Saturday, April 24, 2021

‘ಮಧುರಚೆನ್ನ’ರ ಏಕೈಕ ಕಾವ್ಯ ಕೃತಿ ‘ನನ್ನ ನಲ್ಲ’

‘ಮಧುರಚೆನ್ನ’ರ ಏಕೈಕ ಕಾವ್ಯ ಕೃತಿ ‘ನನ್ನ ನಲ್ಲ’ :  ನವೋದಯ ಕಾವ್ಯದ ಆದ್ಯ ಕೃತಿ

              -ಡಾ.ಪ್ರಕಾಶ ಗ.ಖಾಡೆ , ಬಾಗಲಕೋಟ

 



      ಕನ್ನಡ ನವೋದಯಕ್ಕೆ ಹೊಸದೊಂದು ರೂಪ, ಶೈಲಿ, ಭಾವ ಸಂಪತ್ತನ್ನು ಜನಪದ ಮೂಲದಿಂದ ಕಟ್ಟಿಕೊಟ್ಟ ಮಧುರಚೆನ್ನರು ಹೊಸ ಕಾವ್ಯದ ಸೃಷ್ಟಿಗೆ ಆದ್ಯರೆನಿಸಿದರು. ‘ಮಧುರಚೆನ್ನ’ರ ಏಕೈಕ ಕಾವ್ಯ ಕೃತಿ ‘ನನ್ನ ನಲ್ಲ’ ಕನ್ನಡ ನವೋದಯ ಕಾವ್ಯದ ಆದ್ಯ ಕೃತಿ ಎನ್ನಿಸಿಕೊಳ್ಳುತ್ತದೆ. ಈ ಮಾತಿಗೆ ಸಾಕ್ಷಿಯಾಗಿ ಕನ್ನಡದ ಹೆಸರಾಂತ ವಿಮರ್ಶಕ,ರಾಷ್ಟ್ರ ಕವಿ ಜಿ.ಎಸ್.ಶಿವರುದ್ರಪ್ಪನವರ ಈ ಮಾತುಗಳು ಸ್ಪಷ್ಟ ನಿದರ್ಶನ ಒದಗಿಸುತ್ತವೆ. “ಮಧುರಚೆನ್ನರ ‘ನನ್ನನಲ್ಲ’ ಮೊದಲು ಪ್ರಕಟವಾದದ್ದು 1933ರಲ್ಲಿ, ದ.ರಾ.ಬೇಂದ್ರೆಯವರ ‘ಗರಿ’ ಪ್ರಕಟವಾದದ್ದು 1933ರಲ್ಲಿ, ಪು.ತಿ.ನ. ಅವರ ‘ಹಣತೆ’ ಪ್ರಕಟವಾದದ್ದು 1933ರಲ್ಲಿ, ಕುವೆಂಪು ಅವರ ‘ಕೊಳಲು’ ಪ್ರಕಟವಾದದ್ದು 1930ರಲ್ಲಿ; ಹಾಗೆಯೇ ಗೋವಿಂದ ಪೈ ಅವರ ‘ಗಿಳಿವಿಂಡು’ ಪ್ರಕಟವಾದದ್ದು 1930ರಲ್ಲಿ. ಈ ಹಿನ್ನೆಲೆಯಿಂದ ನೋಡಿದರೆ, ಕಳೆದ ಶತಮಾನದ ಮೂವತ್ತರ ದಶಕವು ನವೋದಯ ಸಾಹಿತ್ಯ ಸಂದರ್ಭದ ಅನೇಕ ಹೊಸ ಹುಟ್ಟುಗಳ ಕಾಲ. ಹಾಗೆ ನೋಡಿದರೆ ಈ ಎಲ್ಲ ಕವನ ಸಂಕಲನಗಳೂ ಮುಂದೆ ಮಹತ್ವದ ಕವಿಗಳಾಗಿ ರೂಪುಗೊಂಡ ಅವರವರ ಮೊದಲ ಸಂಕಲನಗಳು. ಮಧುರಚೆನ್ನರ ‘ನನ್ನ ನಲ್ಲ’ವೂ ಅವರ ಮೊದಲ ಸಂಕಲನವೇ. ಆದರೆ ಬೇಂದ್ರೆ, ಪು.ತಿ.ನ., ಪೈ, ಕುವೆಂಪು ಅವರುಗಳ ಮೊದಲ ಸಂಕಲನಗಳಿಗೂ ಮಧುರೆಚನ್ನರ ‘ನನ್ನನಲ್ಲ’ ಎಂಬ ಮೊದಲಿನ ಸಂಕಲನಕ್ಕೂ ಮೌಲಿಕವಾದ ವ್ಯತ್ಯಾಸವಿದೆ. ಅದೆಂದರೆ ಕುವೆಂಪು, ಬೇಂದ್ರೆ, ಪೈ, ಪು.ತಿ.ನ. ಅವರ ಮೊದಲ ಸಂಕಲನಗಳು ಅವರವರ ಕಾವ್ಯವು ಮುಂದೆ ಮೈತಳೆದ ಅವರ ಕಾವ್ಯ ಸತ್ವದ ಕೆಲವು ಲಕ್ಷಣಗಳ ಹಾಗೂ ಆಶಯಗಳ ‘ಬೀಜ ರೂಪ’ದಂತಿವೆ ಎನ್ನುವುದಾದರೆ ‘ಮಧುರಚೆನ್ನ’ರ ‘ನನ್ನನಲ್ಲ’ ಅವರ ಕಾವ್ಯದ ಮೊದಲೂ ಆಗಿದೆ. ತುದಿಯೂ ಆಗಿದೆ; ಬೀಜವೂ ಆಗಿದೆ, ಹಣ್ಣು ಆಗಿದೆ.” ಎಂಬ ಡಾ. ಶಿವರುದ್ರಪ್ಪನವರ ಈ ಮಾತುಗಳು ಮಧುರಚೆನ್ನರ ಕಾವ್ಯ ಶಕ್ತಿಯನ್ನು ಮತ್ತು ಕನ್ನಡ ಸಂದರ್ಭದಲ್ಲಿ ಅವರ ಕಾವ್ಯದ ಶ್ರೇಷ್ಟತೆಯನ್ನುಸಾರುತ್ತದೆ. ‘ಅನುಭಾವ ಕವಿ’ ಎಂದು ಗುರುತಿಸಿಕೊಂಡ ಮಧುರಚೆನ್ನರ ‘ಜಾನಪದ ನೆಲೆ’ ಮುಂದೆ ವ್ಯಾಪಕವಾಗಿ ಬೆಳೆದು ಬಂದದ್ದು ಕಾಣುತ್ತೇವೆ. ಅನುಭಾವಿ ಕವಿಯಾಗಿ ಮಧುರಚೆನ್ನರ ನಂತರ ರೂಪಿತವಾದವರಿಗಿಂತ ಜಾನಪದವನ್ನು ಪ್ರಭಾವಿಸಿಕೊಂಡು ಬರೆದು ಬೆಳೆದವರ ಸಂಖ್ಯೆ ಹೆಚ್ಚು. ಹೀಗಾಗಿ ಮಧುರಚೆನ್ನರು ಆರಂಬಿsಸಿದ ಜನಪದ ಪ್ರಭಾವಿತ ಕಾವ್ಯ ಪ್ರಕಾರವೇ ಮುಂದೆ ಕನ್ನಡ ನವೋದಯ ಕಾವ್ಯವನ್ನು ರೂಪಿಸಿತು.
      ಮಧುರಚೆನ್ನರ ‘ಸುಖ ಜೀವನ’ ಕವಿತೆ ಜನಪದರ ತ್ರಿಪದಿಗಳ ಬಂಧ ಮತ್ತು ಭಾವವನ್ನೇ ಒಳಗೊಂಡಿವೆ. ಹೆಣ್ಣುಮಗಳ ಬದುಕಿನ ವಾಸ್ತವ ಚಿತ್ರಣವನ್ನು ನೀಡುವಲ್ಲಿ ಮಧುರಚೆನ್ನರು ಆ ಕಾಲಕ್ಕೆ ಹೆಣ್ಣುಮಕ್ಕಳೇ ಹಾಡಿಕೊಂಡು ಬರುತ್ತಿದ್ದ ಜನಪದ ಗೀತೆಗಳ ರೂಪವನ್ನೇ ಬಳಸಿಕೊಂಡಿರುವುದು ಅವರ ಕಾವ್ಯ ಜಾನಪದೀಯವಾಗಿರುವುದಕ್ಕೆ ನಿದರ್ಶನವಾಗಿದೆ.
ಸುಖವು ಬೀದಿಯ ನೆರಳ | ದುಖವು ದೂಡುವ ಬಿಸಿಲ
ಸುಖ - ದುಃಖ ನಮಗ ಸರಿಸವನ | ತಂಗೆಮ್ಮಾ
ಒಂದು ಬಿಟ್ಟೊಂದು ದೊರಿಯಾವ ||
..................................
ಸುಖವಂತ ಹಿಡಿದೀವ | ದುಃಖವಾಗಿ ಪಡಿದೀವ
ಹೂವಲ್ಲ ಜಾಣೆ ಹುಳನೋಡ - ತಂಗೆಮ್ಮಾ
ಬೆಳದಿಂಗಳಲ್ಲ ಉರಿ ಬಿಸಿಲ
ನೆಲವಂತ ನಿಂತೀವ, ನೀರಾಗಿ ನುಂಗೀತ
ಬೆಣ್ಯಲ್ಲ ಜಾಣೆ ಬಿಳಿಸುಣ್ಣ - ತಂಗೆಮ್ಮಾ
ಪರಿಮಳವಲ್ಲ ವಿಷಗಾಳಿ
ಜನಪದರು ಸೃಷ್ಟಿಸುವ ಅನುಭವ, ಅನುಭಾವದ ಕಿಡಿನುಡಿಗಳಾದ ಗಾದೆ ಮಾತುಗಳು ಮಧುರಚೆನ್ನರ ಕಾವ್ಯದಲ್ಲೂ ಸೃಷ್ಟಿಯಾಗಿರುವುದಕ್ಕೆ ಈ ಕವಿತೆ ಮುಖ್ಯವಾಗುತ್ತದೆ.
ಹೊಳಿ ಬೀಳ ಹೋದೀವ | ಹೊಳಿ ಸರಿದು ಇಳಿದೀತ
ಹೊಳಿ ನಮಗ ಹಾಸನೆಲವಾಯ್ತ - ತಂಗೆಮ್ಮಾ
ಬ್ಯಾಗೀಯ ಬೆಂಕಿ ಬೂದ್ಯಾಯ್ತ
........................................


ಆರ್ಯಾಣದಡವ್ಯಾಗ | ಯಾರ್ಯಾರ ಸುಳವಿಲ್ಲ
ಎಲ್ಲೀದು ಬಂತು ಹಿರಿಹರಕಿ - ತಂಗೆಮ್ಮಾ
ಒಳ ಹೊರಗ ನಮಗ ಹಿರಿಹಿಗ್ಗ
ಜನರಾಡುವ  ಮಾತಿನ ಧಾಟಿಯಲ್ಲಿ ಸಾಗುವ ಕವಿತೆಯಲ್ಲಿ ಬಳಕೆಯಾದ ‘ಹೊಳಿ ಬೀಳ ಹೋದಿವ, ಗವಿ ಕಂಡು ಹೊಕ್ಕೀವ’, ನುಡಿಗಟ್ಟುಗಳು ಹಳ್ಳಿಗರ ಬದುಕಿನ ನೋವು, ವಿಷಾಧವನ್ನು ಧ್ವನಿಸುತ್ತದೆ.
ಮೂರ್ಹೆಜ್ಜೆ ದಾಟಿದರ, ಮುಂದಲ್ಲೇ ಗುಡಿಸಲವ
ಅಲ್ಲಿ ಮುನಿಗೋಳ ಅರಸೊತಿಗೆ - ತಂಗೆಮ್ಮಾ
ಅವರಂಥ ಸುಖವ ಅರಸರಿಯ
ನಮ್ಮಂಗೆ ಅತ್ತವರು ನಮ್ಮಂಗೆ ಕರೆದವರು
ನಮ್ಮಂಗೆ ಬಾಡಿ ಬೆಂದವರು | ತಂಗೆಮ್ಮಾ
ಕಡಿಗೊಮ್ಮೆ ಗಟ್ಟಿಗೊಂಡವರು
ಬದುಕಿನ ಸುಖ, ಸಾಂತ್ಪನವನ್ನು ಅರಸುವಲ್ಲಿ ಪಡಬಾರದ ಕಷ್ಟವನ್ನು ತಾಳಿ ಧೃತಿಗೆಡೆದೆ ಸಾರ್ಥಕ್ಯವನ್ನು ಕಂಡುಕೊಳ್ಳುವ ಪರಿಯನ್ನು ಮಧುರಚೆನ್ನರು ಜನಪದರ ತ್ರಿಪದಿಯಲ್ಲಿಯೇ ಹೇಳುವ ಮೂಲಕ ವಿಶಿಷ್ಟ ನುಡಿಗಟ್ಟುಗಳನ್ನು ಸೃಷ್ಟಿಸಿದ್ದಾರೆ.
‘ಸುಖವು ಬೀದಿಯ ನೆರಳ, ದುಃಖವು ದೂಡುವ ಬಿಸಿಲ’,
‘ಹೂವಲ್ಲ ಜಾಣೆ ಹುಳನೋಡ’
‘ಬೆಣ್ಯಲ್ಲ ಜಾಣೆ ಬೀಳಿಸುಣ್ಣ’
ಈ ಬಗೆಯ ನುಡಿಸಾಲುಗಳು ಮಧುರಚೆನ್ನರು ಜನಪದರ ನಾಲುಗೆಯಿಂದ ಪಡೆದುದಕ್ಕೆ ಕಾರಣವಾಗಿವೆ. ಈ ಮೂಲಕ ಜನಪದರನ್ನು ತಮ್ಮ ಕವಿತೆಗಳಲ್ಲಿ ಹಿಡಿದಿಡುವ ಮೂಲಕ ಗ್ರಾಮೀಣರ ಅರ್ಥಪೂರ್ಣ ಪದಗಳಿಗೆ ಕನ್ನಡ ಕಾವ್ಯಭಾಷೆಯಲ್ಲಿ ಒಂದು ಅಪರೂಪದ ಸ್ಥಾನ ಕಲ್ಪಿಸಿ ಕೊಟ್ಟಿದ್ದಾರೆ. ಜೀವನದಲ್ಲಿ ದುಃಖದ ಅನಿವಾರ್ಯತೆಯನ್ನು ಅರಿತು ಬದುಕು ಮಾಡುವ ಅವಶ್ಯಕತೆಯನ್ನು ಬಿಂಬಿಸುವ ಈ ತ್ರಿಪದಿಗಳು ಜನಪದ  ಭಾಷೆ, ನುಡಿಗಟ್ಟು ಮತ್ತು ಅನುಭವದಿಂದ ಕೇಳುಗ ನೆಲೆಯಲ್ಲಿ ಅಚ್ಚೊತ್ತಿ ನಿಲ್ಲುವಂತಹವು. ಮಧುರಚೆನ್ನರ ‘ಸಿಡಿಲು’ ಕವಿತೆ ಜನಪದ ಗಾದೆಗೆ ಪೂರಕವಾಗಿದೆ. ‘ಅಲ್ಲಿ ಜುಳು ಜುಳು ಇಲ್ಲಿ ಜುಳು  ಜುಳು ಕಲ್ಯಾಣತನಕ ಜುಳು ಜುಳು’ ಎಂಬುದು ಜನಪದ ಗಾದೆಯ ಕಾವ್ಯಭಾಷೆ ಅಂಥದೇ ರೂಪ ಇಲ್ಲಿದೆ.
ಹಣ್ಣು ಬಿತ್ತು ಹಣ್ಣು ಬಿತ್ತು
ಇಂದ್ರವನದ ಹಣ್ಣು ಬಿತ್ತು
ಅಲ್ಲಿ ಬಿತ್ತು ಇಲ್ಲಿ ಬಿತ್ತು
ಎಲ್ಲಿ ಬಿತ್ತು? ಇಲ್ಲೆ ಬಿತ್ತು
ಬೇಡದವರ ಮೇಲೆ ಬಿತ್ತು
ಬೇಡಿದವರಿಗಿಲ್ಲ ತುತ್ತು
ಹಸಿಯದವರು ಹಲವು ಮಂದಿ
ಹಸಿದ ಜನರು ಕೆಲವು ಮಂದಿ
ಪ್ರಕೃತಿಯ ವಿಸ್ಮಯ ಶಕ್ತಿಯನ್ನು ಹಣ್ಣಿಗೆ ಹೋಲಿಸಿ ಅದು ಉಂಟುಮಾಡಿದ ಪರಿಣಾಮದ ಚಿತ್ರಣವನ್ನು ಕೊಡುವಲ್ಲಿ ಮಧುರಚೆನ್ನರು ‘ಬೇಡದವರ ಮೇಲೆ ಬಿತ್ತು, ಬೇಡಿದವರಿಗಿಲ್ಲ ತುತ್ತು’ ಎಂಬಲ್ಲಿ ಪ್ರತಿಫಲಾಪೇಕ್ಷೆಯ ರೂಪದಲ್ಲಿ ಪ್ರಕೃತಿ ನೀಡುವ ಆಘಾತಕಾರಿ ಸಂದರ್ಭವನ್ನು ಗ್ರಾಮ್ಯವಾಗಿ ಚಿತ್ರಿಸಿದ್ದಾರೆ.
ಮಧುರಚೆನ್ನರ ‘ರೋಹಿಣಿ’ ಜನಪದರ ಒಲುಮೆಗೀತೆಗಳ ರೂಪಕ್ಕೆ ಪೂರಕವಾದುದು. ಜನಪದರಲ್ಲಿ ಪ್ರೇಮಗೀತೆಗಳಿಗೆ ವಿಶೇಷ ಸ್ಥಾನವಿದೆ.
ಆಡ ಕಾಯೋಣ ಬಾರ, ಕೂಡಿ ಮಲಗೋಣ ಬಾರ
ಹಚ್ಚಗೊಳಗೊಳಕಿ ಬನದಾಗ - ಆಡಿದ ಮಾತ
ಮನದಾಗ ಇಲ್ಲೇನ ಎಲೆ ಹುಡುಗಿ
(ಸಂ.ಜಿ.ಬಿ.ಖಾಡೆ)
ಜನಪದ ತ್ರಿಪದಿಗಳಲ್ಲಿ ಹೀಗೆ ವ್ಯಕ್ತವಾಗಿರುವ ಹಳ್ಳಿಗರ ಸರಸ ಸಂಭ್ರಮದ ಗೀತೆಗಳ ರೂಪದಲ್ಲಿಯೇ ‘ರೋಹಿಣಿ’ಯ ಸಾಲುಗಳು ಮೈದೆಳೆದಿವೆ,
ಬಾರೆ ಗೆಳತಿ
ಒಳಗೇ ಕುಳಿತಿ
ಅಟ್ಟಾ ಏರಿ
ಮೇಲೆ ನಿಂತಿ
ಕದಾಗಿದಾ ನೂಕಿಕೊಂಡು
ಚಿಲಕಾಗಿಲಕಾ ಹಾಕಿಕೊಂಡು
ಅಲ್ಲೇ ಕುಳಿತಿ
ಬಾರೇ ಗೆಳತಿ
ಈ ಪ್ರೇಮ ಕವಿತೆಯಲ್ಲಿ ಬಳಕೆಯಾಗಿರುವ ‘ಕದಾಗಿದಾ’ ‘ಚಿಲಕಾಗಿಲಕಾ’ ಪದಗಳು ಜನಪದರ ದ್ವಿರುಕ್ತಿಗಳಾಗಿವೆ. ಒಂದು ಸಂದರ್ಭದ ಅರ್ಥವಂತಿಕೆಯನ್ನು ಸ್ಪಷ್ಟಪಡಿಸಲು ಬಳಸುವ ಇಂಥ ರಚನೆಗಳು ಜನಪದರ ಪದ ರಚನಾ ಕುಶಲತೆಯನ್ನು ತೋರುತ್ತವೆ. ‘ನೀ ಕೂತಲ್ಲಿ ಜ್ಯೋತಿಯ ಢಾಳ, ನಾ ಕೂತಲ್ಲಿ ಕತ್ತಲೆಯ ಕಾಳ’ ಎಂಬಲ್ಲೂ ಢಾಳ, ಕಾಳ ಈ ಪದಗಳು ಧ್ವನಿಸುವ ಪ್ರಜ್ವಲತೆ ಮತ್ತು ಕತ್ತಲು ಅರ್ಥರೂಪಿ ಶಕ್ತಿಯನ್ನು ಕವಿ ಜನಪದರಿಂದಲೇ ತಮ್ಮದಾಗಿಸಿಕೊಳ್ಳುತ್ತಾರೆ.
ಏಸೋ ಕಾಲಕೆ
ಅಟ್ಟಕೆ  ಬಂದೀ
ಅಲ್ಲೀದಿಲ್ಲೀ
ಗೆಂದರೆ ಬಂದೀ
ಬರತೀ ಬರತೀ ಬಂದೆ ಬರತೀ
ಎಷ್ಟೊತ್ತಾರೆ ಅಲ್ಲೇ ಇರತಿ
ಹೀಗೆ ಕವಿತೆ ಜಾನಪದೀಯ ಶೈಲಿ, ಪದ, ಹಾಗೂ ಅರ್ಥದಿಂದ ಕೂಡಿ ವಿಶಿಷ್ಟವೆನಿಸಿದೆ. ‘ಎಂದಿಗೊಮ್ಮೆ ಹಾಕುತ ಹಣಕಿ, ಮಾರಿ ತೋರಿ ತುಸು ತುಸು ಇಣಕಿ’ ಎಂಬಿತ್ಯಾದಿ ನುಡಿಸಾಲುಗಳು ಇಡೀ ಕವಿತೆಯನ್ನು ಜಾನಪದೀಯಗೊಳಿಸಿದೆ. ಹೀಗೆ ಪ್ರೆಮದ ಎಳೆಯನ್ನು ಆಧ್ಯಾತ್ಮದ ಭಾವದಲ್ಲಿ ಸರಿ ಜೋಡಿಸುವ ಹೆಣಿಕೆಯಲ್ಲಿ ಮಧುರಚೆನ್ನರು ಜಾನಪದವನ್ನು ತುಂಬಾ ಗಾಢವಾಗಿಯೇ ಬಳಸಿಕೊಳ್ಳುತ್ತಾರೆ.
ಮುಗಿಯದ ಹಾಡು
        ಮಧುರಚೆನ್ನರು ಕಾವ್ಯದಲ್ಲಿ ಬಳಸುವ ಒಂದೊಂದು ಪದವೂ ಗ್ರಾಮ್ಯ ಜನಜೀವನದ ಬಳಕೆಯ ವಿಶಿಷ್ಟ ನುಡಿಗಟ್ಟು, ಪದಶಕ್ತಿಗೆ ಸಾಕ್ಷಿಯಾಗಿವೆ. ಅವರು ಮಧುರಗೀತದಲ್ಲಿ ಬಳಸಿದ “ಮನಗಂಡ” ಪದವನ್ನೇ ತೆಗೆದುಕೊಂಡರೂ ಇಂಥ ಪದಗಳ ಗ್ರಾಮ್ಯ ಪದದ ಶ್ರೇಷವಿತೆ ಅರಿವಾಗುತ್ತದೆ. ಇಲ್ಲಿ ಈ ಪದವನ್ನು ಜನಪದರು ‘ಭಾರಿ’ ಎಂಬ ಅರ್ಥದಲ್ಲಿ ಬಳಿಸಿದರೆ ನಾಗರಿಕ ಭಾಷೆಯಲ್ಲಿ “ಮನಸ್ಸಿಗೆ ಹೊಳೆದ” ಎಂಬ ಅರ್ಥದಲ್ಲಿ ಬಳಕೆಯಾಗುತ್ತದೆ. ಈ ಎರಡರ ‘ಸಿದ್ದಿ’ ಮಧುರಚೆನ್ನರ ಕಾವ್ಯದಲ್ಲಿದೆ.
ದೇವಲೀಲೆಯೋ ಕಾಣೆ ಕರ್ಮ ಜಾಲವೋ ಕಾಣೆ
ಅದು ನಮ್ಮ ಬುದ್ದಿಯಾಚೆಗಿನ  ಮಾತು
ಯಾವುದೇನೇ ಬರಲಿ, ಪ್ರೀತಿಯಂಥಾ ವಸ್ತು
ಭವದಲ್ಲಿ  ಕಾಣೆ ಮನಗಂಡ ಮಾತು
ಇಲ್ಲಿ ಗ್ರಾಮ್ಯವಾಗಿ ಬಳಕೆಯಾಗಿರುವ ‘ಮನಗಂಡ’ ಪದ ಹಳ್ಳಿಗಳಲ್ಲಿ ಹೀಗೆ ಬಳಕೆಯಾಗುತ್ತದೆ : ಹೆಚ್ಚು ಜನ ಸೇರಿರುವಲ್ಲಿ “ಮನಗಂಡ ಮಂದಿ ಕೂಡ್ಯಾರ” ಎಂಬಂತೆ, ಬಹಳಷ್ಟು ರೀತಿಯ ಅಡುಗೆ ಮಾಡಿದ್ದು ಕಂಡು “ಮನಗಂಡ ಮಾಡೀರಿ ಬಿಡ್ರಿs” ಎಂಬಂತೆ ಪದ ಬಳಕೆಯಲ್ಲಿದೆ. ಈ ಕವಿತೆಯಲ್ಲಿ ಒಂದೆಡೆ “ಪ್ರೀತಿಯಂತಹ ವಸ್ತು ಮನಗಂಡ ಮಾತು” ಎಂಬಲ್ಲಿ ಅದರ ಆಗಾಧದತೆಯನ್ನು ಸಾರಿದರೆ ಮತ್ತೊಂದೆಡೆ ಮನಸ್ಸಿಗೆ ತಿಳಿದ, ಅರಿವಾದ, ಒಪ್ಪಿದ ಮಾತು ಎಂಬುದನ್ನು ಧ್ವನಿಸುತ್ತದೆ. ಹೀಗೆ ಜನಪದರಿಂದ ಎತ್ತಿಕೊಂಡ ಈ ಪದವು ಮಧುರಚೆನ್ನರ ಕಾವ್ಯಶಕ್ತಿಗೆ ದೇಸೀಯ ಗಟ್ಟಿತನವನ್ನು ನೀಡಿದೆ.
       ಮಧುರಚೆನ್ನರ ಕವಿತೆಗಳಲ್ಲಿ ‘ದೇವತಾ ಪೃಥಿವೀ’ ಕವಿತೆಗೆ ವಿಶೇಷವಾದ ಸ್ಥಾನವಿದೆ. ಬೇಂದ್ರೆಯವರು ಮಧುರಚೆನ್ನರ ‘ಕೃತಿಸತಿಯ ಶಿರೋರತ್ನ’ ಎಂದು ಈ ಕವಿತೆಯನ್ನು ಕರೆದಿದ್ದಾರೆ. ಕನ್ನಡದ ಶ್ರೇಷ್ಟ ಅನುಭಾವ ಗೀತೆಯಾಗಿ ಕಾಣಿಸಿಕೊಂಡಿರುವ ಈ ಕವಿತೆ ತನ್ನೊಡಲೊಳಗೆ ಜನಪದ ಬಂಧ, ಭಾಷೆಯನ್ನೇ ಒಳಗೊಂಡಿದೆ. ಮಧುರಚೆನ್ನರ ‘ದೇವತಾ ಪೃಥಿವೀ’ ಮತ್ತು ‘ನನ್ನನಲ್ಲ’ ಕವಿತೆಗಳು ಸಮಕಾಲೀನ ಪ್ರe್ಞÉ ಮತ್ತು ಜನಪದ ಪ್ರe್ಞÉಗಳ ಸುಂದರ ಸಮನ್ವಯಕ್ಕೆ ಅತ್ಯುತ್ತಮ ನಿದರ್ಶನಗಳಾಗಿವೆ. ‘ದೇವತಾ ಪೃಥಿವೀ’ ಮತ್ತು ‘ನನ್ನನಲ್ಲ’ ಇಂಥ ಕವಿತೆಗಳನ್ನು ಮಧುರಚೆನ್ನರನ್ನು ಬಿಟ್ಟರೆ ಬೇರೆ ಯಾರೂ ಬರೆಯುವುದು ಸಾಧ್ಯವಿಲ್ಲ ಎಂದಿದ್ದಾರೆ ಕೀರ್ತಿನಾಥ ಕುರ್ತಕೋಟಿ ಅವರು.
ಕನಸು ಬಿತ್ತು ಬಾಲೆಗೆ
ಮನಸಿಗೊಂದು ದೀವಿಗೆ
ಜಡೆಯ ಮುಡಿಯ ತಂದೆಯು
ನೋಡು ಮಗಳೆ ಎಂದನು
ಈ ಕವಿತೆಯ ಸರಳವಾದ ಭಾಷೆಯ ಹಿಂದೆ ಶತಮಾನಗಳ ಆಧ್ಯಾತ್ಮಿಕ ಸಾಧನೆಯ ಇತಿಹಾಸವಿದೆ. ಬಾಲೆಯ ಕನಸು ಮನಸ್ಸಿನ ದೀವಿಗೆಯಾಗಿ ಅದರ ಬೆಳಕಿನಲ್ಲಿ ಜಡೆಯ ಮುಡಿಯ ತಂದೆ ಕಾಣಿಸಿಕೊಂಡು ಅವಳೊಡನೆ ಮಾತನಾಡುವ ವಿದ್ಯಮಾನ ಅಸಾಮಾನ್ಯವಾದುದು. ಜನಪದ ಭಾಷೆ ಈ ವಿದ್ಯಮಾನವನ್ನು ಗ್ರಹಿಸಿ ಅದನ್ನು ಮೂಡಿಸುವ ಸೋಜಿಗ ಸರಳತೆಯ ಶಕ್ತಿಯಾಗಿದೆ.
ಮೊಲೆ ಹಾಲು ಸಾಕಮ್ಮ ಸವಿಲಾಲಿ ಬೇಕಮ್ಮಾ
ಮುದ್ದಾಡಿ ರಮಿಸಿ ಮೈದಡವ - ಏಳಮ್ಮಾ
ಮಲಗಿರುವ ತಾಯಿ ಪೃಥಿವೀ ||
....................................
ಚಂದರನ ಚೆಲುವೀಕಿ ಇಂದರನ ಹೋಲಿಕಿ
ಮೈ ಹಿಂಗ ನಿನ್ನ ಮನ ಹ್ಯಾಂಗ - ಏಳಮ್ಮಾ
ಮಲಗಿರುವ ತಾಯಿ ಪೃಥಿವೀ
      ಹೀಗೆ ಮಧುರಚೆನ್ನರು ಆಧ್ಯಾತ್ಮಿಕ ಅನುಭವವನ್ನು ತ್ರಿಪದಿಗಳ ಮೂಲಕ ಜಾನಪದ ಸತ್ವದಿಂದ ತುಂಬಿ ಕೊಡುತ್ತಾರೆ. ಇಲ್ಲಿ ಬಳಕೆಯಾಗಿರುವ ಪದಗಳೆಲ್ಲ ಜನಪದರ ನುಡಿಸಾಲುಗಳಿಂದ ಪಡೆದವುಗಳಾಗಿವೆ. ಹೊಟ್ಟೆಯ ಹಸಿವಿಗೆ “ಏನು ಉಳ್ಳೆ”, ‘ಉಂಡೆ’ ಪದಗಳು ಗ್ರಾಂಥಿಕ ರೂಪದಲ್ಲಿ ಏನು ಊಟ ಮಾಡಲಿ, ಊಟ ಮಾಡಿದೆ ರೀತಿಯಲ್ಲಿ ರೂಡಿsಯಲ್ಲಿವೆ. ಹಸಿವೆಯಾದರೆ ಮಗು ತಾಯಿಯ ಮೊಲೆ ಹಾಲು ಉಂಡರೆ, ಕಸಿವಿಸಿಗೆ ಏನು ಉಣ್ಣಲಿ ಎಂದು ಕೇಳುವುದು ಕವಿಯ ದೇಸೀ ಭಾವವನ್ನು ಸ್ಫುರಿಸುತ್ತದೆ. ಇಲ್ಲಿ ಬಳಸಿರುವ ಭಾಷೆಗೆ ವಿಶಿಷ್ಟ ಶಕ್ತಿ ಇದೆ.
ಗಲ್ಲ ಹಿಡಿಯುವ ಕೆಲರು ಗಲ್ಲ ಹಿಂಡುವ ಕೆಲರು
ಬೆಸನಿಸುವ ಕೆಲರು ಬೆದರಿಸುವ ಕೆಲರು
ಕಲ್ಲುಗೊಳ್ಳುವ ಕೆಲರು ಹಲ್ಲುಕಿಸಿಯುವ ಕೆಲರು
ಬಲ್ಲವರು ಬಲ್ಲಂತೆ ಬಣಗುತಿಹರು
ಜನರ ಮನಸ್ಸುಗಳು ಮತ್ತು ಕವಿಯ ಹುಡುಕಾಟದಲ್ಲಿ ಪ್ರಕಟವಾಗುವ ಮಧುರಚೆನ್ನರ ಕಾವ್ಯ ಧ್ವನಿಯನ್ನು ಇಲ್ಲಿ ಗಮನಿಸಿದಾಗ ಬಹುಮುಖಿ ಜನರ ಮಾರ್ಗದರ್ಶನ ಚಿತ್ರಣ ಅನುಭವಕ್ಕೆ ಸಾಧ್ಯವಾಗುತ್ತದೆ.
‘ಗಲ್ಲ ಹಿಡಿಯುವ, ಗಲ್ಲ ಹಿಂಡುವ’
ಬೆಸನಿಸುವ, ಬೆದರಿಸುವ
ಬೆರಗು ಬಡುವ, ಬೆರಳು ಮುರಿವ’
ಮಂದಿಯ ಚಿತ್ರಣವನ್ನು ತೋರುವಲ್ಲಿ ಜನರ ಮನೋಸ್ಥಿತಿ ಅರಿವಾಗುತ್ತದೆ. ಅವರವರು ಕಂಡಂತೆ ಕವಿಗೆ ಇಲ್ಲಿ ಅವರು ಕಾಣಿಸುವುದು ಒಟ್ಟು ಸಂದರ್ಭದ ಒಂದು ಮಿತಿಯಾದರೂ ಅವರಷ್ಟಕ್ಕೆ ಅದು ಪೂರ್ಣವಾದುದು. ಈ ಎಲ್ಲದರ ಹುಡುಕಾಟ ಕವಿಯನ್ನು ಪ್ರಕೃತಿಯತ್ತ, ಪ್ರಕೃತಿಯ ಸಹಪಾಠಿಗಳತ್ತ ವಾಲಿಸುತ್ತದೆ. ಹೀಗಾಗಿ ದೇವರನ್ನು ಕಾಣುವ ಪರಿಯಲ್ಲಿ ನವಿಲು, ಮೀನು, ಹೊನ್ನಿ, ಕೋಗಿಲೆ, ಗಿಳಿ ಮತ್ತು ಟೀಂವಕ್ಕಿಯನ್ನು ಮಾತನಾಡಿಸುತ್ತಾರೆ. ಹಲಸಂಗಿ ಪರಿಸರಕ್ಕೆ ಮೆರಗು ತಂದ ನವಿಲುಗಳು ಮಧುರಚೆನ್ನರ ಕಾವ್ಯ ಚೇತನಕ್ಕೆ ಜೀವ ಚೇತನಗಳಾಗಿವೆ.
ನಿಲ್ಲು ನಿಲ್ಲಲೆ ನವಿಲೆ ನಿನ್ನ ಕಣ್ಣಗಳೇಸು
ಕಣ್ಣಬಣ್ಣಗಳೇಸು ಎಣಿಸಲಾರೆ
ಎಲ್ಲ ರೂಪಿಸಿದವನು ಎಲ್ಲಿ ತಾನಡಗಿದನೆ
ತಾಳಲಾರದು ಜೀವ ಹೇಳಬಾರೆ
‘ಎಲ್ಲ ರೂಪಿಸಿದವನು’ ಎಲ್ಲಿರುವನೆಂದು ಪ್ರಶ್ನಿಸುವ ಮಧುರಚೆನ್ನರು ಅಕ್ಕಮಹಾದೇವಿ ತನ್ನ ವಚನದಲ್ಲಿ ಚೆನ್ನಮಲ್ಲಿಕಾರ್ಜುನನ್ನು ಕಾಣುವ ರೀತಿಯಂತಿದೆ. ಅಳಿಸಂಕುಲ, ಮಾಮರ, ಬೆಳದಿಂಗಳು, ಕೋಗಿಲೆ, ಗಿಳಿ, ತುಂಬಿ, ಹಂಸೆ... ಈ ಎಲ್ಲರನ್ನು, ಎಲ್ಲವನ್ನು ಮಾತನಾಡಿಸುವಂತೆ ಇಲ್ಲೂ ಮಧುರಚೆನ್ನರು ಮಾತನಾಡಿಸಿದ್ದಾರೆ.
         ಜನಪದ ಹಾಡಿಗೆ ತುದಿ ಮೊದಲಲ್ಲಿ, ಅದು ಪರಂಪರೆಯಿಂದ ಉಳಿದು ಬೆಳೆದುಕೊಂಡು ಬಂದುದು. ಆಕಾಶದ ಅನಂತತೆ, ಭೂಮಿಯ ವ್ಯಾಪಕತೆ ಅದಕ್ಕಿದೆ. ಅದು ಮುಗಿಯದ ನಿಲ್ಲದ ಹಾಡಲ್ಲ, ಮಧುರಚೆನ್ನರು ಹೇಳುವ ಹಾಗೆ,
ಅನ್ನಬಹುದೇನಯ್ಯ ಹಾಡು ಮುಗಿಯಿತ್ತೆಂದು
ಜನ್ಮದಾಕಾಶದಲ್ಲಿದರ ಬೇರು.
‘ಕನ್ನಡಿಯೊಳೆಷ್ಟು ಹಿಡಿಸೀತು ಕನಕಾಚಲವು
ಕೊಡಕೆ ಹಿಡಿಸೀತೆಷ್ಟು ಕಡಲ ನೀರು’
ಕಡಲ ನೀರಂತೆ ಯಾವ ಕಟ್ಟಿಗೂ ಒಳಪಡದ ಹಾಡು ಅದು ನಿರಂತರ. ಅದರ ಬೇರುಗಳು ಅನಂತ. ಈ ವಿಶ್ವವ್ಯಾಪಿ ಕಲ್ಪನೆಯು ಅದ್ಭುತವಾದುದು. ಇದು ಜನಪದದ ಅನಂತತೆಯ ರೂಪವಾಗಿದೆ. ನವೋದಯ ಕಾವ್ಯದ ಶೈಶವದಲ್ಲಿ ಬೇಂದ್ರೆ, ಕುವೆಂಪು, ಪುತಿನ, ಮುಂತಾದವರ ಕಾವ್ಯದ ಹಾದಿಯು ಇನ್ನೂ ನಿಚ್ಚಳವಾಗಿರದಿದ್ದ ಕಾಲದಲ್ಲಿ ‘ಮಧುರಗೀತ’, ‘ನನ್ನ ನಲ್ಲ’ ಗೀತೆಗಳನ್ನು ರಚಿಸಿ ಮುಗಿಸಿದ ಕವಿಯ ಪ್ರತಿಭೆ ಅದ್ಭುತವಾದುದು. ‘ಗರತಿಯ ಹಾಡು’, ‘ಮಲ್ಲಿಗೆ ದಂಡೆ’, ‘ಜೀವನ ಜೋಕಾಲಿ’ಯಂತಹ ಜಾನಪದೀಯ ಕೃತಿಗಳ ಸಂಗ್ರಹ, ಸಂಪಾದನೆ, ಮಾರ್ಗದರ್ಶನಗಳಲ್ಲಿ ಕೆಲಸ ಮಾಡಿದ ಮಧುರಚೆನ್ನರಿಗೆ ಬೇಂದ್ರೆಯವರಿಗಿಂತ ಹೆಚ್ಚು ಜಾನಪದದ ನಿಕಟ ಪರಿಚಯವಿತ್ತು. ಎಚ್.ಎಸ್. ರಾಘವೇಂದ್ರರಾವ್ ಅವರು ಗುರುತಿಸುವಂತೆ : “ಉತ್ತರ ಕರ್ನಾಟಕದ ಹೊಸಗನ್ನಡ ಕಾವ್ಯ ಪರಂಪರೆಯಲ್ಲಿ ಬೇಂದ್ರೆಯವರನ್ನು ಹೊರತು ಪಡಿಸಿದರೆ, ಸಾರ್ವತ್ರಿಕ ಮನ್ನಣೆಯನ್ನು ಪಡೆದ ಕವಿ ಮಧುರಚೆನ್ನರೊಬ್ಬರೇ. ನಿಡುಗಾಲ ಬದುಕಿ, ಸಾಕಷ್ಟು ಕಾವ್ಯರಚನೆ ಮಾಡಿದರೂ ವಿನಾಯಕ, ರಸಿಕರಂಗ, ಆನಂದಕಂದ ಮುಂತಾದವರ ಕಾವ್ಯವು ಹಲವು ಬಗೆಯ ಪ್ರತಿರೋಧವನ್ನು ಎದುರಿಸಿತು..... ಕವಿತೆಯು ಹೃದಯವನ್ನು ತಲುಪುವ ಎರಡು ದಾರಿಗಳಾದ ಕಣ್ಣು, ಕಿವಿಗಳಿಗೆ ಪ್ರಿಯವೆನ್ನಿಸುವ ಪ್ರತಿಭೆಯನ್ನು ರೂಡಿsಸಿಕೊಂಡಿದ್ದರಲ್ಲಿ ಅವರು ಕನ್ನಡದ ಶ್ರವಣ ಕವಿಯೂ ಹೌದು. ಚಾಕ್ಷುಷ ಕವಿಯೂ ಹೌದು” ಹೀಗೆ ಮಧುರಚೆನ್ನರು ತಮ್ಮ ಏಕೈಕ ಕಾವ್ಯ ಸಂಕಲನ ಮೂಲಕ ಕನ್ನಡ ನವೋದಯ ಕಾವ್ಯದ ಆದ್ಯರೆನಿಸಿದ್ದಾರೆ.
                                                        -ಡಾ.ಪ್ರಕಾಶ ಗ.ಖಾಡೆ

ವಿಳಾಸ : ಡಾ.ಪ್ರಕಾಶ ಗ.ಖಾಡೆ, ‘ಶ್ರೀ ಗುರು’ ,ಸರಸ್ವತಿ ಬಡಾವಣೆ, ಸೆಕ್ಟರ್ ನಂ.63 ,ನವನಗರ, ಬಾಗಲಕೋಟ
       ಮೊ. 984550089



No comments:

Post a Comment

Shivaratri -Dr.Prakash Khade

 ಶಿವರಾತ್ರಿ ವಿಶೇಷ ಲೇಖನ   : ಜನಪದರ ಹಾಡುಗಳಲ್ಲಿ ಶಿವರಾತ್ರಿ :  -ಡಾ.ಪ್ರಕಾಶ ಗ. ಖಾಡೆ,    ಬಾಗಲಕೋಟ ಮೊ. 9845500890    ಭಾರತೀಯ ಸಂಸ್ಕøತಿಯ ಬೇರುಗಳು ನಮ್ಮ ಜನಪದರ...