಸ್ತುವಾರಿ ಖರ್ಚು ಹೆಚ್ಚುತ್ತಾ ಹೋಗಿದ್ದು, ಮತ್ತೊಂದೆಡೆ ಸಂಗಪ್ಪ ತನ್ನ ಪಾಕೀಟು ಚಟಕ್ಕಾಗಿ ಕುದುರೆಯನ್ನು ಬಳಸಿಕೊಳ್ಳುತ್ತಿರುವುದು ತಿಳಿದು ಜಿಲ್ಲಾ ಕೇಂದ್ರದಲ್ಲಿದ್ದ ಕೇಂದ್ರದ ಆಡಳಿತ ಮಂಡಳಿಯ ಪಿತ್ತ ನೆತ್ತಿಗೇರುವಂತಾಯಿತು. ಒಂದು ರವಿವಾರ ಕೇಂದ್ರ ಅರಮನೆ ಸಭಾಂಗಣದಲ್ಲಿ ಅವರೆಲ್ಲ ಮೀಟಿಂಗು ಸೇರಿ ಮೊದಲು ಸಂಗಪ್ಪನಿಗೆ ಗೇಟ್ ಪಾಸ್ ಕೊಟ್ಟು ಕಳಿಸಿದರು. ಕುದುರೆಗಳನ್ನು ಸಾಕಿಕೊಳ್ಳುವ ಹವ್ಯಾಸವಿದ್ದ ಮೂಡಗಲ್ಲು ಸಂಸ್ಥಾನದ ಮಹಾರಾಜರಿಗೆ ನಮ್ಮದೊಂದು ಕುದುರೆಯನ್ನು ತಮ್ಮ ಕುದುರೆಗಳೊಂದಿಗೆ ಸಾಕಿಕೊಳ್ಳಬೇಕೆಂದು ವಿನಂತಿ ಮಾಡಿದಾಗ ಮಹಾರಾಜರು ಒಲ್ಲೆ ಎನ್ನಲಿಲ್ಲ. ‘ಕಳಿಸಿ ಕೊಡಿ, ತುಂಬಾ ಒಳ್ಳೆಯದಾಯಿತು’ ಎಂದರು.

      ಕೇಂದ್ರದ ಅಡುಗೆ ಸಿಬ್ಬಂದಿಯವರು ಹತ್ತು ಕಿಲೋಮೀಟರು ದೂರವಿರುವ ಮೂಡಗಲ್ಲು ಅರಮನೆಗೆ ಕುದುರೆಯನ್ನು ಬಿಟ್ಟು ಬರಲು ಸಿದ್ದರಾದರು. ಯಾಗದ ಕುದುರೆ ಸಿದ್ದವಾಗಿ ಗುಣಸಿರಿಯಿಂದ ಮೂಡಗಲ್ಲಿಗೆ ಪ್ರಯಾಣಕ್ಕೆ ಹೊರಟು ನಿಂತಾಗ ಶಾಲೆಯ ಬಾಲಕರು ವಿಶೇಷ ಆದರಾಭಿಮಾನಗಳಿಂದ ಬಿಳ್ಕೊಟ್ಟರು. ಇಲ್ಲಿ ಇರುವಷ್ಟು ಕಾಲ ಉಣ್ಣಲು, ತಿನ್ನಲು ಎಳಷ್ಟೂ ಕಡಿಮೆ ಮಾಡಿರದ ಕಾರಣವಾಗಿ ಕುದುರೆ ತುಂಬಾ ಚೆನ್ನಾಗಿಯೇ ಬೆಳೆದಿತ್ತಾದರೂ, ಅದರ ತಕ್ಕುದಾದ ಕೆಲಸವಿಲ್ಲದ ಕಾರಣ ಕುದುರೆ ಒಂದರ್ಥದಲ್ಲಿ ಕತ್ತೆಯಾಗಿ ಪರಿವರ್ತನೆಯಾಗಿತ್ತು. ವೇಳೆಗೆ ಸರಿಯಾಗಿ ತಿನ್ನುವುದನ್ನು ಬಿಟ್ಟರೆ, ಅದಕ್ಕೆ ಕೆಲಸ ಮತ್ತು ತಿರುಗಾಡುವುದೆಂದರೆ ಅಲರ್ಜಿಯಾಗಿತ್ತು. ಶಾಲೆಯನ್ನು ಬಿಟ್ಟು ಮೂಡಗಲ್ಲು ಸಂಸ್ಥಾನಕ್ಕೆ ಹೊರಟ ಕುದುರೆ ತುಂಬಾ ನೋವಿನಿಂದಲೆ ತನ್ನ ಪಯಣ ಬೆಳೆಸಿತು.

*

     ಸಂಸ್ಥಾನಕ್ಕೆ ಕುದುರೆಯನ್ನು ಬರಮಾಡಿಕೊಂಡ ಮಹಾರಾಜರು ಅಪರೂಪವಾದ ಈ ಕುದುರೆ ತಮ್ಮ ವಾಡೆಯನ್ನು ಸೇರಿದ್ದು ತಂಬಾ ಸಂತೋಷದಿಂದಲೆ ಸ್ವಾಗತಿಸಿದರು. ವಾಡೆಯ ಇತರ ಕುದುರೆಗಳೊಂದಿಗೆ ಬೆರೆಯಬೇಕಾದ ಯಾಗದ ಈ ಕುದುರೆ ಅಲ್ಲೂ ತನ್ನ ಮೊಂಡಾಟ ಹಿಡಿಯಿತು. ಶಾಲೆಯಲ್ಲಿದ್ದಾಗ ವೇಳೆಗೆ ಸರಿಯಾಗಿ ಉಣ್ಣಲು ತಿನ್ನಲು ಸಾಕಷ್ಟು ಬರುತ್ತಿದ್ದ ಕುದುರೆಗೆ ಇಲ್ಲಿಯ ನಿಯಮಿತತನ, ಸವಾರಿಯ ಅಭ್ಯಾಸಕ್ಕೆ ಹೊಂದಿಕೊಳ್ಳದೇ ಹೋಯಿತು. ಬಂದ ಇಡೀ ದಿನವಂತೂ ತನ್ನ ಮೊಂಡಾಟ ಹಿಡಿಯಿತು. ಹಗ್ಗ ಜಗ್ಗಿ ತಪ್ಪಿಸಿಕೊಳ್ಳಲು ನೋಡಿತು. ಮಾಹಾರಾಜರು ಎಷ್ಟೇ ಕಾಳಜಿ ಮಾಡಿದರೂ ಅದರ ಲಕ್ಷ್ಯವೆಲ್ಲಾ ಶಾಲೆಯ ಕಡೆಗೆ ಇದ್ದೀತು. ವಾಡೆಯ ಆಳುಗಳಿಗೆ ಈ ಕುದುರೆಯ ಮೊಂಡಾಟ ಸಹಿಸದಾಯಿತು. ಗುಣಸಿರಿಯಲ್ಲಿ ಇರುವಷ್ಟು ಕಾಲ ಏಟಿನ ರುಚಿ ನೋಡಿರದಿದ್ದ ಕುದುರೆಗೆ ಇಲ್ಲಿ ತಹಬದಿಗೆ ತರಲು ಪ್ರಯೋಗಿಸಿದ್ದ ಛಾಟಿ ಏಟುಗಳು ಕುದುರೆಯನ್ನು ತಲ್ಲಣಗೊಳಿಸಿದವು. ಈ ಎಲ್ಲ ತಲ್ಲಣಗಳ ಮುಕ್ತತೆಗಾಗಿ ರಾತ್ರಿ ಯಾವಾಗಲೋ ಹಗ್ಗ ಹರಿದುಕೊಂಡು ಯಾಗದ ಕುದುರೆ ವಾಡೆ ಬಿಟ್ಟು ತಪ್ಪಿಸಿಕೊಂಡು ಹೋಗಿತ್ತು.

*

        ಸಂಸ್ಥಾನದ ಮಹಾರಾಜರು ಗುಣಸಿರಿ ಯೋಗ ಶಾಲೆಗೆ ಫೋನಾಯಿಸಿ, ‘ನಿಮ್ಮ ಕುದುರೆ ತಪ್ಪಿಸಿಕೊಂಡು ಹೋಗಿದೆ, ಶಾಲೆಗೇನಾದರೂ ಬಂದಿದ್ದರೆ ತಿಳಿಸಿ’ ಎಂದರು. ಬೆಳಗು ಮುಂಜಾನೆ ಬಂದ ಈ ಬರ ಸಿಡಿಲಿನ ವಾರ್ತೆ ವಸತಿ ಶಾಲೆಯ ಸಿಬ್ಬಂದಿಯ ತೆಲೆ ಕೆಡಿಸಿತು. ನೂರು ಎಕರೆ ವಿಶಾಲ ವಿಸ್ತೀರ್ಣದ ವಸತಿ ಶಾಲೆಯ ಪ್ರತಿ ಇಂಚಿಂಚೂ ಹುಡುಕಿಕೊಂಡು ಬಂದ ಶಾಲೆಯ ಸಹಾಯಕ ಸಿಬ್ಬಂದಿ ‘ಇಲ್ಲಿ ನಮ್ಮಲ್ಲಿ ಬಂದಿಲ್ಲ’ ಎಂದರು. ಹಾಗಾದರೆ ಎಲ್ಲಿ ಹೋಗಿರಬಹುದೆಂಬ ಚಿಂತೆ ಶಾಲೆಯವರನ್ನೂ ಕಾಡಿತು. ಜಿಲ್ಲಾ ಕೇಂದ್ರಕ್ಕೆ ಫೋನಾಯಿಸಿ ಆಡಳಿತಗಾರರಿಗೆ ಈ ಆಘಾತಕಾರಿ ಸುದ್ದಿ ಮುಟ್ಟಿಸಲಾಯಿತು. ತೀವ್ರ ಕಾಳಜಿ ಹೊಂದಿದ್ದ ಅವರು ‘ಕುದುರೆ ಎಲ್ಲಿಯೇ ಇರಲಿ, ಮಹಾರಾಜರೊಂದಿಗೆ ಹುಡುಕುವುದು ನಮ್ಮ ಕರ್ತವ್ಯವಾಗಿದೆ.’ ಎಂದರು. ಶಾಲೆಯ ಪಾಠ ಹೇಳುವ ಸಿಬ್ಬಂದಿ ಶಾಲೆಯಲ್ಲಿಯೇ ಉಳಿದು ಆಟದ ತರಬೇತುದಾರರೆಲ್ಲರೂ ಉಳಿದ ಸಿಬ್ಬಂದಿಯೊಂದಿಗೆ ತಂಡವಾಗಿ ಎಲ್ಲ ದಿಕ್ಕುಗಳಲ್ಲೂ ಕುದುರೆಯನ್ನು ಹುಡುಕುವುದು ಎಂದು ತೀರ್ಮಾನವಾಗಿ ಮೆಸ್ಸಿನಲ್ಲಿ ಸಿದ್ದವಾದ ಬೆಳಗಿನ ಅವಲಕ್ಕಿ, ಹಾಲು, ತತ್ತಿ, ಬಾಳೆಹಣ್ಣು ಹೊಟ್ಟೆಗೆ ಹಾಕಿಕೊಂಡು ಶಾಲಾ ಕ್ರೀಡಾ ಸಿಬ್ಬಂದಿ ಹೊರಡಲನುವಾಯಿತು. ಮಹಾರಾಜರಿಗೆ ಕರೆ ಮಾಡಿ ನಮ್ಮ ಶಾಲಾ ಸಿಬ್ಬಂದಿಯೂ ಯಾಗದ ಕುದುರೆ ಹುಡುಕಲು ಅಣಿಯಾಗಿದ್ದು, ನಮ್ಮ ಜಿಲ್ಲಾ ಆಡಳಿತಗಾರರು ತೀವ್ರವಾಗಿ ಸ್ಪಂದನ ನೀಡಿದ್ದು ನೀವೇನು ಕಾಳಜಿ ಮಾಡದಿರಿ ಅಂದಾಗ, ಮಹಾರಾಜರು ತಾವೂ ಕುದುರೆ ಹುಡುಕಲು ಹೊರಟಿದ್ದಾಗಿ ತಿಳಿಸಿದರು. ಪೂರ್ವ ದಿಕ್ಕಿನಿಂದ ಮಹಾರಾಜರು, ಪಶ್ಚಿಮ ದಿಕ್ಕಿನಿಂದ ಶಾಲಾ ಸೈನ್ಯ ಕುದುರೆ ಅರಸಿ ಕಾಡಿಗೆ ಬಿದ್ದರು.

*

      ಯಾಗದ ಕುದುರೆ ಹುಡುಕಲು ಸ್ವತಃ ಹೊರಟ ರಾಜದಂಪತಿಗಳನ್ನು ಊರಜನ ಕೋಟೆ ದ್ವಾರದ ವರೆಗೂ ಬಂದು ಬಿಳ್ಕೊಟ್ಟು ಶುಭ ಹಾರೈಸಿದರು. ಸ್ವತಃ ಜೀಪು ಚಾಲನೆ ಮಾಡುತ್ತಿದ್ದ ಮಹಾರಾಜರು ಹಿಂದೆ ವಯಸ್ಸಿನಲ್ಲಿ ಮುಂಬೈ ,ಕೊಲ್ಲಾಪುರ, ಹೈದರಾಬಾದಗಳಲ್ಲಿ ನಡೆದ ಜೀಪು ರೇಸಿನಲ್ಲಿ ಪಾಲ್ಗೊಂಡು ಬಹುಮಾನ ಪಡೆದುಕೊಂಡು ಬಂದಿದ್ದರು. ಮಹಾರಾಜರ ಜೀಪಿನಲ್ಲಿ ಪಯಣಿಸುವುದೆಂದರೆ ಮಹಾರಾಣಿಯವರಿಗೂ ರೂಢಿಯಾಗಿ ಹೋಗಿತ್ತು. ಏಳು ಸುತ್ತಿನ ಕೋಟೆ ದಾಟಿ ಬಂದಾಗ ಸುತ್ತ ಹಸಿರು ತುಂಬಿದ ಕಬ್ಬು, ತೆಂಗು, ಬಾಳೆ, ಪೇರಲ, ಚಿಕ್ಕು ತೋಟಗಳಿಂದ ಭೂರಮೆ ಶೃಂಗಾರಗೊಂಡಿದ್ದಳು. ಕುದುರೆಯ ಜಾಡು ಹಿಡಿದು ಹೊರಟ ಮಹಾರಾಜರು ದಾರಿಯೆಲ್ಲಿ ಸಿಕ್ಕವರನ್ನೇಲ್ಲ ‘ಕುದುರೆ ಕಂಡೀರಾ, ನಮ್ಮ ವಾಡೆ ಕುದುರೆ ಕಂಡೀರಾ?’ ಎಂದು ಕೇಳುತ್ತಿದ್ದರು. ಇಳೆಮಾವು ಕಾಲುವೆ ಬಳಿ ನೀರು ಕುಡಿಯಲು ಕುದುರೆಯೊಂದು ಹವಣಿಸುತ್ತಿದ್ದುದನ್ನು ಕಂಡಿದ್ದ ಒಬ್ಬ ರೈತ ಮಹಾರಾಜರಿಗೆ ನಿಖರ ಮಾಹಿತಿಯನ್ನು ನೀಡಿದಾಗ ಮಹಾರಾಜರು ತಮ್ಮ ಜೀಪು ಇಳಿದು ಮಹಾರಾಣಿಯವರೊಂದಿಗೆ ಕಾಲ್ನಡಿಗೆಯಲ್ಲಿಯೇ ಪಯಣ ಬೆಳೆಸಿದರು. ಮಹಾರಾಜರೊಂದಿಗೆ ಅಲ್ಲಲ್ಲಿ ಕೆಲಸ ಮಾಡುತ್ತಿದ್ದ ರೈತರೂ ಸೇರಿಕೊಂಡರು.

*

        ಇತ್ತ ಪೂರ್ವಾಭಿಮುಖವಾಗಿ ಸಾಗಿದ್ದ ಶಾಲಾ ಸೈನ್ಯ ಯಾವ ವಾಹನಗಳಿಗೂ ಮೊರೆ ಹೋಗದೇ ಕಾಲ್ನಡಿಗೆಯಿಂದಲೇ ತಮ್ಮ ಪಥ ಸಂಚಲನದಿಂದ ರವಿಪುರ, ಕಡೇಗೊಳ್ಳ, ವೀರಭದ್ರ ಊರುಗಳನ್ನು ದಾಟಿ ಆರ್ಧ ದಾರಿ ಸವೆಸಿದ್ದರು. ಕಂಡ ಕಂಡ ಎಮ್ಮೆ, ಆಕಳು, ಕತ್ತೆ ಒಂದೂ ಬಿಡದೇ ಎಲ್ಲ ಪ್ರಾಣಿಗಳನ್ನು ಜಾಲಾಡಿದರೂ ‘ಯಾಗದ ಕುದುರೆ’ ಕಣ್ಣಿಗೆ ಕಾಣಲಿಲ್ಲ. ಅಲ್ಲಲ್ಲಿ ಬೀದಿ ತಿರುಗಿ ಹುಲ್ಲು ಮೇಯುತ್ತಿದ್ದ ಹೆಳವರ ಕುದುರೆಗಳನ್ನು, ಕುರಿಗಳೊಂದಿಗೆ ಕುದುರೆ ಸಾಕಿಕೊಂಡಿದ್ದ ಚಿಕ್ಕೋಡಿ ಭಾಗದ ಕುರಿಗಾರರ ಕುದುರೆಗಳನ್ನು ಸ್ವತಃ ಮುಟ್ಟಿ ನೋಡಿ ಇದು ತಮ್ಮದಲ್ಲವೆಂದು ಖಾತ್ರಿ ಮಾಡಿಕೊಂಡು ಮುಂದೆ ಸಾಗಿದರು. 

*

    ಮಹಾರಾಜರು ಮಾಹಿತಿ ಸಂಗ್ರಹ ಮಾಡಿಕೊಂಡು ಕಾಲ್ನಡಿಗೆ ಬಿಟ್ಟು ಮತ್ತೆ ಜೀಪು ಹತ್ತಿದರು. ಈ ಬಾರಿ ಅವರಿಗೆ ಹಸಿರಸಿರಿ ಕಡಿಮೆಯಾಗಿ ಗರಸು ಮಣ್ಣಿನ ಮತ್ತು ಅಲ್ಲಲ್ಲಿ ಶೇಂಗಾ ಬೆಳೆದ ಹೊಲಗಳು ಹತ್ತಿದವು. ಜೀಪಿನ ಪ್ರಯಾಣವನ್ನು ಅವರು ಮುಖ್ಯ ರಸ್ತೆ ಬಿಟ್ಟು ಒಳದಾರಿಯಲ್ಲಿ ಮುಂದುವರೆಸಿದರು. ಹೊಲಗಳ ಒಡ್ಡು, ಏರಿ ಇಳಿದು ಅವರ ಜೀಪು ಪಯಣಿಸತೊಡಗಿತು. ಅಲ್ಲಲ್ಲಿ ಗುಡಿಸಲವಾಸಿಗಳು ಮೂಡಗಲ್ಲು ಸಂಸ್ಥಾನದ ರಾಜದಂಪತಿಗಳು ತಮ್ಮ ಬಳಿ ಬಂದಿರುವುದನ್ನು ಕಂಡು ಹೌಹಾರಿ ಹರ್ಷಚಿತ್ತರಾದರು. ಬಂದ ಸಂಗತಿಯನ್ನು ಮಹಾರಾಜರು ಅರುಹಿ ಕುದುರೆ ಇರುವಿಕೆಯ ಬಗ್ಗೆ ಕೇಳಿದರು. ಈ ಹೊತ್ತಿಗೆ ನೆತ್ತಿಯ ಮೇಲೆ ಬಂದ ಸೂರ್ಯ ತನ್ನ ಸುಡುಬಿಸಿಲಿನಿಂದ ಮಹಾರಾಣಿಯವರಿಗೆ ತೀವ್ರ ಆಯಾಸವನ್ನುಂಟು ಮಾಡಿದನು. ಗುಡಿಸಲ ಬಳಿಯ ಬೇವಿನ ಮರದ ತಂಪಿನಲ್ಲಿ ವಿಶ್ರಮಿಸಿಕೊಂಡು ಮಹಾರಾಣಿಯವರು ರೈತಾಪಿ ಜನರ, ಸಾಮಾನ್ಯ ಸರಳ ಬದುಕನ್ನು ಕಂಡು ತುಂಬಾ ಖುಷಿ ಅನುಭವಿಸಿದರು.

*

  ಪ್ರಖರ ಸುಡುಬಿಸಿಲಿನಲ್ಲಿ ಸೋತು ಸುಣ್ಣವಾಗಿ ಹೋಗಿದ್ದ ಇತ್ತ ಕೇಂದ್ರ ಸೈನ್ಯ ಯಾಗದ ಕುದುರೆಯ ಅನ್ವೇಷಣೆಗೆ ಬರುವಾಗ ಪೂರ್ವ ತಯಾರಿಯಿಲ್ಲದೇ, ಹುಂಬು ನಿರ್ಣಯದಿಂದ ಬಂದಿದ್ದ ಕಾರಣವಾಗಿ ಕುಡಿಯಲು ನೀರು, ತಿನ್ನಲು ಆಹಾರ ಜೊತೆಯಲ್ಲಿ ತಂದಿರಲಿಲ್ಲ. ಹೊತ್ತೇರಿದಂತೆ ಹೊಟ್ಟೆಯ ಹಸಿವು ಜಾಸ್ತಿಯಾಗಿ ಕಣ್ಣಲ್ಲಿ ಚುಕ್ಕೆ ಮೂಡಿ ತಮ್ಮ ಆಹಾರದ ಕುರಿತು ಚಿಂತಿಸತೊಡಗಿದರು. ತದಲಬಾಗಿ ಲಕ್ಕವ್ವ ನಮ್ಮ ಹೊಟ್ಟಿ ತುಂಬಸ ಎಂದು ಬೇಡಿಕೊಂಡರು. ಸಮೀಪದಲ್ಲಿಯೇ ಗೊಡದಳ್ಳಿ ಇರುವದಾಗಿಯೂ ಅಲ್ಲಿ ಹಳ್ಳಿ ಹೊಟೇ¯ದಲ್ಲಿ ಸಿಕ್ಕಷ್ಟು ತಿಂದರಾಯ್ತೆಂದು ಹೊಟ್ಟೆಯ ಹಸಿವಿನಿಂದ ದಿಕ್ಕು ಬದಲಿಸಿ ಗೊಡದಳ್ಳಿ ಕಡೆಗೆ ಹೆಜ್ಜೆ ಹಾಕಿದರು.

      ರಾಜ ದಂಪತಿಗಳ ಪಯಣ ಸುಡುಬಿಸಿಲು ಲೆಕ್ಕಿಸದೇ ಮುಂದುವರೆದಿತ್ತು. ಒಮ್ಮೆ ಜೀಪಿನಲ್ಲಿ ಮಗದೊಮ್ಮೆ ಕಾಲ್ನಡಿಗೆಯಲ್ಲಿ ಸಾಗುತ್ತಾ ಕುದುರೆಯ ಅನ್ವೇಷಣೆಯಲ್ಲಿ ತೊಡಗಿದ್ದ ಸಂಸ್ಥಾನದ ಈ ಕುಟುಂಬಕ್ಕೆ ಹುಚ್ಚು ನಾಯಿಯೊಂದರ ರೌದ್ರಾತಾರ ದರ್ಶನವಾಯಿತು. ನಾಯಿ ಕಚ್ಚುವ ರೀತಿಯಲ್ಲಿ ಮಹಾರಾಜರ ಮೈಮೇಲೆ ಏರಿ ಬರುವುದು ಮಹಾರಾಜರಿಗೆ ಸಹಿಸಿಕೊಳ್ಳಲಾಗಲಿಲ್ಲ. ರಾಣಿಯವರ ಪಿತ್ತ ನೆತ್ತಿಗೇರಿತು. ಜೀವದ ಮೇಲಿನ ಭಯದಿಂದ ಮಹಾರಾಜರು ಹಾರಿಸಿದ ಬಂದೂಕಿನ ಗುಂಡಿಗೆ ನಾಯಿಯು ಬ್ರಹ್ಮಾಂಡ ವ್ಯಾಪಿಸುವ ಹಾಗೆ ಚೀರಿ ಹೊಕ್ಕ ಗುಂಡನ್ನು ಹೊಟ್ಟೆಯಲ್ಲಿಟ್ಟುಕೊಂಡು ಸುರಿಯುವ ರಕ್ತವನ್ನು ಲೆಕ್ಕಿಸದೇ ಓಡತೊಡಗಿತು. ಅದುವರೆಗೂ ತಮ್ಮ ಪಾಡಿಗೆ ತಾವು ದೂರದಲ್ಲಿ ಹೊಲಗದ್ದೆಗಳಲ್ಲಿ ಕೆಲಸ ಮಾಡಿಕೊಂಡಿದ್ದ ರೈತಾಪಿ ಜನ ಈ ಗುಂಡಿನ ಸಪ್ಪಳ ಮತ್ತು ನಾಯಿಯ ಚೀರಾಟಕ್ಕೆ ಬೆಚ್ಚಿಬಿದ್ದು ಕೊಡಲಿ ಬಡಿಗೆಗಳೊಂದಿಗೆ ಓಡಿ ಬಂದರು. ಸ್ವತಃ ಮೂಡಗಲ್ಲು ರಾಜದಂಪತಿಗಳನ್ನು ಕಂಡ ಅವರು ಈ ಹುಚ್ಚುನಾಯಿ ಬಹಳ ದಿನಗಳಿಂದ ನಮಗೆಲ್ಲಾ ಕಾಡುತ್ತಿದ್ದು, ನಮಗೆಂದು ಸಿಗಲಿಲ್ಲ, ನಿಮ್ಮ ಕೈಯಲ್ಲಿ ಸಿಕ್ಕು ಅವಸಾನವಾಗಿದ್ದು ನಾವೆಲ್ಲಾ ನೆಮ್ಮದಿಯಿಂದ ಇರುವಂತಾಯಿತು ಎಂದು ಕೃತಜ್ಞತೆ ಹೇಳಿದರು, ಸತ್ತೇನೋ ಬಿದ್ದೇನೋ ಎಂದು ಓಟ ಕಿತ್ತಿದ ನಾಯಿಯ ಚೀರಾಟ  ನಿಧಾನಕ್ಕೆ ಸ್ಥಬ್ಧವಾಯಿತು, ರಾಜ ದಂಪತಿಗಳ ಪಯಣಕ್ಕೆ ಜೀಪು ಮುನ್ನಡೆಯಿತು..

*

   ಒಂದೆಡೆ ನೆತ್ತಿ ಸಡುವ ಉರಿಬಿಸಿಲು, ಖಾಲಿ ಹೊಟ್ಟೆಯಲ್ಲಿ ಕಂಗಾಲಾಗಿದ್ದ ಕೇಂದ್ರ ಸೈನ್ಯಕ್ಕೆ ಊರುಗೋಲವೆಂಬಂತೆ ಒಂದು ಗುಡಿಸಲು ಸಿಕ್ಕಿತು. ಒಳಹೊಕ್ಕು ನೋಡಿದಾಗ ಮುದುಕಿಯೊಬ್ಬಳು ಕಬ್ಬಿಣದ ಕಾಟದ ಮೇಲೆ ಒರಗಿದ್ದಳು. ಮನೆಯ ಇತರೆ ಸದಸ್ಯರು ದುಡಿಯಲಿಕ್ಕೆ ಹೊರಗೆ ಹೋಗಿದ್ದರು. ಹಾಕಿ ಮಾಸ್ತರರು ಗುಡಿಸಿನಲ್ಲಿ ಹಣುಕಿ ಹಾಕಿ ‘ಎಮ್ಮಾ ನಾವು ಮಾಸ್ತರ ಅದೀವು, ದೂರದಿಂದ ಬಂದೇವು. ನಮ್ಮ ಕುದುರೆ ಕಳಕೊಂಡಿತ್ತು, ಹುಡುಕಿಕೊಂಡು ಬಂದೇವ, ಈ ಕಡೆ ಏನಾರ ಬಂದೀತೇನ’ ಎಂದು ವಿಚಾರಿಸಿದರು. ಸರಿಯಾಗಿ ಕಣ್ಣು ಕಾಣದ, ಕಿವಿಯೂ ಕೇಳದ ಮುದುಕಿಗೆ ಯಾರು ಬಂದು ಏನು ಹೇಳಿದರು ಎಂದು ತಿಳಿಯದೇ ನಿದ್ದೆಗಣ್ಣಿಂದ ಎದ್ದು, ಕಣ್ಣು ಪಿಳಿ ಪಿಳಿ ಬಿಡತೊಡಗಿತು. ಇದು ಇತರ ಮಾಸ್ತರರಿಗೆ ಅರ್ಥವಾಯಿತು. ಮುದುಕಿಗೆ ನಾವು ಏನೇ ಹೇಳಿದರೂ ತಿಳಿಯುವದಿಲ್ಲ, ಎಂದು ಖಾತ್ರಿ ಮಾಡಿಕೊಂಡು, ಕೈ ಸೊನ್ನೆ ,ಬಾಯಿ ಸೊನ್ನೆ ಮಾಡಿ ಕುಡಿಯಲು ನೀರು ಕೇಳಿದರು. ‘ಆಯ್ತು.. ಆಯ್ತು ಎಂದು ಮುದುಕಿ ಅವರಿಗೆ ಕೂಡ್ರಲು ಹೇಳಿ ಸೀದಾ ಇನ್ನೊಂದು ಗುಡಿಸಿಲಿಗೆ ಹೋಗಿ ಒಂದ ಗಡಗಿ. ಒಂದ ಗ್ಲಾಸು ತಂದು ಮುಂದಿಟ್ಟಳು. ಹೋ.. ಅಜ್ಜಿ ಮಜ್ಜಿಗಿ ತಂದಾಳ ಎಂದು ತಿಳಿದು ಕಬ್ಬಡ್ಡಿ ಮಾಸ್ತರು ಎತ್ತಿ ಸುರುವಿಕೊಂಡು ಗ್ಲಾಸು ಬಾಯಿಗೆ ಹಚ್ಚಿದಾಗಲೇ ಗೊತ್ತಾಗಿದ್ದು, ಇದು ಮಜ್ಜಿಗೆ ಅಲ್ಲ ಸೇಂದಿ ಎಂದು. ಥೂ..ಥೂ ಎಂದು ಉಗುಳುತ್ತಾ ‘ಏನಬೇ ಮುದುಕಿ ನೀನು ನೀರ ಕೇಳಿದ್ರ ಮಜ್ಜಿಗಿ ಕೊಟ್ಟಿ ಅಂತಾ ಮಾಡಿದ್ವಿ, ನೀ ನೋಡಿದರ ಈ ಹೊಲಸ ಸೆರೆ ಕುಡಿಯಾಕ ಕೊಟ್ಟಿಯೆಲ್ಲ’ ಎಂದು ಗ್ಲಾಸು ಇಟ್ಟು ಮಾರುದೂರ ಜಿಗಿದು ನಿಂತರು. ಈ ಎಲ್ಲ ಸನ್ನಿವೇಶಗಳನ್ನು ದೂರದಲ್ಲಿ ಮರದ ಮೇಲೆ ಹುಣಸೇಕಾಯಿ ಹರಿಯುತ್ತಿದ್ದ ಧಡೂತಿ ಆಸಾಮಿ ಒಬ್ಬ ನೋಡಿ ಕೆಳಗಿಳಿದು ಬಂದು, ‘ರೀ ಸಾಹೇಬ್ರಾ.. ಯಾರ ಅದೀರಿ ನೀವು, ನಮ್ಮದು ಇಲ್ಲಿ ಸೇಂಧಿ ಮಾರು ಅಂಗಡಿ ಐತಿ. ನೀವು ಸೆರೆ, ಸೇಂಧಿ ಕುಡಿಯಾಕ ಬಂದೀರೇಂತ ತಿಳಿದು ನಮ್ಮವ್ವ ಸೇಂಧಿ ಕೊಟ್ಟಾಳ, ನೀವು ನೋಡಿದರ ಗರಿಗರಿ ಅಂಗಿ ಮಂದಿ ಅದಿರಿ, ಮುದುಕಿಗಿ ಏನ ತಿಳಿಬೇಕ, ಕ್ಷಮಾ ಮಾಡರಿ’ ಎಂದನು. 

    ಬಂದ ಮಾಸ್ತರು ಧಡೂತಿ ಆಸಾಮಿಗೆ ತಾವು ಬಂದ ಕಾರಣ ಅರುಹಿ ನಮ್ಮ ಕುದುರೆ ಎಲ್ಲಿಯಾದರೂ ಕಂಡರೆ ತಿಳಿಸಿ ಎಂದರು. ನಿಮ್ಮ ಕುದುರಿ ಸಿಕ್ಕರ ಎಲ್ಲಿ ತರಬೇಕ ಹೇಳ್ರೀ ತಂದ ಒಪ್ಪಿಸ್ತಿನೀ ಎಂದು ಭರವಸೆ ಕೊಟ್ಟ. ಧಡೂತಿ ಆಸಾಮಿಯಲ್ಲಿ ಒಂದು ಬಗೆಯ ಆತ್ಮೀಯತೆ ಬೆಳೆಯಿತು, ನಿಧಾನಕ್ಕೆ ಹಾಕಿ ಮಾಸ್ತರು ‘ಯಜಮಾನ ನಮಗ ಹೊಟ್ಟಿ ಹಸಿದು ಹೊಟ್ಟ್ಯಾಗ ಬೆಂಕಿ ಬಿದ್ದಾಂಗ ಆಗೈತಿ, ಇಲ್ಲಿ ಎಲ್ಲೇರ ಊಟ ಸಿಗತೈತೇನ, ರೊಕ್ಕಾ ಕೊಡತೀವ ಊಟಾ ಕೊಟ್ಟರ ಸಾಕು’ ಎಂದು ಹಲುಬಿದರು.

     ಶಾಲೆಯಲ್ಲಿದ್ದಾಗ ಅಗದಿ ಟೈಮ್ ಟೈಮ್‍ಗೆ ಊಟಾ, ನಾಷ್ಟಾ, ಹಾಲು, ಹಣ್ಣು ತಿಂದಿದ್ದ ಈ ಮಾಸ್ತರ ಮಂದೀಗಿ ಈ ಅಡವ್ಯಾಗ ಏನ ಸಿಕ್ಕರೂ ತಿನಬೇಕಂತ ಅನಿಸಿತು. ಆವಾಗ ಧಡೂತಿ ಹೇಳಿದಾ ‘ಮೊದಲ ಹೇಳಬೇಕಲ್ಲರಿ, ಸಾಹೇಬ್ರ, ಎಷ್ಟ ಆರ ಮಂದಿ ಅದಿರೆಲ್ಲಾ. ಅರ್ಧತಾಸ ಟೈಮ್ ಕೊಡ್ರಿ, ಬಿಸಿ ಬಕ್ರಿ, ಅಂಡಾಕರಿ ಮಾಡಿಕೊಡ್ತೇವಿ’ ಎಂದಾಗ ಅರ್ಧ ಊಟ ಮಾಡಿದ ತೃಪ್ತಿ ಮಾಸ್ತರರಿಗಾಯ್ತು. ದೂರದಲ್ಲಿ ಬಾಳೆಗೆ ನೀರುಣಿಸುತ್ತಿದ್ದ ತನ್ನ ಹೆಂಡತಿಯನ್ನು ಕೂಗಿ ಧಡೂತಿ ಕರೆಸಿಕೊಂಡ. ಅಡವಿಯಲ್ಲಿದ್ದರೂ ಬಹಳ ಚೆಲುವೆಯಾದ ಹೆಂಡತಿ ಬಂದು, ಬಂದವರಿಗೆ ನಮಸ್ಕರಿಸಿ ಒಳ ಹೋದಳು. ಅವರಿವರ ಗುಡಿಸಲು ತಿರುಗಿ ತತ್ತಿ ಗ್ವಾಳೆ ಮಾಡಿ, ಬ್ಯಾಡಗಿ ಕೆಂಪ ಒಣ ಮೆಣಸಿನಕಾಯಿಂದ ಮಾಡಿಟ್ಟ ಮಸಾಲಿ ಖಾರ ಹಾಕಿ ಘಮ ಘಮಾ ಅನ್ನಾಂಗ ಅಂಡಾಕರಿ ಸಾರ ಮಾಡಿ, ಬಿಸಿ ಬಕ್ರಿ ಬಡಿದು ಬಂದವರಿಗೆ ಹೊಟ್ಟೆ ತುಂಬಾ ಉಣಿಸಿದರು.

         ಮಾಸ್ತರ ಮಂದೀಗಿ ತುಂಬಾ ಖುಷಿಯಾಯ್ತು. ಈಗ ಮನೆಯವರೆಲ್ಲಾ ಪರಿಚಯಸ್ತರಂತಾದರು. ಸಣ್ಣಗೆ ಧಡೂತಿ ಮಾಸ್ತರರಿಗೆ ಕೈ ಮುಗಿದು ‘ಎಪ್ಪಾ ನಮ್ಮದೊಂದ ಹುಡುಗಿ ಕೊಡೋದು ಐತಿ, ಎಲ್ಲೇರ ವರಾ ಇದ್ರ ನೋಡ್ರಿ’ ಎಂದಾ. ಆಗ ಕಬ್ಬಡ್ಡಿ ಮಾಸ್ತರು ‘ಬೇಸಾಯ್ತು ಬಿಡು, ವರಕ್ಕೇನು ಕಡಿಮಿ, ಕನ್ಯಾನ ಸಿಗವಲ್ಲು’ ಎಂದು ಹೇಳಿ ಅವರ ಮಗಳ ಮಾಹಿತಿ ಪಡಕೊಂಡರು. ‘ನಮ್ಮ ಹುಡುಗಿ ಡಿಗ್ರಿ ಮುಗಿಸಿ, ಈಗ ಸಾಂಗ್ಲಿ ಮಹಾರಾಣಿ ಸೈನಿಕ ಸ್ಕೂಲದಾಗ ಕುದುರಿ ಸವಾರಿ ಕಲಸ್ತಾಳ, ಗಾಡಿ ಹೊಡಿತಾಳ, ಕುದುರಿ ಓಡಿಸ್ತಾಳ, ಕರಾಟೆ  ಆಡತಾಳ, ಇಂಥ ವಿದ್ಯಾ ಬರಾಂಗಿಲ್ಲ ಅನಾಂಗ ಇಲ್ಲರಿ ಭಾಳಾ ಶ್ಯಾಣ್ಯಾ ಅದಾಳ್ರಿ. ಅವಳದಟ ಮದವಿ ಮಾಡಿ ಬಿಟ್ಟರ ನಮ್ಮ ಜವಾಬ್ದಾರಿ ಮುಗೀತ ನೋಡ್ರಿ.’ಎಂದು ವಿವರಣೆ ನೀಡುತ್ತಿದ್ದಾಗ, ಇನ್ನೂ ಮದುವೆಯಾಗಿರದ ಹಾಕಿ ಮಾಸ್ತರ ಸೂರ್ಯಕಾಂತ ಕಡೆ ಎಲ್ಲರೂ ನೋಡಿ ನಸು ನಕ್ಕರು. ಸೂರ್ಯಕಾಂತನೂ ತನ್ನ ಕುಡಿ ಮೀಸೆಯಲ್ಲಿಯೇ ಸಣ್ಣಗೆ ನಕ್ಕು ಕನಸಿನ ಲೋಕಕ್ಕೆ ಬಿದ್ದನು. ಸೂರ್ಯಕಾಂತ ಮಾಸ್ತರರಿಗೂ ಇನ್ನೂ ಲಗ್ನ ಆಗಿರಲಿಲ್ಲ, ಕನ್ಯಾ ಹುಡುಕುತಿದ್ದರು. ಬಹುಶಃ ರೊಟ್ಟಿ ಜಾರಿ ತುಪ್ಪದಾಗ ಬಿದ್ದಂಗ ಆಯ್ತು. ಮಾಸ್ತರ ಮಂದೀಗಿ ಬಂದ ಜವಾಬ್ದಾರಿ ನೆನಪ ಆಗಿ ‘ನಾವ ಮತ್ತ ಬರತಿವರಿ ಹಿರ್ಯಾರ, ಪರಿಚಯ ಆಗಿ ಭಾಳ ಚಲೋ ಅಯ್ತು, ನಮ್ಮ ಕುದುರಿ ಸಿಕ್ಕರ ತಿಳಿಸ್ರೀ, ಎಂದು ಎದ್ದು ದುಡ್ಡು ಕೊಡಲು ಹೋದರು. ತ್ವಾಟದ ದಂಪತಿ ‘ಬ್ಯಾಡ್ರಿ ಮಾಸ್ತರ ಮಂದಿ ಅದಿರಿ, ನಿಮ್ಮ ಕಡೆ ದುಡ್ಡು ಇಸಕೊಳ್ಳೋದು ಸರಿ ಬರಾಂಗಿಲ್ಲರೀ’ ಎಂದು ಹೇಳಿ ಗಂಡ ಹೆಂಡತಿ ಮಾಸ್ತರರಿಗೆ ಕೈ ಮುಗಿದು ಬಿಳ್ಕೊಟ್ಟರು.

*

       ಇತ್ತ ಮೂಡಗಲ್ಲು ಸಂಸ್ಥಾನದ ದಂಪತಿಗಳ ಪಯಣ ಕುದುರೆಯನ್ನರಸಿ ಮುಂದೆ ನಡೆದಿತ್ತು. ಯಾವ ಪ್ರಗತಿದಾಯಕ ಫಲಿತಾಂಶ ಲಭ್ಯವಾಗದೇ ದಂಪತಿಗಳಿಗೆ ನಿರಾಸೆಯಾಯಿತು, ಪಾಪ ಯಾಗದ ಕುದುರೆ ತಪ್ಪಿಸಿಕೊಂಡು ಯಾವ ಪರಿಸ್ಥಿತಿ ಅನುಭವಿಸುತ್ತಿದೆಯೋ ಎಂದು ಮರುಗಿದರು. ಸಂಜೆಯಾಗುತ್ತಾ ಬಂದಿತ್ತು, ಇನ್ನು ಹುಡುಕುವುದು ತರವಲ್ಲ ಎಂದು ತಮ್ಮ ಅರಮನೆ ಕಡೆಗೆ ವಾಪಸ್ಸು ಪ್ರಯಾಣ ಹೊರಟರು. ಇತ್ತ ಗುಣಸಿರಿ ಮಾಸ್ತರ ಮಂದಿಗೂ ನಿರಾಸೆಯಾಗಿ ಮರಳಿದರು, ಆಗಿನ್ನೂ ಮೊಬೈಲ್ ಸಂಪರ್ಕವಿರಲಿಲ್ಲ. ರಾತ್ರಿ ಬಂದು ಲ್ಯಾಂಡ್ ಫೋನ್‍ನಿಂದ ಕರೆ ಮಾಡಿ ನಿರಾಸೆ ಹಂಚಿಕೊಂಡರು. ನಾಳೆಗೆ ಏನಾದರೂ ಮಾಡಿದರಾಯ್ತೆಂದು ಇಂದಿನ ದಿನವನ್ನು ಹುಡುಕುವುರಲ್ಲೇ ಕಳೆದು ರಾತ್ರಿ ಊಟ ಮಾಡಿ ನಿದ್ರೆಯಲ್ಲಿ ಕಳೆದು ಹೋದರು.

*

      ಮರುದಿನ ರವಿವಾರ ಬೆಳ್ಳಂ ಬೆಳಿಗ್ಗೆ ಜಿಲ್ಲಾ ಕೇಂದ್ರದಿಂದ ಕೇಂದ್ರದ ಆಡಳಿತ ಮಂಡಳಿ ದೌಡಾಯಿಸಿ ಬಂದರು. ಅರಮನೆಯ ಆವರಣದಲ್ಲಿ ಸಭೆ ಜರುಗಿತು. ಪಾಠ ಮಾಡುವ ಮಾಸ್ತರು, ಆಟದ ಮಾಸ್ತರು ಹಾಗೂ ಉಳಿದ ಸಿಬ್ಬಂದಿ ಎಲ್ಲರೂ ಸಭೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲರಲ್ಲೂ ಆತಂಕ ಮನೆ ಮಾಡಿತ್ತು. ಮಂತ್ರಿಗಳು ಕೊಟ್ಟ ಯಾಗದ ಕುದುರೆ ಎಲ್ಲಿಯೇ ಇರಲಿ ಅದನ್ನು ಹುಡುಕುವದೆಂದು ಮತ್ತು ಸಿಗದಿದ್ದರೆ ಪೊಲೀಸ್ ಸ್ಟೇಷನ್‍ಗಳಿಗೆ ತಿಳಿಸಿ ಹುಡುಕಲು ಹಚ್ಚುವದೆಂದು ಸಭೆ ತೀರ್ಮಾನ ತೆಗೆದುಕೊಂಡು, ಜವಾಬ್ದಾರಿಗಳ ಹಂಚಿಕೆ ಮಾಡುತ್ತಿದ್ದಾಗ ಹೊರಗೆ ಮಕ್ಕಳು ಜೋರಾಗಿ ಮುಗಿಲು ಕತ್ತರಿಸಿ ಬೀಳುವ ಹಾಗೆ ಹೋ ಎಂದು ಚೀರತೊಡಗಿದರು, ಯಾರಿಗೆ ಏನಾಯಿತೆಂದು ಎಲ್ಲರೂ ತಡಬರಿಸಿ ಹೊರ ಓಡಿ ಬಂದರು. ಮಕ್ಕಳು ಸಂಭ್ರಮದಿಂದ ಕುಣಿಯುತ್ತಾ ಜೈಕಾರ ಹಾಕುತ್ತಾ ‘ನಮ್ಮ ಕುದುರೆ ಬಂತು ನಮ್ಮ ಕುದುರೆ ಬಂತು’ ಎಂದು ಚೀರತೊಡಗಿದರು. ಎಲ್ಲರೂ ಮೂಕ ವಿಸ್ಮಿತರಾಗಿ ಗೇಟಿನ ಕಡೆ ನೋಡಿದರು. ಕಣ್ಣು ಮೂಗಿನಿಂದ ಚೆಲುವೆಯಾದ, ಎತ್ತರ ನಿಲುವಿನ ಹುಡುಗಿಯೊಬ್ಬಳು ಝಾನ್ಸಿರಾಣಿ ರೀತಿಯಲ್ಲಿ ಕುದುರೆಯನ್ನು ಹತ್ತಿ ಅದನ್ನು ಓಡಿಸಿಕೊಂಡು ಬಂದಿದ್ದಳು. ನೇರ ಆಡಳಿತ ಕಛೇರಿ ಮುಂದೆ ಬಂದು ಕುದುರೆ ಮೇಲಿಂದ ಜಿಗಿದು ತಮ್ಮ ಕುದುರೇನ ತಂದೀನಿ ತೆಗೆದುಕೊಳ್ಳಿ ಎನ್ನುವ ರೀತಿಯಲ್ಲಿ ಕೈ ಮುಗಿದು ಆಡಳಿತಗಾರರಿಗೆ ಒಪ್ಪಿಸಿದಳು. ಎಲ್ಲರಲ್ಲೂ ಆಶ್ಚರ್ಯ ಇವಳಾರು ಎಂದು. ಎಲ್ಲರೂ ಬಹಳ ಸಂತೋಷ ಬಾರಮ್ಮ ಎಂದು ಅವಳನ್ನು ಅತ್ಯಂತ ಆಪ್ತವಾಗಿ ಮಾತನಾಡಿಸಿ ಅವಳಿಗೆ ಕೃತಜ್ಞತೆ ಹೇಳಿದರು. ಅದೇ ಹೊತ್ತಿಗೆ ಹಿಂದೆ ಬೈಕಿನಲ್ಲಿ ನಿನ್ನೆ ಊಟ ಕೊಟ್ಟ ಧಡೂತಿಯೂ ಮತ್ತು ಅವನ ಹೆಂಡತಿಯೂ ಬಂದರು. ಬಂದವರೇ ಆಡಳಿತ ಮಂಡಳಿ ಅವರಿಗೆ ಕೈ ಮುಗಿದು ‘ಇವಳು ನನ್ನ ಮಗಳು ಸಿರಿವಂತೆ, ನಿನ್ನೆ ಸಂಜೆ ಹೊತ್ತಿಗೆ ಸಾಂಗ್ಲಿಯಿಂದ ಬಂದು, ಬಸ್ಸಿನಿಂದ ಇಳಿದು  ನಮ್ಮ ತ್ವಾಟಕ್ಕೆ ಬರುವಾಗ ದಾರಿಯಲ್ಲಿ  ಮುಳ್ಳು ಕಂಟಿಯ ಹಳೆ ಬಾವಿಯಲ್ಲಿ ಈ ಕುದುರೆ ಬಿದ್ದದ್ದನ್ನು ಗಮನಿಸಿ ನಮ್ಮನ್ನೆಲ್ಲಾ ಕರೆದಳು. ನಾವೆಲ್ಲಾ ಸೇರಿ ಅದನ್ನು ಮೇಲೆ ತಂದು ಆರೈಕೆ ಮಾಡಿದೆವು. ನಿನ್ನೆಯಷ್ಟೇ ತಮ್ಮ ಮಾಸ್ತರ ಮಂದಿ ತಮ್ಮ ಕುದುರೆ ಕಳೆದದ್ದು ಹೇಳಿದ್ದರು, ಸ್ವತಃ ಕುದುರೆ ಸವಾರಿ ಬಲ್ಲ ನಮ್ಮ ಮಗಳು ತಮ್ಮ ಕುದುರೆ ತಂದಿದ್ದಾಳೆಂದು ವಿವರಿಸಿದರು. ದಂಪತಿಯ ಕಾಳಜಿಗೆ ಮತ್ತು ಅವರ ಮಗಳ ಸಾಹಸಕ್ಕೆ ಮೆಚ್ಚಿ ಆಡಳಿತ ಮಂಡಳಿಯವರು ತುಂಬಾ ಖುಷಿಗೊಂಡರು. ಅರಮನೆಯ ಆವರಣದಲ್ಲಿ ಕರೆದು ಸತ್ಕರಿಸಿದರು. ಮಹಾರಾಜರಿಗೆ ಸುದ್ದಿ ಮುಟ್ಟಿಸಿ ಸಂತಸ ಹಂಚಿಕೊಂಡರು. ಮತ್ತೆ ಅವಳಿಗೆ ಇಂದಿನಿಂದ ನೀನು ನಮ್ಮ ಶಾಲೆಯಲ್ಲಿಯೇ ಮಕ್ಕಳಿಗೆ ಕುದುರೆ ತರಬೇತಿ ನೀಡಲು ಸೇರಿಕೊಳ್ಳಬೇಕೆಂದು ನಾವು ಅತ್ಯಂತ ಸಂತೋಷದಿಂದ ನೇಮಕ ಮಾಡಿಕೊಳ್ಳುತ್ತಿದ್ದೇವೆಂದು ಘೋಷಿಸಿದರು. ದಂಪತಿಗಳ ಹರುಷಕ್ಕೆ ಪಾರವೇ ಇರಲಿಲ್ಲ, ಈ ಎಲ್ಲ ಘಟನೆಗಳನ್ನು ಕಣ್ಣು ಬಿಡದೇ ಗಮನಿಸುತ್ತಿದ್ದ ಹಾಕಿ ಮಾಸ್ತರರ ಖುಷಿ ಇಮ್ಮಡಿಯಾಗಿತ್ತು. ಉಳಿದ ಮಾಸ್ತರು ಹಿಂದಿನ ದಿನದ ಸಂಗತಿಯನ್ನು ಆಡಳಿತ ಮಂಡಳಿಯವರಿಗೆ ವಿವರಿಸಿದಾಗ ಅವರೆಲ್ಲಾ ಇದೊಂದು ಬೊನಸ್ ಖುಷಿಯೆಂದು ಬೀಗರನ್ನು ಒಪ್ಪಿಸಿ, ಹಾಕಿ ಮಾಸ್ತರಗೆ ಅವಳನ್ನು ತೆಗೆದುಕೊಳ್ಳವ ತೀರ್ಮಾನವಾಯಿತು. ಕುದುರೆಯೊಂದಿಗೆ ಬಂದವಳು ಇಲ್ಲಿಯೇ ಒಂದಾಗಿ ಉಳಿದಳು.

#


ವಿಳಾಸ : 

ಡಾ.ಪ್ರಕಾಶ ಗ.ಖಾಡೆ 

ಮನೆ ನಂ .ಎಸ್.135,  ಸೆಕ್ಟರ್ ನಂ. 63, ನವನಗರ, ಬಾಗಲಕೋಟೆ-587103

ಮೊ. 9845500890

Tuesday, September 19, 2023

ಧಾರವಾಡ ಗೆಳೆಯರ ಗುಂಪು - ಡಾ.ಪ್ರಕಾಶ ಗ.ಖಾಡೆ

 ವಿಶೇಷ ಲೇಖನ:

ಧಾರವಾಡ ಗೆಳೆಯರ ಗುಂಪು

- ಡಾ.ಪ್ರಕಾಶ ಗ.ಖಾಡೆ


( ಕಳೆದ ಶತಮಾನದ ಆರಂಭದಲ್ಲಿ ಧಾರವಾಡದಲ್ಲಿ ಹುಟ್ಟಿಕೊಂಡ ‘ಗೆಳೆಯರ ಗುಂಪು’ ಹುಟ್ಟು ಹಾಕಿದ ಸಾಹಿತ್ಯ,ಸಾಂಸ್ಕೃತಿಕ ಅನನ್ಯತೆ ಮಾದರಿಯಾದುದು,ಈಗ ಅದನ್ನು ನೆನೆಸಿಕೊಳ್ಳುವುದೇ ಒಂದು ಸಾರ್ಥಕ ಭಾವ,ಅದರ ಬಹುಮುಖಿ ನೆಲೆಯ ಒಂದು ನೋಟ ಈ ಬರಹ.)


ಕನ್ನಡ ಸಾಹಿತ್ಯದ ಮುಖ್ಯ ಸಾಂಸ್ಕೃತಿಕ ಕೇಂದ್ರಗಳಲ್ಲಿ ಧಾರವಾಡವೂ ಒಂದು. ನವೋದಯದ ನಾಲ್ಕು ಕೇಂದ್ರಗಳಾದ ಧಾರವಾಡ,ಮೈಸೂರು,ಮಂಗಳೂರು ಮತ್ತು ಹಲಸಂಗಿ ಈ ನಾಲ್ಕು ಕೇಂದ್ರಗಳು ರೂಪಿಸಿದ ಸಾಹಿತ್ಯವು ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಮತ್ತು ಭೌಗೋಳಿಕೆ ಕಾರಣಗಳಿಂದಾಗಿ ಬೇರೆ ಬೇರೆಯಾಗಿತ್ತು. ದೇಶದ ಸ್ವಾತಂತ್ರ್ಯ ಚಳವಳಿ, ಗಾಂದಿsೀವಾದ, ಕರ್ನಾಟಕ ಏಕೀಕರಣ, ಭಾಷೆ ಸಂಸ್ಕೃತಿಗಳ ಪುರುಜ್ಜೀವನ, ಸುಧಾರಣವಾದ, ಇಂಗ್ಲಿಷ್ ರೊಮ್ಯಾಂಟಿಕ ಕಾವ್ಯದ ಪ್ರಭಾವ ಇತ್ಯಾದಿಗಳು ಆ ಕಾಲದ ಸಾಹಿತ್ಯಕ್ಕೆ ಒಟ್ಟಿನಲ್ಲಿ ವಿಶಾಲವಾದ ಏಕತೆಯನ್ನು ಒದಗಿಸಿದವು. ಆದರೆ ಈ ಉದ್ದೇಶ ಪ್ರಕಟವಾದ ರೀತಿಗಳು ಮಾತ್ರ ಆಯಾ ಭಾಗಗಳಿಗೆ ವಿಶಿಷ್ಟವಾಗಿದ್ದವು. ಆಯಾ ಭಾಗಗಳು ಎದುರಿಸಿದ ಕರ್ಷಣಗಳ ತೀವ್ರತೆಯೂ ಬೇರೆಯಾಗಿತ್ತು. ಹಾಗೆಯೇ ಅಬಿsವ್ಯಕ್ತಿಯ ಪ್ರೇರಣೆಗಳೂ ಬೇರೆಯಾಗಿದ್ದವು. ಈ ಬಿsನ್ನತೆಯಿಂದಾಗಿ ಅವುಗಳ ಕಾವ್ಯಸತ್ವ ಹಾಗೂ ಒಳರಚನೆಗಳೆಲ್ಲ ಸೂಕ್ಷ್ಮವಾದ ಹಲವಾರು ವ್ಯತ್ಯಾಸಗಳು ಕಾಣಿಸಿಕೊಂಡಿವೆ. ಇಂಥ ವ್ಯತ್ಯಾಸಗಳಲ್ಲಿ ಧಾರವಾಡ ಕೇಂದ್ರಕ್ಕೆ ಇರುವ ವಿಶಿಷ್ಟತೆ ಜಾನಪದೀಯ ಹಿನ್ನೆಲೆಯ ಸತ್ವಯುತ ಕಾವ್ಯ ರಚನೆಯ ಪ್ರಧಾನ ಬಿsತ್ತಿಯಾಗಿದೆ.

‘ರಾಜಕೀಯವಾಗಿ ಈ ಕಾಲದಲ್ಲಿ ಈ ಭಾಗ ಬ್ರಿಟಿಷರ ನೇರ ಆಡಳಿತಕ್ಕೆ ಒಳಪಟ್ಟಿತ್ತು. ಈ ಚೌಕಟ್ಟಿನೊಳಗೆ ಹಲವು ಭಾಗಗಳು ಮರಾಠರ ಸಂಸ್ಥಾನಗಳಾಗಿದ್ದವು.ಧಾರವಾಡ ಭಾಗವು ಮುಂಬಯಿ ರಾಜ್ಯಕ್ಕೆ ಸೇರಿದ್ದರಿಂದಾಗಿ ಇಲ್ಲಿಯ ರಾಜಕೀಯ, ಶೈಕ್ಷಣಿಕ ಸಂಪರ್ಕಗಳು ಮರಾಠಿ ಸಂಸ್ಕøತಿಯ ಪ್ರಾಬಲ್ಯದಲ್ಲಿದ್ದ ಪುಣೆ ಮುಂಬಯಿಗಳಿಗೆ ನಿಕಟವಾಗಿದ್ದವು. ಹೀಗಾಗಿ ಧಾರವಾಡ ಕೇಂದ್ರವು ಬ್ರಿಟಿಷ್ ರಾಜಸತ್ತೆ ಮತ್ತು ಮರಾಠಿ ಸಾಂಸ್ಕøತಿಕ ಸತ್ತೆಗಳೆರಡರ ಜೊತೆಗೂ ಏಕಕಾಲಕ್ಕೆ ಸೆಣಸಿ ತನ್ನ ಅಸ್ತಿತ್ವ ಗುರುತಿಸಿ ಕೊಳ್ಳಬೇಕಾಯಿತು. ಒಂದೆಡೆ ಕನ್ನಡ ಕಟ್ಟುವ ಕೆಲಸ ಮತ್ತೊಂದೆಡೆ ಆ ಕಾಲಕ್ಕೆ ತೀವ್ರವಾಗಿದ್ದ ರಾಷ್ಟ್ರೀಯ ಚಳವಳಿಗೆ ಪ್ರೇರಕ ಶಕ್ತಿಯಾಗಿ ನಿಲ್ಲುವ ಕಾರ್ಯ ಎರಡನ್ನೂ ಈ ಕೇಂದ್ರದ ಕವಿಗಳು ಒಟ್ಟಿಗೇ ತೋರಿದರು. ಹೀಗಾಗಿ ಬೇರೆ ಭಾಗದ ಕಾವ್ಯಗಳಿಗಿಂತ ಧಾರವಾಡ ಕೇಂದ್ರದಲ್ಲಿ ರಾಷ್ಟ್ರಪ್ರೇಮದ ಗೀತೆಗಳು, ನಾಡಗೀತೆಗಳು, ಭಾವಗೀತಗಳಾಗಿ, ಲಾವಣಿಗಳಾಗಿ ವ್ಯಾಪಕವಾಗಿ ರಚಿತವಾದವು ಮತ್ತು ಅವುಗಳನ್ನು ಹಾಡಿಕೊಂಡು ಬರಲಾಯಿತು.

ಅಖಂಡ ಕರ್ನಾಟಕದ ಪರಿಕಲ್ಪನೆಯನ್ನಿಟ್ಟುಕೊಂಡು ಕನ್ನಡಿಗರೆಲ್ಲರೂ ಕೊಡವರು, ತುಳುವರು, ಬಡಗರು, ಸಾರಸ್ವತರು, ಮೈಸೂರವರು, ಉತ್ತರದವರು ಹಾಡಬೇಕಾದ ‘ನನ್ನದು ಈ ಕನ್ನಡ ನಾಡು’ ಸಂಪಾದಿತ ಕವನ ಸಂಕಲನವನ್ನು ಧಾರವಾಡದ ಗೆಳೆಯರ ಗುಂಪಿನ ಕವಿಗಳು 1928ರಲ್ಲಿ ತಂದರು. ಇದು ಶ್ರೀ ಅವರು ಮೈಸೂರು ಭಾಗದಲ್ಲಿ ಸಂಪಾದಿಸಿದ ‘ಕನ್ನಡ ಬಾವುಟ’ (1938) ಬರುವುದಕ್ಕೆ ಹತ್ತು ವರ್ಷ ಮೊದಲೇ ಬಂದಿತ್ತು. ಕರ್ನಾಟಕ ಏಕೀಕರಣಕ್ಕೆ ಮುನ್ನುಡಿಯಾಗಿ ಬಂದ ‘ನನ್ನದು ಈ ಕನ್ನಡ ನಾಡು’ ಸಂಕಲನದಲ್ಲಿ ಚಿಕುಪಾಧ್ಯಾಯ, ನೃಪತುಂಗ, ಬಿ.ಎಂ.ಶ್ರೀ, ಕವಿಶಿಷ್ಯ, ಮಂ. ಕಾಮತ, ಆದಿಪಂಪ, ಸರ್ವಜ್ಞ, ಆಂಡಯ್ಯ ಇವರೊಂದಿಗೆ ಅಂಬಿಕಾತನಯದತ್ತ, ಆನಂದ ಕಂದ, ರಸಿಕ ರಂಗ (ರಂ.ಶ್ರೀ.ಮುಗಳಿ) ಹಾಗೂ ವಿನಾಯಕ ಅವರ ಕವಿತೆಗಳು ಭಾಷಾ ಪ್ರೀತಿಯೊಡನೆ, ಕಾವ್ಯ ಪ್ರೀತಿಯನ್ನು ಹುಟ್ಟು ಹಾಕಿದವು. ಗೆಳೆಯರ ಗುಂಪಿನ ಈ ಸಾಂಘಿಕ ಸಾಹಿತ್ಯಕ ಕಾರ್ಯ ಆ ಕಾಲಕ್ಕೆ ಒಟ್ಟಿಗೆ ಅನೇಕ ಕವಿಗಳನ್ನು ರೂಪಿಸಿತು. 1929ರಲ್ಲಿ ಆಲೂರು ವೆಂಕಟರಾಯರು ‘ಜಯಕರ್ನಾಟಕ’ ಪತ್ರಿಕೆಯ ಸಂಪೂರ್ಣ ಜವಾಬ್ದಾರಿಯನ್ನು ಗೆಳೆಯರ ಗುಂಪಿಗೆ ವಹಿಸಿದರು. 1930 ರಲ್ಲಿ ‘ಹಕ್ಕಿ ಹಾರುತಿದೆ’ ಎಂಬ ಕವನ ಸಂಕಲನವನ್ನು ಗುಂಪಿನ ಗೆಳೆಯರು ಪ್ರಕಟಿಸಿದರು. ‘ಕನ್ನಡ ನವೋದಯ ಕಾಲದಲ್ಲಿ ಹೊಸ ಕಾವ್ಯದ ಹೊಸ ಸಾಹಿತ್ಯದ ಪ್ರಾರಂಭ ಮಾಡಿದ ಗೆಳೆಯರ ಗುಂಪು ಬೇಂದ್ರೆಯವರ ನೇತೃತ್ವದಲ್ಲಿ ಹಿರಿದಾದ ಕಾರ್ಯ ಮಾಡಿತು. ಈ ಗುಂಪಿನ ಪ್ರೇರಣೆ, ಪ್ರಭಾವ ಸಮಗ್ರ ಕನ್ನಡ ಸಾಹಿತ್ಯ ಪಡೆದದ್ದನ್ನು ಅಲ್ಲಗಳೆಯಲಾಗದು. ಸಾಹಿತ್ಯಿಕವಾಗಿ ಈ ಭಾಗದ ಕಾವ್ಯ ಪಡೆದುಕೊಂಡ ಪ್ರೇರಣೆಗಳು ಮತ್ತು ತಾಳಿದ ರೂಪಗಳು ಕೂಡ ಬಿsನ್ನವಾಗಿವೆ. ಇಂಗ್ಲಿಷ್ ಕಾವ್ಯದ ಪ್ರಭಾವ ಇಲ್ಲಿ ಅಷ್ಟಾಗಿ ಹೇಳಿಕೊಳ್ಳುವಷ್ಟಿರಲಿಲ್ಲ, ಇಲ್ಲಿಯ ಕಾವ್ಯ ಜಾನಪದ ಮೂಲವನ್ನೇ ಅವಲಂಬಿಸಿತು.

‘ಗೆಳೆಯರ ಗುಂಪಿ’ನವರ ಕನ್ನಡ ಕಾಯಕಕ್ಕೆ ಇಲ್ಲಿ ಶಾಂತ ಕವಿಗಳು, ಕಾವ್ಯಾನಂದ ಪುಣೇಕರ, ಶ್ರೀಧರ ಖಾನೋಳಕರ ಮುಂತಾದವರು ಮುಂಬೆಳಗಿನ ಕಾಲದಲ್ಲಿ ಹಳೆಯ ರೀತಿಯಲ್ಲಿಯೇ ಹೊಸತವನ್ನು ತರಲು ಪ್ರಯತ್ನಿಸಿ ಕನ್ನಡ ಮತ್ತು ದೇಸೀ ಮೂಲ ವಾತಾವರಣವನ್ನು ನಿರ್ಮಾಣ ಮಾಡಿದ್ದರು. ಕಾವ್ಯ ಹೊಸತನದ ಕಡೆಗೆ ಮುಖ ಮಾಡಿತು. ಪದ್ಯಗಳಿಗಾಗಿಯೇ ‘ಪ್ರಭಾತ’ ಎಂಬ ಪತ್ರಿಕೆ ಆರಂಭವಾಯಿತು. ಇದು ಎರಡು ವರ್ಷ ನಡೆದು 1920ರಲ್ಲಿ ನಿಂತು ಹೋಯಿತು. ಇದೇ ಕಾಲಕ್ಕೆ “ಮರಾಠಿ, ಹಿಂದೂಸ್ಥಾನಿ ಮುಂತಾದ ಅನ್ಯ ಭಾಷೆಗಳೊಳಗಿನ ಕವಿತೆಗಳನ್ನು ಕನ್ನಡ ಕವಿತೆಗಳನ್ನೂ ಬೆರೆಸಿಕೊಂಡು ಭತ್ತ ಮೊಸರು ಕೂಡಿಸಿ ಕಲಸಿದಂತೆ” ಕೀರ್ತನಗಳನ್ನು ನಡೆಸುವುದನ್ನು ಖಂಡಿಸಲು ಶಾಂತ ಕವಿಗಳು ಅಚ್ಚಗನ್ನಡದಲ್ಲಿ ಬರೆದ ಕೀರ್ತನಗಳು ಜನರ ಮಾತಿನ ಹತ್ತಿರ ಭಾಷೆಯಲ್ಲಿದ್ದು ಜನಪ್ರಿಯವಾದವು. ಒಂದು ರೀತಿಯಲ್ಲಿ ಈ ಭಾಗದಲ್ಲಿ ಜನಪದ ಗೀತೆಗಳಲ್ಲಿ ಆಸಕ್ತಿ ಹೆಚ್ಚಲು ಈ ಕೀರ್ತನೆಗಳ ಪ್ರಕಟಣೆಯೂ ಕಾರಣವಾಯಿತು. ಇಲ್ಲಿ ಮುಖ್ಯವಾಗಿ ಹಲವಾರು ಅನುಭಾವಿಗಳು ಹುಟ್ಟು ಹಾಕಿದ್ದ ಅನುಭಾವ ಕಾವ್ಯ ಪರಂಪರೆ ಇಲ್ಲಿನ ಕವಿಗಳಿಗೆ ದೇಸೀಯತೆಯ ಸಂದರ್ಭವನ್ನು ಕಟ್ಟಿಕೊಟ್ಟಿತ್ತು. 

ಜಾನಪದದ ಸೆಳೆತ :

ಗೆಳೆಯರ ಗುಂಪಿನ ಆಶಯಗಳು ಆರಂಭಕ್ಕೆ ಹೊಸ ಕಾವ್ಯ ಕಟ್ಟುವ ಪರಿದಿsಯಲ್ಲಿ ಹಲವಾರು ವಿಷಯಗಳು ಸೇರಿಕೊಂಡಿದ್ದವು. ಪ್ರತಿಯೊಬ್ಬರೂ ಕವನ ರಚನೆಯ ಸಾಧನೆಯನ್ನು ಮಾಡಬೇಕು, ಕವಿತ್ವ ಎಂಬುದು ಕೇವಲ ಮಾನವ ಸೃಷ್ಟಿಯಲ್ಲ. ಅದು ಪರಮಾತ್ಮನ ಅನುಗ್ರಹದ ಅನುಭಾವ ಮಾರ್ಗ ಎಂದು ಒಂದು ಚೌಕಟ್ಟು ಹಾಕಿಕೊಂಡು ಕಾವ್ಯ ಕೃಷಿಗೆ ಇಳಿದಿದ್ದ ಕವಿಗಳ ಗುಂಪಿನಲ್ಲಿ ಹಲಸಂಗಿ ಗೆಳೆಯರ ಗುಂಪಿನ ಮಧುರಚೆನ್ನರು ಮತ್ತು ಅವರ ಗೆಳೆಯರು ಸೇರಿಕೊಳ್ಳುವ ಮೂಲಕ ‘ಜಾನಪದ ಚಿಂತನೆ’ ಆರಂಭವಾಯಿತು. ಮರೆತು ಹೋಗುತ್ತಿದ್ದ ಜನಪದ ಗೀತೆಗಳನ್ನು ಸಂಗ್ರಹಿಸಿ, ಆ ಜಾನಪದ ಮಟ್ಟುಗಳನ್ನು ಸಾಹಿತ್ಯಕ್ಕೆ ಉಪಯೋಗಿಸುವ ಕಾರ್ಯವನ್ನು ಆರಂಬಿsಸಿದರು. ಇದಕ್ಕೆ ಹಿನ್ನೆಲೆಯಾಗಿ ‘ಹಲಸಂಗಿ ಗೆಳೆಯರ’ ಗುಂಪು ‘ಜಯ ಕರ್ನಾಟಕ’ ಪತ್ರಿಕೆಯಲ್ಲಿ ಪ್ರತಿ ತಿಂಗಳೂ ಬೇರೆ ಬೇರೆ ಭಾಗಗಳಲ್ಲಿ ಸಂಗ್ರಹಿಸಿದ ಜನಪದ ಹಾಡು, ತ್ರಿಪದಿ, ಕಥನ ಕವನ, ಲಾವಣಿಗಳನ್ನು ಪ್ರಕಟಿಸಿದರು. ಮುಂದೆ ಕಾವ್ಯಗುಣದ ದೃಷ್ಟಿಯಿಂದ ಅದ್ವಿತೀಯವೆನಿಸಿದ ‘ಗರತಿಯ ಹಾಡು’, ‘ಜೀವನ ಸಂಗೀತ’, ‘ಮಲ್ಲಿಗೆ ದಂಡೆ’ ಜನಪದ ಗೀತ ಸಂಕಲನಗಳು ಪ್ರಕಟವಾದವು. ಈ ಜನಪದ ಕಾಯಕದ ಪ್ರಭಾವದಿಂದ ಉತ್ತರ ಕರ್ನಾಟಕದ ಯಾವ ಕವಿಯೂ ಜಾನಪದ ಸೆಳೆತದಿಂದ ಪಾರಾಗಲಿಲ್ಲವೆನ್ನುವುದು ಮಹತ್ವದ ಸಂಗತಿಯಾಗಿದೆ. ಬೇಂದ್ರೆ, ಮಧುರಚೆನ್ನ, ಆನಂದ ಕಂದ, ಶ್ರೀಧರ ಖಾನೋಳ್ಕರ, ವಿನಾಯಕ, ರಂ.ಶ್ರೀ.ಮುಗಳಿ, ಡಿ.ಎಸ್.ಕರ್ಕಿ, ಎಸ್.ಡಿ.ಇಂಚಲ, ಚೆನ್ನವೀರ ಕಣವಿ, ಚಂದ್ರಶೇಖರ ಕಂಬಾರ ಮೊದಲಾದ ಅನೇಕರು ಈ ಜಾನಪದವನ್ನು ತಮ್ಮದೇ ರೀತಿಯಲ್ಲಿ ಬಳಸಿಕೊಂಡರು. “ಬೇಂದ್ರೆ, ಖಾನೋಳ್ಕರ, ಆನಂದ ಕಂದ, ಕಂಬಾರರಂತೂ ಜನಪದ ಕಾವ್ಯ ಛಂದಸ್ಸಿನ ಮೂಲಾಂಶವಾದ ಅಂಶಗಣವನ್ನು ವ್ಯಾಪಕವಾಗಿ, ವೈವಿಧ್ಯಪೂರ್ಣವಾಗಿ ಬಳಸಿಕೊಂಡು ಆಧುನಿಕ ಕಾವ್ಯದ ಲಯಕ್ಕೆ ಹೊಸದೊಂದು ಬೀಸನ್ನು, ಚೆಲುವನ್ನು ತಂದರು. ಆಡುಮಾತಿನ ಬಳಕೆ ಈ ಭಾಗದ ಅನೇಕ ಕವಿಗಳ ಅಂಕಿತವಾಯಿತು. ಉಳಿದ ಭಾಗಗಳ ಕನ್ನಡ ಕವಿಗಳ ಮೇಲೆ ಜನಪದ ಕಾವ್ಯ ಇಂಥ ಪ್ರತ್ಯಕ್ಷ ಮತ್ತು ದಟ್ಟ ಪ್ರಭಾವವನ್ನು ಬೀರಲಿಲ್ಲ” ಎಂಬ ಗಿರಡ್ಡಿ ಗೋವಿಂದರಾಜ ಅವರ ಮಾತು ನಿಚ್ಚಳವಾಗಿದೆ.

ಧಾರವಾಡ ಕೇಂದ್ರದ ‘ಗೆಳೆಯರ ಗುಂಪು’ ಕಾವ್ಯಕ್ಷೇತ್ರದಲ್ಲಿ ಉಂಟು ಮಾಡಿದ ಶ್ರದ್ಧಾಪೂರ್ಣ ಕಾಯಕ ಕನ್ನಡಕ್ಕೇ ಹೊಸತಾದುದು. 1921-1933ರ ಹನ್ನೆರಡು ವರ್ಷಗಳು ‘ಗೆಳೆಯರ ಗುಂಪಿನ’ ಮಹತ್ವದ ವರ್ಷಗಳು.

ಗೆಳೆತನದ ಹೊಸ ಹೊಳವು, ನನ್ನ ಕನ್ನಡ ಕುಲದ

ಕನಸೊಂದು ಹೊಳೆದಾಡಿ ಸೆಳೆದಾಡಿತು

ಹೊಸ ಗೆಳೆಯನೊಬ್ಬನ ಎಡೆಬಿಡದ ಸಹವಾಸ

ಆ ಕಣಸ ಕನ್ನಡಿ ತೊಳೆದಾಡಿತು

ಎಂದು ಹಾಡಿದ ಬೇಂದ್ರೆ ಅವರು ಸಾಹಿತ್ಯದ ಗುಂಪು ಕಟ್ಟಿ ತಮ್ಮ ಅಯಸ್ಕಾಂತದ ವ್ಯಕ್ತಿತ್ವದಿಂದ ಎಲ್ಲರನ್ನೂ ಸೆಳೆದುಕೊಂಡರು. ಹೊಸ ಸಾಹಿತ್ಯದ ಅರಿವು ಅಗತ್ಯ ಇವುಗಳನ್ನು ಸುವ್ಯವಸ್ಥಿತ ರೀತಿಯಲ್ಲಿ ಗೆಳೆಯರ ಗುಂಪಿನ ಕವಿಗಳು ಅರಿತುಕೊಂಡರು. “ತಮಗೆ ವ್ಯವಸ್ಥಿತವಾದ ಕನ್ನಡ ಅಭ್ಯಾಸ ನಡೆದುದು ಗುಂಪಿನ ನಡುವೆ” ಎಂದು ಬೆಟಗೇರಿ ಕೃಷ್ಣಶರ್ಮರು ಹೇಳಿದ್ದಾರೆ. “ಗುಂಪಿನ ಮೂಲಕ ಇಂದಿನ ಕನ್ನಡ ಸಾಹಿತ್ಯದ, ಕರ್ನಾಟಕದ ಪರಿಚಯ ನನಗಾಯಿತು” ಎಂದರು ಗೋಕಾಕರು, “ಸ್ಫೂರ್ತಿ ಉತ್ಸಾಹಗಳನ್ನು ತುಂಬಿ ಹೊಸ ದರ್ಶನವನ್ನು ಇನ್ನೊಬ್ಬರಲ್ಲಿ ಸಂಚಾರಗೊಳಿಸುವುದಲ್ಲದೆ ಅದರ ದೌರ್ಬಲ್ಯವನ್ನರಿತು ಯೋಗ್ಯ ವಿಮರ್ಶೆಯಿಂದ ಅದನ್ನು ಕಳೆಯುವ ಅದ್ಭುತ ಶಕ್ತಿ ಬೇಂದ್ರೆಯವರಲ್ಲಿದೆ” ಎಂದು ಮುಗಳಿಯವರು ಹೇಳಿದ್ದಾರೆ. ಗೆಳೆಯರ ಗುಂಪಿನ ಒಡನಾಡಿಯಾಗಿದ್ದ ಸಿಂಪಿ ಲಿಂಗಣ್ಣನವರು “ಕವಿತಾ ವಾಚನದಲ್ಲಿ ಒಂದೇ ಧಾಟಿ, ಬರಹಗಳಲ್ಲಿ ಒಂದೇ ಶೈಲಿ” ಎಂದು ಬಣ್ಣಿಸಿದ್ದಾರೆ. ಈ ಗೆಳೆಯರ ಸವಿ ಅನುಭವಿಸಿದ ಬೇಂದ್ರೆಯವರು “ನಾಡಿನ ಜೀವನವನ್ನು ಹಬ್ಬವನ್ನಾಗಿ ಮಾರ್ಪಡಿಸಿಕೊಳ್ಳುವ ಯೋಗದಲ್ಲಿ ಮೆಟ್ಟುಗಳಾದವು. ಅನೇಕ ಹಿರಿಕಿರಿಯರೊಡನೆ ನನ್ನ ಜೀವ ಸೇರಿಕೊಂಡಿತು. ಗೆಳೆಯರ ಗುಂಪು ಒಂದು ಸ್ವಾಭಾವಿಕ ಬೆಳವಣಿಗೆಯಲ್ಲಿತ್ತು. ಅದು ಹೊರಗಣ್ಣಿಗೆ ಗುಂಪಾಗಿಯೂ ಒಳಗಣ್ಣಿಗೆ ಮೂರ್ತಿಶಿಲ್ಪ ಶಾಲೆಯಾಗಿಯೂ ರೂಪುಗೊಳ್ಳುತ್ತಿತ್ತು” ಎನ್ನುವಲ್ಲಿ ಗೆಳೆಯರ ಗುಂಪಿನ ಸಾರ್ಥಕತೆ ಅರಿವಾಗುತ್ತದೆ.

ಇದೇ ವೇಳೆಯಲ್ಲಿ 1918-19ರ ಹೊತ್ತಿನಲ್ಲಿ ಮಧುರಚೆನ್ನರು ಹಲಸಂಗಿಯಲ್ಲಿ ಸಾಹಿತ್ಯ ಮಂಡಲ ಸ್ಥಾಪಿಸಿ, ಅದಕ್ಕೆ ‘ಶಾರದಾ ಮಂಡಲ’ ಎಂದು ಹೆಸರಿಟ್ಟಿದ್ದರು. ಆಗ ಬೇಂದ್ರೆ ಮತ್ತು ಮಧುರಚೆನ್ನರ ಪರಿಚಯವಿರಲಿಲ್ಲ. ಇಬ್ಬರೂ ಸ್ಥಾಪಿಸಿದ ಸಾಹಿತ್ಯ ಮಂಡಲಕ್ಕೆ ‘ಶಾರದಾ ಮಂಡಲ’ ಎಂಬ ಒಂದೇ ಹೆಸರು ಇದ್ದದ್ದು ಅಪೂರ್ವಯೋಗಾಯೋಗ. ಇಬ್ಬರಿಗೂ ಭೇಟಿಯಾದದ್ದು 1923ರಲ್ಲಿ. ಇಬ್ಬರ ತಾಯಿಯ ಹೆಸರು ಅಂಬವ್ವ. ಇವರಿರ್ವರು ಗೆಳೆಯರು ‘ನನ್ನ ನಿನ್ನ ಬೆನ್ನ ಬಳಿ ವಿಶಾಲ ವೃಕ್ಷ ಬೆಳೆದಿದೆ’ ಎಂಬಂತೆ ಕೊನೆಯವರೆಗೂ ಗೆಳೆಯರಾಗಿದ್ದರು. ಹಲಸಂಗಿ ಗೆಳೆಯರ ಗುಂಪು ಮತ್ತು ಧಾರವಾಡ ಗೆಳೆಯರ ಗುಂಪು ಒಂದೇ ರೀತಿಯಲ್ಲಿ ಒಂದೇ ಕಾಲಕ್ಕೆ ಉದಯವಾಗುವುದರೊಂದಿಗೆ ಗುಂಪಿನ ನಾಯಕರಾದ ಬೇಂದ್ರೆ, ಮಧುರಚೆನ್ನರಲ್ಲಿ ಕಾವ್ಯ, ಅನುಭಾವ ಮತ್ತು ಜಾನಪದದ ಬೆಸುಗೆ ಬಿಡಿಸಲಾರದಷ್ಟು ಗಟ್ಟಿಯಾಗಿತ್ತು.

‘ಮಧುರ ಗೀತ’ವ ಹಾಡಿ, ‘ನನ್ನ ನಲ್ಲ’ನ ಒಲಿಸಿ

ಹಲಸಂಗಿ ನಾಡಿನಲಿ ನೆಲಿಸಿ ನಿಂತ,

ನನ್ನ ‘ಚೆನ್ನ’ನಿಗೆಣೆಯ ಗೆಣೆಯರಾರಾರಿಹರು

ಅವನೆ ಅವನಿಗು ಹೆಚ್ಚು ಅವನಿಗಿಂತ

ಉತ್ತು ನೆಲಹೊಲಗಳನು ಬಿತ್ತಿದನು ಬೀಜಗಳ

ಉತ್ತಮಿಕೆ ಬೆಳೆ ಬರಲಿ ಎಂದು ಬಯಸಿ,

ಊರಿಗೂ ಅಡವಿಗೂ ನಡುವೆ ನೆಲೆ ಮಾಡಿದನು

ಎಡತಾಕಿ ಬೆವರಿಟ್ಟು ಬಯಲ ತೋಯಿಸಿ

ಮಧುರಚೆನ್ನರಗಿಂತ ಮಿಗಿಲಾದ ಗೆಳೆಯರಿಲ್ಲ ಎಂದು ಹೇಳಿದ ಬೇಂದ್ರೆಯವರು “ಊರಿಗೂ ಅಡವಿಗೂ ನಡುವೆ ನೆಲೆ ಮಾಡಿದನು” ಎಂಬಲ್ಲಿ ನಗರ-ಗ್ರಾಮೀಣ, ಶಿಷ್ಟ-ಜಾನಪದವನ್ನು ಬೆಸೆದ ರೂಪ ಸಾದೃಶ್ಯವಿದೆ. ಈ ಕಾರ್ಯದಲ್ಲಿ ಎಡತಾಕಿ ಬೆವರಿಟ್ಟು ಬಯಲ ಬೆಳವಲನಾಡ ತೋಯಿಸಿ ಸಾಧನೆ ಮೆರೆದ ಮಧುರಚೆನ್ನರ ಸಿದ್ಧಿಯನ್ನು ಪ್ರಕಟಪಡಿಸಿದೆ. 

ಧಾರವಾಡದ ‘ಗೆಳೆಯರ ಗುಂಪಿ’ನಲ್ಲಿ ಆರಂಭದಲ್ಲಿ ಬೇಂದ್ರೆಯವರ ವಿದ್ಯಾರ್ಥಿಗಳು, ಸಹಪಾಠಿಗಳು ಇದ್ದರು. ಶ್ರೀಧರ ಖಾನೋಳಕರ, ಚಿದಂಬರ ನಗರ, ಬ್ಯಾಳಿ, ಶಾಂತಗಿರಿ, ಬಾಗಲವಾಡಿ, ತಿವಾರಿ, ರಾಮು ಅಭ್ಯಂಕರ, ಪ್ರಲ್ಹಾದ ನರೇಗಲ್, ಗೋವಿಂದ ಚುಳಕಿ, ವಸಂತರಾವ್ ಹುರಳೀಕೊಪ್ಪಿ, ರಾಯದುರ್ಗ, ಶ್ರೀಮತಿ ರೇವಡಿ ನಾಡಗೌಡ, ಶ್ರೀಮತಿ ಲೀಲಾವತಿ ಮಾಗಡಿ, ಕೃಷ್ಣಕುಮಾರ ಕಲ್ಲೂರ, ನಾರಾಯಣ ಸಂಗಮ, ಶೇ.ಗೋ. ಕುಲಕರ್ಣಿ. ನಂತರ ಈ ಗುಂಪಿಗೆ ವಿನೀತ ರಾಮಚಂದ್ರರಾವ್, ಬೆಟಗೇರಿ ಕೃಷ್ಣಶರ್ಮ, ಶಂ.ಬಾ.ಜೋಶಿ, ಸಾಲಿ ರಾಮಚಂದ್ರರಾಯರು, ಬೇಂದ್ರೆ ಲಕ್ಷ್ಮಣರಾವ್, ಬುರ್ಲಿ ಬಿಂದುಮಾಧವ ಮೊದಲಾದವರ ಸೇರ್ಪಡೆಯಾಯಿತು. ನಂತರ ವಿ.ಕೃ. ಗೋಕಾಕ, ರಂ.ಶ್ರೀ. ಮುಗಳಿ, ಜಿ.ಬಿ. ಜೋಶಿ, ಮಕ್ತಾಲಿ, ಮಳೆಯೆ ಗೋವರ್ಧರಾಯರು, ಎನ್.ಕೆ.ಕುಲಕರ್ಣಿ, ಎಸ್.ಆರ್.ಮಳಗಿ, ಶ್ರೀನಿವಾಸ ಕುಲಕರ್ಣಿ, ಟಿ.ರುಬೆನ್, ಸಿದ್ಧವನಹಳ್ಳಿ ಕೃಷ್ಣಶರ್ಮ ಹಲಸಂಗಿ, ವಿಜಾಪುರ, ಹೈದರಾಬಾದ್, ಸಂಡೂರು, ಕೊಪ್ಪಳ, ಅಥಣಿ, ಮೈಸೂರು, ಬೆಂಗಳೂರು ಮೊದಲಾದ ಊರುಗಳಿಗೆ ಗೆಳೆಯರ ಗುಂಪಿನವರು ಮಾಡಿದ ಉಪನ್ಯಾಸ, ಕವಿತಾ ವಾಚನ, ಸಾಹಿತ್ಯಿಕ ಚರ್ಚೆಗಳ ಮೂಲಕ ಗೆಳೆಯರ ಗೆಳೆಯರು ಸೇರುತ್ತಾ ಹೋಗಿ ಗುಂಪು ವಿಶಾಲವಾಯಿತು.

ಹೀಗೆ ಒಂದು ಧ್ಯೇಯವನ್ನಿಟ್ಟುಕೊಂಡು ಹುಟ್ಟಿಕೊಂಡು ಬಂದ ಗೆಳೆಯರ ಗುಂಪು ಧಾರವಾಡ ಕೇಂದ್ರದ ಸಾಂಸ್ಕøತಿಕ ವ್ಯಾಪ್ತಿಯನ್ನು ಭೌಗೋಲಿಕವಾಗಿಯೂ, ಸಾಹಿತ್ಯಿಕವಾಗಿಯೂ ವಿಸ್ತರಿಸಿತು. ಈ ವಿಸ್ತರಣೆಯಲ್ಲಿ ಹೊಸ ಕಾವ್ಯವನ್ನು ಜನಪ್ರಿಯಗೊಳಿಸುವುದರೊಂದಿಗೆ, ಜನಪದ ಸತ್ವದ ಪುನರುಜ್ಜೀವನಕ್ಕೆ ಗೆಳೆಯರ ಗುಂಪು ಕನ್ನಡ ನವೋದಯದ ಸಂದರ್ಭದಲ್ಲಿ ಪ್ರಧಾನವಾದ ಕೆಲಸ ಮಾಡಿತು. ಕಾವ್ಯದಲ್ಲಿ ಆ ಕಾಲಕ್ಕೆ ಕಾಣಿಸಿಕೊಂಡ ಲಾವಣಿ ಮಟ್ಟುಗಳನ್ನು, ತಮ್ಮ ಕವಿತೆಗಳಲ್ಲಿ ಬಳಸಿಕೊಂಡರು.ಮರೆತು ಹೋಗುತ್ತಿದ್ದ ಜನಪದ ಗೀತೆಗಳನ್ನು ಸಂಗ್ರಹಿಸಿ, ಪ್ರಕಟಿಸಲು ಉತ್ತೇಜನ ನೀಡುವ ಮೂಲಕ, ಜನಪದ ಗೀತೆಗಳಲ್ಲಿನ ಲಯ, ಭಾಷೆ, ನುಡಿಗಟ್ಟು ಸಮೃದ್ಧವಾಗಿ ತಮ್ಮ ಕಾವ್ಯಕ್ಕೆ ತಂದರು. ಹೊಸ ಕವಿತೆಗೆ ಬೇಕಾದ ಹೊಸ ಛಂದೋರೂಪಗಳ ಸಲುವಾಗಿ ಜಾನಪದ ಧಾಟಿಗಳನ್ನು ಅಳವಡಿಸಿಕೊಂಡರು.ಶಂಬಾ ಜೋಶಿ, ರಂ.ಶ್ರೀ. ಮುಗಳಿ ಮೊದಲಾದವರು ಸಂಶೋಧನೆ ಕಡೆಗೆ ದೃಷ್ಟಿಕೊಟ್ಟರೆ, ವಿ.ಕೃ.ಗೋಕಾಕ, ಶ್ರೀಧರ ಖಾನೋಳಕರ ಕಾವ್ಯರಚನೆಗೆ ದೃಷ್ಟಿಕೊಟ್ಟು ಅಭ್ಯಾಸ ನಡೆಸಿದರು.ಬೆಟಗೇರಿ ಕೃಷ್ಣಶರ್ಮ, ಬೇಂದ್ರೆ, ಮಧುರಚೆನ್ನ ಜಾನಪದ ರೀತಿಗಳನ್ನು ಕಲೆಹಾಕಿ ಅವುಗಳ ಸತ್ವವನ್ನು ಅರಿತು ಅವುಗಳನ್ನು ಸಾಹಿತ್ಯ ರೀತಿಯೆಂದು ಗುರುತಿಸಿ ಬಳಸಿದರು.‘ಜಯ ಕರ್ನಾಟಕ’ ಮೂಲಕ ಕನ್ನಡ ಭಾಷೆಗೆ ಸಾಹಿತ್ಯ ಸಂಸ್ಕಾರ ತಂದು ಕೊಡುವುದರ ಜೊತೆಗೆ ಹೊಸ ರೀತಿಯ ಬರವಣಿಗೆ ಈ ಗುಂಪು ಪ್ರಾರಂಬಿsಸಿತು. ಒಟ್ಟಾರೆ ಧಾರವಾಡ ಕೇಂದ್ರವು ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಒಂದು ಬಹು ಮುಖ್ಯವಾದ ಸಾಸ್ಕೃತಿಕ ಕೇಂದ್ರವಾಗಿ ಗುರುತಿಸಿಕೊಂಡಿತು.

-ಡಾ.ಪ್ರಕಾಶ ಗ.ಖಾಡೆ


ವಿಳಾಸ : ಡಾ.ಪ್ರಕಾಶ ಗ.ಖಾಡೆ, ‘ಶ್ರೀ ಗುರು’, ಸರಸ್ವತಿ ಬಡಾವಣೆ,ಸಂಖ್ಯೆ 63,ನವನಗರ,ಬಾಗಲಕೋಟ

ಮೊ. 9845500890

Monday, September 18, 2023

ಜನಪದ ಚಿತ್ರಕಲೆ

 ಜನಪದ ಚಿತ್ರಕಲೆ

ಡಾ.ಪ್ರಕಾಶ ಗ. ಖಾಡೆ


ಜಾನಪದ ಎಂಬುದು ಬರೀ ಹಾಡು, ಕುಣಿತವಲ್ಲ. ಅದು ಬದುಕಿನ ಎಲ್ಲ ಮಗ್ಗುಲಗಳನ್ನು ಒಳಗೊಂಡ ವಿಶ್ವವ್ಯಾಪಿ ಅನಾವರಣ. ಜಾನಪದ ಜಗದಗಲ ಮುಗಿಲಗಲ ವ್ಯಾಪಕತೆ ಹೊಂದಿದೆ. ಯಾವ ಮಡಿವಂತಿಕೆ ಇಲ್ಲದೇ ದೇಸಿ ಬದುಕಿನ ಅಕ್ಷಯ ನಿಧಿ ಜಾನಪದ. ಇಂದು ಜಾನಪದ ಬಗೆಗಿನ ಅಧ್ಯಯನ ಕ್ಷೇತ್ರ ವ್ಯಾಪಕಗೊಳ್ಳುತ್ತಿರುವ ಹೊತ್ತಿನಲ್ಲಿ ಆಧುನಿಕ ಸಂದರ್ಭದಲ್ಲೂ ಜಾನಪದದ ಮಹತಿಯ ಅರಿವಾಗುತ್ತಿದೆ. ನೆಲ ಮುಗಿಲ ಸಕಲ ಚರಾಚರ ವಸ್ತುಗಳಲ್ಲೂ ಜಾನಪದವಿದೆ. ಬಹು ಶಿಸ್ತಿನ ಅಧ್ಯಯನ ನೆಲೆಗಳೆಲ್ಲ ಇವತ್ತು ಜಾನಪದದ ನೆಲೆಗಟ್ಟಿನಿಂದ ಆರಂಭವಾಗುತ್ತಿರುವುದು ಜಾನಪದ ಹಿರಿಮೆಯನ್ನು ಸಾರುತ್ತಿದೆ.

 ಜನಪದ ಕಲೆಗಳು ಜನಾಂಗದಿಂದ ಜನಾಂಗಕ್ಕೆ ಕೊಡುಗೆಗಳಾಗಿ ಬಂದಿವೆ. ಕೈಗಾರಿಕಾ ಕ್ರಾಂತಿಯಿಂದ ಜನರು ಹಳ್ಳಿಗಳನ್ನು ತೊರೆದು ನಗರದತ್ತ ಮುಖ ಮಾಡಿದಾಗ ಜಾನಪದದ ಅಳಿವು ಆರಂಭವಾಯಿತೆಂದೇ ಭಾವಿಸಲಾಗಿತ್ತು. ಈ ಆತಂಕವನ್ನು ನಮ್ಮ ಪಂಡಿತ ಜನ ಬುಗಿಲೆಬ್ಬಿಸಿ ಜಾನಪದವನ್ನು ಸಂಕುಚಿತವಾಗಿ ಕಾಣುವ ಸಂದರ್ಭ ತಂದಿಟ್ಟರು. ಆದರೆ, ಜಾನಪದವೆಂಬುದು ಸಾಯುವ ಸರಕಲ್ಲ, ಅದು ಪರಂಪರೆಯಿಂದ ಪರಂಪರೆಗೆ ಕಾಲಕ್ಕನುಗುಣವಾಗಿ ಬದಲಾಗುತ್ತ ಹೊಸರೂಪ ತಾಳುತ್ತ ಉಳಿದುಕೊಂಡು ಬಂದಿದೆ. ಬರುತ್ತಿದೆ. ಹೀಗಾಗಿ ಜಾನಪದವು ಗತಕಾಲದ ಪ್ರತಿಧ್ವನಿ ಮಾತ್ರವಲ್ಲ, ಸಮಕಾಲೀನ ಸಂದರ್ಭದ ಸಶಕ್ತ ಧ್ವನಿಯಾಗಿದೆ.

 ಜಾನಪದ ಬಳಕೆ ಇಂದು ದ್ವಿಮುಖಿಯಾಗಿದೆ. ಸಹಜ ಮತ್ತು ಕೃತಕ ಜೀವನದ ನಡೆಯಲ್ಲಿ ನಾವು ಜಾನಪದವನ್ನು ಬಳಸಿಕೊಳ್ಳುತ್ತಿದ್ದೇವೆ. ಈ ಕಾರಣವಾಗಿ ಆಧುನಿಕರ ಕೈಯಲ್ಲಿ ಜಾನಪದವೆಂಬದು ಬಳಸಿ ಬೀಸಾಕುವ ಸಂಸ್ಕøತಿ ಎನ್ನಿಸಿದೆ. ಹಾಡು ಕಟ್ಟುವುದು. ಚಿತ್ರ ಬಿಡಿಸುವುದು, ಗಾದೆ, ಒಗಟು, ಒಡಪು ಹೇಳುವುದು ಎಲ್ಲ ಸಹಜ ಕಲೆಗಳಾದರೆ, ಇವು ಪ್ರದರ್ಶನ ಸಂದರ್ಭದಲ್ಲಿ ವ್ಯಾಪಾರೀಕಣದ ಬಾಹುಗಳಲ್ಲಿ ತುಂಬಾ ಕೃತಕವಾಗಿ ಬಿಡುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಜಾನಪದವನ್ನು ಸಹಜ, ಸರಳ ಹಾಗೂ ತಾಜಾತನದ ಅನುಭವಗಳಿಂದ ಗ್ರಹಿಸಬಲ್ಲ ಮನಸ್ಸುಗಳು ಮಾತ್ರ ಜಾನಪದವನ್ನು ಅರಿಯಬಲ್ಲ ಭೂಮಿಕೆಗಳಾಗಿವೆ.

 ಜನಪದ ಚಿತ್ರಕಲೆಗೆ ಪ್ರಾಚೀನ ಕಾಲದ ಇತಿಹಾಸವಿದೆ. ಜನಪದದ ಬಹುಪಾಲು ಕಲೆಗಳಿಗೆ ಲಿಖಿತ ಆಧಾರ ಗುರುತಿಸುವುದು ಕಷ್ಟ. ಮಾನವನ ಬದುಕಿನಲ್ಲಿ ರೇಖೆಗಳ ಬಳಕೆಯೊಂದಿಗೆ ಚಿತ್ರಕಲೆ ಮೊದಲಾಯಿತು. ಭಾಷೆಗೆ ಮುನ್ನ ಸಂಜ್ಞೆಗಳಿದ್ದಂತೆ, ಲಿಪಿಗೆ ಮುನ್ನ ಚಿತ್ರಕಲೆ ಬಳಕೆಯಲ್ಲಿತ್ತು. ಮಾನವನ ಸಂವಹನ ಮಾಧ್ಯಮವಾಗಿ ರೇಖೆಗಳ ಸಂಕೇತಗಳು ಬಳಕೆಯಲ್ಲಿದ್ದವು. ಜಗತ್ತಿನ ಅತ್ಯಂತ ಪ್ರಾಚೀನ ಚಿತ್ರಕಲೆಯ ಕುರುಹುಗಳು ಸ್ಪೇನಿನ ಗುಹೆಗಳಲ್ಲಿ ಹಾಗು ಫ್ರಾನ್ಸಿನ ಡೊರಡೊನ್ ಪ್ರಾಂತ್ಯದ ಲಾಗ್ರೀಜ್ ಎಂಬ ಗವಿಗಳಲ್ಲಿ ದೊರೆತಿವೆ. ಹಾಗೆನೇ ಸುಮಾರು ಇಪ್ಪತ್ತೇಳು ಸಾವಿರ ವರ್ಷಗಳ ಹಿಂದೆ ಅರಿನೇಷಿಯನ್ ನಾಗರಿಕತೆಯ ಕಾಲದಲ್ಲಿ ದೊರೆತ ಮನುಷ್ಯಾಕೃತಿಯ ಚಿತ್ರಗಳೇ ಹಳೇಯವು ಎಂಬ ಅಭಿಪ್ರಾಯವಿದೆ.

 ಆದಿ ಮಾನವನ ಬದುಕಿನ ಘಟನಾವಳಿಗಳನ್ನು ಅವರು ಬಿಟ್ಟುಹೋದ ಚಿತ್ರಕಲೆಯಿಂದ ಅರಿಯುತ್ತೇವೆ. ಪ್ರಾಚೀನ ಮಾನವರು ಬಂಡೆ, ಗುಹೆಗಳಷ್ಟೇ ಅಲ್ಲದೇ, ವೃಕ್ಷಗಳ ತೊಗಟೆ, ಚರ್ಮ, ಎಲುಬು, ಕೊಂಬು ಇತ್ಯಾದಿ ವಸ್ತುಗಳ ಮೇಲೆ ಚಿತ್ರ ಬಿಡಿಸುತ್ತಿದ್ದರು. ಇವುಗಳ ಮೇಲೆ ಪ್ರಾಣಿ, ಪಕ್ಷಿ, ಕೃಷಿ, ಯುದ್ಧ, ಮಾಟ ಮಂತ್ರಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಬಿಡಿಸುತ್ತಿದ್ದರು.

 ಭಾರತದ ಪ್ರಾಚೀನ ಚಿತ್ರಕಲೆಯ ಕುರುಹುಗಳು ಕರ್ನಾಟಕದ ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ "ಗೊಂಬಿಗುಡ್ಡ"ದಲ್ಲಿ ಕಾಣುತ್ತೇವೆ. ಪ್ರಾಗೈತಿಹಾಸಿಕ ಕಾಲದ ಈ ಗುಡ್ಡದ ಬಂಡೆಗಳ ಮೇಲಿರುವ ಚಿತ್ರಗಳು ಆ ಕಾಲದವರ ಕಲಾಭಿಜ್ಞತೆಗೆ ಸಾಕ್ಷಿಯಾಗಿವೆ. ಇಲ್ಲಿ ಪಲ್ಲಕ್ಕಿ, ಜಿಂಕೆ, ಆನೆ, ಸಾರಂಗ ಮುಂತಾದ ಪ್ರಾಣಿಗಳ ಒಂಟಿ ಚಿತ್ರಗಳಲ್ಲದೇ, ಒಂಟಿ ಸವಾರರು, ಹೋರಿ ಕಾಳಗ, ಬೇಟೆಯಾಡುವ ಮನುಷ್ಯರು ಈ ಮೊದಲಾದ ಚಿತ್ರಗಳಿವೆ. ಹೀಗೆ ಬಂಡೆಗಳ ಮೇಲೆ ಚಿತ್ರ ಬಿಡಿಸಿದ ನಮ್ಮ ಜನಪದರು ಕಾಲಕ್ರಮದಲ್ಲಿ ಭಿತ್ತಿ ಚಿತ್ರಗಳು, ಹಬ್ಬದ ಸಂದರ್ಭದ ಚಿತ್ರಗಳನ್ನು ಬಿಡಿಸುತ್ತ ಮನೆ, ಮಠ, ದೇವಾಲಯ, ಅರಮನೆಗಳಲ್ಲೂ ಸ್ಥಾನ ಪಡೆದು ಜನಪದ ಚಿತ್ರಕಲೆಗೆ ತುಂಬಾ ವ್ಯಾಪಕವಾದ ಕ್ಯಾನವಾಸ್ ರೂಪಿಸಿದರು.

ಆರಾಧನಾ ಸಂಸ್ಕøತಿಯೇ ಮೂಲ:

 ಜನಪದ ಚಿತ್ರಕಲೆ ಕೇವಲ ಗೃಹಾಲಂಕಾರದ ಚಿತ್ರ ವಿನ್ಯಾಸಕ್ಕೆ ವಸ್ತುವಾಗದೇ ಆರಾಧನಾ ಮೂಲ ಸಂಸ್ಕøತಿಯಿಂದ ರೂಪಿತವಾದವು. ನಾಗರ ಪಂಚಮಿ, ದೀಪಾವಳಿ, ಯುಗಾದಿ ಮೊದಲಾದ ಹಬ್ಬಗಳ ಸಂದರ್ಭಗಳಲ್ಲಿ ಜನಪದರು ಬಿಡಿಸುವ ಚಿತ್ರಗಳು ಪರಂಪರಾಗತ ಕಲೆಯ ಮುಂದುವರಿಕೆಯಾಗಿವೆ. ಜನಪದರ ಮನೆಯ ಗೋಡೆ, ಮಾಳಿಗೆಗಳಿಗೆ ಮಾಡಿದ ಅಲಂಕರಣ ಚಿತ್ರಗಳು "ಬಿತ್ತಿ ಚಿತ್ರ"ಗಳಾಗಿ ಹೆಸರಾಗಿವೆ. ಕರ್ನಾಟಕದ ಹಿರಿಯೂರು, ಸಿರಾ, ಶ್ರೀರಂಗಪಟ್ಟಣ, ಶ್ರವಣಬೆಳಗೂಳ, ಗುಳೇದಗುಡ್ಡ, ಇಳಕಲ್ಲು ಮೊದಲಾದ ಕಡೆಯ ಬಿತ್ತಿ ಚಿತ್ರಗಳು ತುಂಬಾ ಜನಪ್ರಿಯವಾಗಿವೆ. ರಾಮಾಯಣ, ಮಹಾಭಾರತ ದೃಶ್ಯಗಳು ಶಿವ, ವಿಷ್ಣು ಪರವಾದ ಕಥಾನಕಗಳು ಇಲ್ಲಿ ಚಿತ್ರರೂಪ ಕಂಡಿವೆ.

 ಮನೆಗೆ ಸುಣ್ಣ ಹಚ್ಚುವುದು, ಹೊಸ್ತಿಲನ್ನು ಕೆಮ್ಮಣ್ಣಿನಿಂದ ಸಾರಿಸುವುದು. ಅಲ್ಲಲ್ಲಿ ಚಿತ್ರ ಬಿಡಿಸುವುದು ಜನಪದ ಚಿತ್ರಕಲಾ ನೈಪುಣ್ಯಕ್ಕೆ ಸಾಕ್ಷಿಯಾಗಿದೆ. ಮನೆ, ದೇವಾಲಯ ಮೊದಲಾದ ಕಡೆಗಳಲ್ಲಿ ಬಿಡಿಸುವ ರಂಗೋಲಿ ಕಲೆಯು ಜನಪದರ ಗೃಹಾಲಂಕಾರಕ್ಕೆ ಸಂಬಂಧಿಸಿದ ಒಂದು ಮಹತ್ವಪೂರ್ಣ ಚಿತ್ರಕಲೆಯಾಗಿದೆ. ಹೊಸ್ತಿಲು ಮುಂದಿನ ಬೆಳಗಿನ ಬೆಳದಿಂಗಳಾದ ರಂಗೋಲಿಯು ನಮ್ಮ ಹಳ್ಳಿ ಹೆಣ್ಣುಮಕ್ಕಳ ಕಲಾ ನೈಪುಣ್ಯಕ್ಕೆ, ಕಲ್ಪನಾ ಶಕ್ತಿಗೆ ಪ್ರತೀಕವಾಗಿದೆ. ಶಿವರಾಮ ಕಾರಂತರು "ರಂಗೋಲಿ" ಎಂದರೆ ಮನೆಯ ಮುಂದೆ ಬರೆಯುವ ಚಿತ್ರ ಕೆಲಸ ಎಂದಿದ್ದಾರೆ. ಆರನೆಯ ಶತಮಾನದಲ್ಲಿ ಬದುಕಿದ್ದ ಬಾಣಕವಿ ತನ್ನ "ಕಾದಂಬರಿ" ಯಲ್ಲಿ ಸೂತಿಕಾಗೃಹದ ಮುಂದೆ ರಂಗೋಲಿ ಹಾಕುವುದನ್ನು ವಿವರಿಸಿದ್ದಾನೆ. ಶುಭ ಹೆರಿಗೆ, ಬಾಣಂತಿ ರಕ್ಷಣೆಯ ಆಶಯದ ಹಿನ್ನೆಲೆಯಲ್ಲಿ ಈ ಕಲೆಯ ಬಳಕೆ ಕಾಣುತ್ತೇವೆ. ರಂಗೋಲಿಯ ಉಲ್ಲೇಖವು ಜನಪದ ಗೀತೆ, ಕಥೆ, ಒಗಟು, ಒಡಪು, ಗಾದೆಗಳಲ್ಲಿ ಕಾಣುತ್ತೇವೆ.

 ಒಡಪು : ಅಂಗಳದಾಗ ರಂಗೋಲಿ ಹಳಕ 

 ಆಕಾಶದಾಗ ಚಂದ್ರನ ಬೆಳಕ

 ನನ್ನ ಜೀವನದಾಗ ನನ್ನ ರಾಯರ ಥಳಕ


 ಗಾದೆ : ಆತ ಚಾಪೆ ಕೆಳಗೆ ತೂರಿದರೆ

 ನಾನು ರಂಗೋಲಿ ಕೆಳಗೆ ತೂರುತ್ತೇನೆ.


 ರಂಗೋಲಿಯು ಭಾರತದ ಪ್ರಾಚೀನ ಜನಪದ ಕಲೆಯಾಗಿದೆ.

ಸೌಂದರ್ಯ ಪ್ರಜ್ಞೆಯ ಜೀವಾಳ:

 ಜನಪದ ಚಿತ್ರಕಲೆ ಸೌಂದರ್ಯ ಪ್ರಜ್ಞೆಯ ಜೀವಾಳವಾಗಿದೆ. ಜನ್ಮಜಾತವಾಗಿ ಬಂದ ರೂಪದೊಂದಿಗೆ ಕಲೆಯ ಸೊಬಗನ್ನು ತಮ್ಮ ಮೈಮೇಲೆ ಬಿಡಿಸಕೊಂಡು ಇಮ್ಮಡಿ ಸೌಂದರ್ಯದ ಸಿರಿವಂತಿಕೆಯಿಂದ ನಮ್ಮ ಜನಪದರು ಗುರುತಿಸಿಕೊಳ್ಳುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಜನಪದ "ಹಚ್ಚೆ" ಚಿತ್ರಕಲೆ ನಮ್ಮ ಕಣ್ಣ ಮುಂದಿದೆ.

 ಜನಪದರ ದೃಶ್ಯಕಲೆಗೆ ಸೇರಿದ "ಹಚ್ಚೆ" ವಿಶ್ವದ ಅನೇಕ ಕಡೆಗೆ ಈಗಲೂ ಉಳಿದುಕೊಂಡು ಬಂದಿದೆ. ಹಚ್ಚೆ, ಅಚ್ಚೆ, ಹಂಚೆ, ಹಂಚಿಬಟ್ಟು, ಹಣಚಿ, ಅಣಚಿ, ಅಣ್ಣಿ ಈ ಮೊದಲಾದ ಹೆಸರುಗಳಿಂದ ಈ ಕಲೆಯನ್ನು ಕರೆಯುತ್ತೇವೆ. ಗಿಡಮೂಲಿಕೆಗಳಿಂದ ಸಿದ್ಧಪಡಿಸಿದ ರಸ ದೇಹದ ಮೇಲಿನ ಚಿತ್ರಗಳಿಗೆ ಹಳದಿ ಮಿಶ್ರಿತ ಹಸಿರು ಬಣ್ಣದ ಛಾಯೆಯನ್ನು ಕೊಡುವುದರಿಂದ ಈ ಕಲೆಗೆ ಹಚ್ಚೆ ಎಂದು ಹೆಸರು ಬಂದಿದೆ. ಗರತಿತನದ, ಸೌಭಾಗ್ಯದ ಸಂಕೇತವಾದ ಹಚ್ಚೆಯ ಬಗೆಗೆ ರೂಢಿ ಮಾತೊಂದು ಹೀಗಿದೆ "ಸತ್ತಾಗ ನಮಕೂಟ ಬರುವುದು ಹಚ್ಚೆ, ಬಂಗಾರ, ಬೆಳ್ಳಿ ಯಾವ ಒಡವೆಗಳಲ್ಲ" ನೋಟಕ್ಕೆ ಕಾಣುವ ದೇಹದ ಎಲ್ಲ ಭಾಗಗಳ ಮೇಲೆ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಹೂವು, ಚಂದ್ರ, ನಕ್ಷತ್ರ, ಶಿಲುಬೆ, ಕಮಲ, ಚುಕ್ಕೆ, ಶಂಖ, ಮುತ್ತಿನ ಬಳ್ಳಿ, ಒಡವೆ, ಬಾಸಿಂಗ, ನವಿಲು, ಕುದುರೆ, ಬಾಳೆಗಿಡ, ತಾವರೆ ಹೂ, ನಿಂಬೆ ಸಸಿ, ನಂದಿಕೋಲು, ಜೋಗಿ ಜಡೆ, ಸೀತೆ ಸೆರಗು, ಶಿವನ ಬಾಸಿಂಗ, ಹಂಪಿ ತೇರು ಹೀಗೆ ಹಲವು ರೂಪಗಳಲ್ಲಿ ಹಚ್ಚೆ ಚಿತ್ರಗಳನ್ನು ಕಾಣುತ್ತೇವೆ. ಜನಪದ ಗೀತೆಗಳಲ್ಲಿ ಹಚ್ಚೆಯ ಹಾಡುಗಳು ಸಾಕಷ್ಟಿವೆ. ಹಚ್ಚೆ ಕಲಾವಿದರು ಜನಪದ ಗೀತೆಗಳನ್ನು ಹೇಳುತ್ತ ಹಚ್ಚೆ ಹಾಕುತ್ತಾರೆ. ಹಚ್ಚೆ ಉಲ್ಲೇಖದ ಒಂದು ಜನಪದ ಗೀತೆ ಹೀಗಿದೆ.

 ಹಂಚಿ ಬೊಟ್ಟಿನ ಕೈಯ ಒತ್ತಿ ಹಿಡಿಯಲು

 ಬ್ಯಾಡ, ನನರಾಯ ನೆತ್ತರಿಳಿದಾವ

 ಕಿರಿಬಳ್ಳಿ

 ಆಧುನಿಕ ಕಾಲದ ಮಹಿಳೆಯರ ಬದಲಾಗುತ್ತಿರುವ ಸೌಂದರ್ಯ ಪ್ರಜ್ಞೆಯ ಆತಂಕಕಾರಿ ಬೆಳವಣಿಗೆಯ ನಡುವೆಯೂ ಅನೇಕ ದೇಶಗಳಲ್ಲಿ "ಹಚ್ಚೆ" ಕಲೆ ಮಾಯವಾಗುತ್ತ ನಡೆದಿದೆ. ಆದರೂ ವಿಶ್ವದ ಹಿರಿಯಣ್ಣನಾದ ಅಮೇರಿಕೆಯೊಂದರಲ್ಲಿಯೇ ಮುನ್ನೂರು ಕೋಟಿ ಜನ ಹಚ್ಚೆ ಕಲೆ ಬಿಡಿಕೊಂಡಿರುವುದು ಈ ಕಲೆಯ ವಿಶ್ವಮಾನ್ಯತೆಯನ್ನು ಸಾರುತ್ತದೆ.

ಕಲೆಯ ಸಿರಿವಂತಿಕೆಯ ಬೆಡಗು :

 ಜನಪದ ಚಿತ್ರಕಲೆ ಕಲಾತ್ಮಕತೆಗೆ ಮಿಗಿಲಾದುದು. ಸಹಜತೆ, ಸರಳತೆ ಹಾಗೂ ಮೋಹಕತೆಯಿಂದ ಯಾರನ್ನೂ ಸೆಳೆಯುವಂಥದು. ಜನಪದರ ಮದರಂಗಿ ಕಲೆ ಈ ಬಗೆಯ ಮೋಹಕತೆಯಿಂದ ತನ್ನ ಜನಪ್ರಿಯತೆ ಉಳಿಸಿಕೊಂಡು ಬಂದಿದೆ. ಮದುವೆ ಸಂದರ್ಭದಲ್ಲಿ ಶಾಸ್ತ್ರ ರೂಪವಾಗಿ ಮದರಂಗಿ ಕಲೆಯನ್ನು ಅಂಗೈ ಮತ್ತು ಪಾದಗಳ ಮೇಲೆ ಚಿತ್ರಿಸುವ ಆಚರಣೆ ಜನಪದರಲ್ಲಿ ರೂಢಿಗತವಾಗಿದೆ. ಮದರಂಗಿ ಕಲೆಯಲ್ಲಿ ಹಲವು ಬಗೆಯ ಚಿತ್ತಾರಗಳನ್ನು ಕಾಣುತ್ತೇವೆ. ಮಾನವ, ಪ್ರಾಣಿ, ಪಕ್ಷಿ ಆಕೃತಿಯ ಚಿತ್ರಗಳಿಗಿಂತ ಹೆಚ್ಚಾಗಿ ಬಳ್ಳಿ, ಆಕೃತಿ, ಸುಳುಹುಗಳ ಚಿತ್ರಗಳನ್ನು ಬಿಡಿಸುತ್ತಾರೆ. ಆರಾಧನಾ ಮೂಲ ಸಂಕೇತ ಪ್ರಧಾನ ಆಕೃತಿಗಳಾದ ಸ್ವಸ್ತಿಕ, ಓಂ, ಶ್ರೀ, ಸೂರ್ಯ, ಚಂದ್ರ ಮೊದಲಾದ ಕಲೆ ಕಾಣುತ್ತೇವೆ. ಹೆಣ್ಣು ಮಕ್ಕಳಿಗೆ ಹಬ್ಬದ ಸಂಭ್ರಮದ ಸಂಕೇತವಾಗಿ ಮದರಂಗಿ ಕಲೆ ಉಳಿದುಕೊಂಡು ಬಂದಿದೆ. ಸಣ್ಣ ಸಣ್ಣ ಚುಕ್ಕೆಗಳ ಮೂಲಕ ಹೂವಿನ, ಎಲೆಯ, ಬಳ್ಳಿಗಳ ಚಿತ್ರ ಬಿಡಿಸುತ್ತಾರೆ. ಅಂಗೈ, ಮುಂಗೈಗಳ ಮೇಲೆ ಬಿಡಿಸಿದ ಮದರಂಗಿಯ ಕೆಂಪನೆಯ ಚಿತ್ರಗಳು ಹೆಂಗಳೆಯರ ಸೌಂದರ್ಯವನ್ನು ಇಮ್ಮಡಿಗೊಳಿಸುವುದರ ಜೊತೆಗೆ ಆರೋಗ್ಯ ಮತ್ತು ತಾರುಣ್ಯವನ್ನು ಸಂಕೇತಿಸುತ್ತವೆ. ಮದರಂಗಿ ಕಲೆ ಬಿಡಿಸುವಾಗ ಹೆಣ್ಣುಮಕ್ಕಳು ಸೋಬಾನೆ ಮೊದಲಾದ ಜನಪದ ಗೀತೆಗಳನ್ನು ಹಾಡುತ್ತಾರೆ.

 ಹಳೆಯ ಬಟ್ಟೆಗಳನ್ನು ಕಲಾತ್ಮಕವಾಗಿ ಕತ್ತರಿಸಿ, ವಿಶಿಷ್ಟ ಹೆಣಿಕೆಯ ಮೂಲಕ ಮೋಹಕ ಕಲೆಯನ್ನು ಎಳೆಗಳ ಮೂಲಕ ಬಿಡಿಸುವ ಜನಪದರ "ಕೌದಿ ಚಿತ್ರಕಲೆ" ತುಂಬಾ ಪ್ರಾಚೀನವಾದುದು. ಕ್ರಿ.ಶ. ಸುಮಾರು ಎರಡನೆಯ ಶತಮಾನದ ಆಯುರ್ವೇದ ಶಾಸ್ತ್ರ ಕೃತಿ "ಚರಕ ಸಂಹಿತಾ" ಕೌದಿಯನ್ನು ಉಲ್ಲೇಖಿಸುವ ಪ್ರಾಚೀನ ದಾಖಲೆಯಾಗಿದೆ. ನಮ್ಮ ಜನಪದರು ಕೌದಿಯಲ್ಲಿ ವೈವಿದ್ಯತೆಯ ಚಿತ್ತಾರಗಳನ್ನು ಬಿಡಿಸುತ್ತಾರೆ. ಹೀಗಾಗಿ ಕೌದಿಯು ಜನಪದ ಸ್ತ್ರೀಯರ ಸೌಂದರ್ಯ ಪ್ರಜ್ಞೆಯ ಅಭಿವ್ಯಕ್ತಿಯಾಗಿದೆ.

 ಕೌದಿಗಳಲ್ಲಿ ನಮ್ಮ ಜನಪದರು ರಾಮಾಯಣ, ಮಹಾಭಾರತ ಪ್ರಸಂಗಗಳ ರಾಮನ ತೊಟ್ಟಿಲು, ಸೀತೆ, ಲವಕುಶ, ಮಾಯಾಮೃಗ, ರಾವಣ, ಹಣಮಂತ, ಪಗಡೆಯಾಟ ಮೊದಲಾದ ಚಿತ್ರಗಳನ್ನು ಐತಿಹಾಸಿಕ ಘಟನೆಗಳಾದ ಉಳುವಿ, ಹಂಪಿ, ಶ್ರೀಶೈಲ ಜಾತ್ರೆಗಳ ತೇರು, ಗುಡಿ, ಸಿದ್ಧಾರೂಢರು, ಶಿವಶರಣರು, ಏಸು, ಬುದ್ಧ, ಮಹಾವೀರ, ಪೈಗಂಬರ ಚಿತ್ರಗಳನ್ನು ಕೌದಿಗಳಲ್ಲಿ ಬಿಡಿಸುತ್ತಾರೆ. ಕೃಷಿಗೆ ಸಂಬಂಧಿಸಿದ ಕೃಷಿ ಸಲಕರಣೆಗಳು, ನಿಸರ್ಗ ಸೌಂದರ್ಯದ ಚಿತ್ರಗಳು, ಪಗಡೆ ಬಜಾರ, ಐದರ ಪಗಡಿ, ನಾಲ್ಕರ ಪಗಡಿ, ಕೊಳಲು, ಭಾವಿ ತೇರು, ಬಾಸಿಂಗ, ದಂಡೆ, ಗೆಳತಿಯರು, ಸೂರ್ಯ, ಚಂದ್ರ, ನಕ್ಷತ್ರ, ನವಿಲು, ಗಿಳಿ, ಆನೆ, ಒಂಟಿ, ಎಲೆಬಳ್ಳಿ, ಬಾಳೆಗೊನೆ, ಗುಬ್ಬಿ ಕಾಲು, ಹಕ್ಕಿಕಾಲು, ಪ್ರಾಣಿಯ ಹೆಜ್ಜೆ, ಸ್ವಸ್ತಿಕ ಮೊದಲಾದ ಚಿತ್ರಗಳು ಕೌದಿಯಲ್ಲಿ ಗ್ರಾಮೀಣರು ಬಿಡಿಸುತ್ತಾರೆ.

 ಆಧುನಿಕ ಕಲಾ ಪ್ರಕಾರವಾದ ಕೋಲಾಜ್‍ದಲ್ಲಿ ಬಣ್ಣದ ಕಾಗದ ಹಾಗೂ ಬೇರೆ ಬೇರೆ ವಸ್ತುಗಳನ್ನು ವಿನ್ಯಾಸಗಳಿಗನುಗುಣವಾಗಿ ಕತ್ತರಿಸಿ ಹಾಳೆಗೆ ಅಂಟಿಸುವ ಮೂಲಕ ಸಾಂಕೇತಿಕ ಚಿತ್ರ ನಿರೂಪಿಸುತ್ತಾರೆ. ಹಾಗೆನೇ ನೇರವಾಗಿ ಬಣ್ಣ, ಕುಂಚ ಬಳಸದೇ ಬಣ್ಣ ಬಣ್ಣದ ಕೌದಿ ತುಂಡು ಬಟ್ಟೆಗಳಿಂದ ಚಿತ್ರ ಬಿಡಿಸುವ ಜನಪದದ ಚಿತ್ರಕಲೆಯು ಆಧುನಿಕ ಕೋಲಾಜ್ ಚಿತ್ರಕಲೆಯ ಹುಟ್ಟಿಗೆ ಕಾರಣವಾಗಿದೆ ಎನ್ನಬಹುದು.

 ತುಂಬಾ ಜನಪ್ರಿಯವಾಗಿರುವ ಕಸೂತಿ ಕಲೆಯು ಜನಪದ ಚಿತ್ರಕಲೆಯ ಮತ್ತೊಂದು ಕೊಡುಗೆ. ಬಟ್ಟೆಯ ಮೇಲೆ ಸೂಜಿ ಬಳಸಿ ದಾರಗಳಿಂದ ಬಿಡಿಸುವ ಅಲಂಕಾರಿಕ ಕಲೆಯು ಸೂಜಿಯ ಹುಟ್ಟಿನೊಂದಿಗೆ ಬೆಳೆದು ಬಂದಿದೆ. ಕ್ರಿ.ಶ.ಪೂ. 3000 ದ್ದೆನ್ನಲಾದ ಮೊಹೆಂಜೊದಾರೊದಲ್ಲಿನ ಕಂಚಿನ ಸೂಜಿ ಕಸೂತಿ ಕಲೆಯ ಇತಿಹಾಸವನ್ನು ತುಂಬಾ ಪ್ರಾಚೀನಕ್ಕೆ ಕರೆದೊಯ್ಯುತ್ತದೆ. ನಮ್ಮ ಹಳ್ಳಿಗಳಲ್ಲಿ ಹೆಣ್ಣುಮಕ್ಕಳು ಕಸೂತಿ ಕಲೆಯ ಕುಶಲತೆಯಲ್ಲಿ ತಮ್ಮ ಜಾಣ್ಮೆ ಮೆರೆದಿದ್ದಾರೆ. ಹೂಬಳ್ಳಿಗಳು, ಪಕ್ಷಿಗಳು, ಮನುಷ್ಯನಾಕೃತಿಗಳು, ನಿಸರ್ಗದ ಚಿತ್ರಗಳು, ಪೂಜಾ ಸಲಕರಣೆಗಳು, ಪ್ರೀತಿಯ ಸಂಕೇತಗಳು ಮೊದಲಾದವನ್ನು ಕಸೂತಿ ಕಲೆಯಲ್ಲಿ ಹೆಣಿಕೆ ಮಾಡುತ್ತಾರೆ.

 ಜನಪದ ಕಲೆಗೆ ಆಕಾಶದಷ್ಟು ವ್ಯಾಪ್ತಿ, ಸಾಗರದಷ್ಟು ಆಳವಿದೆ. ನಮ್ಮ ಬದುಕಿನ ಎಲ್ಲ ಬಗೆಯ ಸೃಜನಶೀಲ ಸೃಷ್ಠಿಯು ಜನಪದ ಕಲೆಯಾಗಿ ಪರಿಣಮಿಸಿದೆ. ಆರಾಧನಾ ಸಂಸ್ಕøತಿಯ ಮನೋಭಾವದಿಂದ ಹುಟ್ಟಿಕೊಂಡ ಜನಪದ ಚಿತ್ರಕಲೆಯು ಜನಪದದ ಸೌಂದರ್ಯಪ್ರಜ್ಞೆ, ಕಲಾ ಶ್ರೀಮಂತಿಕೆಗೆ ಸಾಕ್ಷಿಯಾಯಿತು. ಜನಪದ ಚಿತ್ರಕಲೆಯ ಮೂಲಕ ಮಾನವ ಸಂಸ್ಕøತಿಯು ಕಾಲ ಕ್ರಮೇಣ ಹೇಗೆ ರೂಪಗೊಂಡಿತು ಎಂಬುದನ್ನು ಅರಿಯಲು ಮಹತ್ವಪೂರ್ಣವಾದ ದಾಖಲೆಯಾಗಿ ನಿಲ್ಲುತ್ತದೆ. ಆದರಿಂದು ಆಧುನಿಕ ಸಂದರ್ಭದಲ್ಲಿ ಜನಪದಕ್ಕೆ ಅದರಲ್ಲೂ ಜನಪದ ಚಿತ್ರಕಲೆ ಮರೆಯಾಗುತ್ತಿದೆ. ಚಿತ್ರಕಲೆಯ ಅಳಿಗಾಲದಿಂದ ಪರ್ಯಾಯವಾಗಿ ನಮ್ಮ ಜನಪದರ ಹಾಡು ಸಂಸ್ಕøತಿ ಅವಸಾನವಾಗುತ್ತಿದೆ. ಅವಿಭಕ್ತ ಕುಟುಂಬ ವ್ಯವಸ್ಥೆ ಛಿದ್ರ ಛಿದ್ರವಾಗಿದೆ. ಆರೋಗ್ಯದಲ್ಲಿ ಆತಂಕ ಸೃಷ್ಠಿಯಾಗಿದೆ. ಧಾರ್ಮಿಕ ಆಚರಣೆಗಳು ಯಾಂತ್ರೀಕೃತವಾಗಿದೆ. ಮನುಷ್ಯ ಮನುಷ್ಯರ ನಂಬುಗೆಗಳು ಕಡಿಮೆಯಾಗಿವೆ. ಕಲೆಯನ್ನು ಪ್ರೀತಿಸುವ ಗೌರವಿಸುವವರ ಸಂಖ್ಯೆ ವಿರಳವಾಗಿದೆ. ಕೈಕುಶಲತೆಗಿಂತ ಯಂತ್ರ ಬಿಡಿಸುವ ಕಲೆಗೆ ಯುವ ಪೀಳಿಗೆ ಮೋಹಿತವಾಗಿದೆ. ಈ ಎಲ್ಲ ಆತಂಕಗಳು ಜನಪದ ಚಿತ್ರಕಲೆಯ ಅವಸಾನಕ್ಕೆ ಮೊದಲಾಗಿವೆ. ಪರಂಪರೆಯ ಜ್ಞಾನವನ್ನು ಆಧುನಿಕತೆಗೆ ಒಗ್ಗಿಸಿಕೊಳ್ಳುವುದಷ್ಟೇ ನಮ್ಮ ಮುಂದಿರುವ ಒಂದು ಪರ್ಯಾಯ ಅವಕಾಶ, ಹೀಗಾಗಿ ಆಧುನಿಕ ಚಿತ್ರ ಕಲಾಕಾರರು ಪರಂಪರೆಯ ಕೊಂಡಿಯಿಂದ ಕಳಚಿಕೊಳ್ಳದೇ ಇದನ್ನು ರೂಢಿಸಿಕೊಳ್ಳುವ ಮೂಲಕ ತಮ್ಮ ಸೃಜನಶೀಲತೆಯ ಹೊಸ ಸೃಷ್ಠಿಯನ್ನು ತೆರೆದಿಡಬೇಕಾಗಿದೆ.


- ಡಾ. ಪ್ರಕಾಶ. ಗ. ಖಾಡೆ


ವಿಳಾಸ

ಡಾ. ಪ್ರಕಾಶ ಗ. ಖಾಡೆ, 

                ಎಂ.ಎ. ಪಿಎಚ್.‍ಡಿ.

ಶ್ರೀ ಗುರು ನಿಲಯ,

ಸೆಕ್ಟರ್ ನಂ.63 , ನವನಗರ, ಬಾಗಲಕೋಟ

: 9845500890

Shivaratri -Dr.Prakash Khade

 ಶಿವರಾತ್ರಿ ವಿಶೇಷ ಲೇಖನ   : ಜನಪದರ ಹಾಡುಗಳಲ್ಲಿ ಶಿವರಾತ್ರಿ :  -ಡಾ.ಪ್ರಕಾಶ ಗ. ಖಾಡೆ,    ಬಾಗಲಕೋಟ ಮೊ. 9845500890    ಭಾರತೀಯ ಸಂಸ್ಕøತಿಯ ಬೇರುಗಳು ನಮ್ಮ ಜನಪದರ...