Saturday, January 15, 2022

ಚಂಪಾ ಎಂಬ ಶಾಲ್ಮಲೆ ಡಾ.ಪ್ರಕಾಶ ಗ.ಖಾಡೆ

 




ಚಂಪಾ ಎಂಬ ಶಾಲ್ಮಲೆ

ಡಾ.ಪ್ರಕಾಶ ಗ.ಖಾಡೆ




ಉಳಿದ ನದಿಗಳ ಹಾಗೆ ನೀನಲ್ಲ ಶಾಲ್ಮಲೆ

ನಿನ್ನ ಕಂಡವರಿಲ್ಲ ನಿನ್ನೊಳಗೆ ಮೈಯ ತೊಳಕೊಂಡವರಿಲ್ಲ

ನಿನ್ನ ಉಂಡವರಿಲ್ಲ ನಿನ್ನೊಳಗೆ ಕಳಕೊಂಡವರಿಲ್ಲ 

ಉಗಮವೆಲ್ಲೋ ನಿನ್ನದು ನಿನ್ನ ಸಂಗಮವೆಲ್ಲೋ

ನೀನು ಹರಿಯುತ್ತಿರುವುದು ಮಾತ್ರ ಒಂದೇ ಖರೆ.

ಬಹುಶಃ 

ನಾನು ಬದುಕಬೇಕೆಂದಿರುವ ಬದುಕಿನಂತೆ

ನಾನು ಬರೆಯಬೇಕೆಂದಿರುವ ಕಾವ್ಯದಂತೆ.

ಚಂಪಾ (1990)




     ಹೌದು ಚಂಪಾ ಶಾಲ್ಮಲೆಯಂತೆ ಬದುಕಿದರು ಮತ್ತು ಶಾಲ್ಮಲೆಯಂತೆ ನಮ್ಮೊಡನೆ ಸದಾ ಇರುತ್ತಾರೆ. ಚಂಪಾ ಅವರದು ಆಕರ್ಷಕ ವ್ಯಕ್ತಿತ್ವ. ಅವರ ಮಾತು ಉತ್ತರ ಕರ್ನಾಟಕದ ಜವಾರಿ ಭಾಷೆ. ತಾನು ಇಂಗ್ಲಿಷ ಪ್ರಾಧ್ಯಾಪಕರಾದರೂ, ವಿದೇಶಕ್ಕೆ ಹೋಗಿ ಇಂಗ್ಲಿಷ ಸಾಹಿತ್ಯ ಓದಿಕೊಂಡು ಬಂದರೂ ಅವರು ಈ ನೆಲದ ಶಕ್ತಿ, ಸೌಂದರ್ಯವನ್ನು ತಮ್ಮ ಮಾತು ಮತ್ತು ಕೃತಿಗಳಲ್ಲಿ ಸಾಧಿಸಿಕೊಂಡು ಬಂದರು. ಅವರಲ್ಲಿ ಸದಾ ಹೊಸತನವನ್ನು ಶೋಧಿಸುವ ಮತ್ತು ಹೊಸತನವನ್ನು ಸೃಷ್ಟಿಸುವ ಅಪಾರ ಸೃಜನಶೀಲತೆ ಇತ್ತು. ಬರವಣಿಗೆಯಲ್ಲಿ ಅವರು ಯಾವ ಮಡಿವಂತಿಕೆಯನ್ನೂ ಇಟ್ಟುಕೊಳ್ಳಲಿಲ್ಲ. ನೇರವಾಗಿ ,ನಿಷ್ಟುರವಾಗಿ ಬರೆಯುತ್ತಿದ್ದರು ಮತ್ತು ಹಾಗೇನೆ ಬದುಕಿದ್ದರು. ಚಂಪಾ ಅವರ ಬರವಣಿಗೆ ಕುತೂಹಲದಿಂದ ಓದಿಸಿಕೊಂಡು ಹೋಗುವಂಥದು. ವ್ಯಂಗ್ಯ ವಿಡಂಬಣೆ ಮೂಲಕ ಕನ್ನಡ ಸಾಹಿತ್ಯಕ್ಕೆ ಹೊಸ ಭಾಷೆಯನ್ನು ಕೊಟ್ಟರು. ಸಮಕಾಲೀನ ಬದುಕು, ಸಿದ್ದಾಂತ, ಸಾಹಿತಿಗಳು ಮತ್ತು ರಾಜಕಾರಣಿಗಳು ಅವರ ಎಡಬಿಡಂಗಿತನ ಕುರಿತು ಬರೆಯುವಾಗ ಅವರ ಭಾಷೆಯ ವ್ಯಂಗ್ಯದ ಕಸುವು ಯಾರೂ ಅರ್ಥಮಾಡಿಕೊಳ್ಳುವಂಥದು. ತಿಳಿಹಾಸ್ಯ ಬೆರೆತ ಧಾರವಾಡ ಪ್ರಾದೇಶಿಕ ಸೊಗಡು ಅವರ ಬರವಣಿಗೆಯ ಜೀವದ್ರವ್ಯವಾಗಿದೆ. ಕನ್ನಡದಲ್ಲಿ ಕಾರ್ನಾಡ, ಕಂಬಾರ, ಲಂಕೇಶರಂತೆ ಚಂಪಾ ತಮ್ಮ ನಾಟಕಗಳ ಮೂಲಕ ಕನ್ನಡಕ್ಕೆ ಹೊಸತನ ತಂದರು. ಚಂಪಾ ಅವರ ನಾಟಕಗಳ ಕಥಾ ವಸ್ತುಗಳು ತಮ್ಮನ್ನು ತಾವು ತೆರೆದುಕೊಳ್ಳಹೋಗುವುದಿಲ್ಲ, ವಾಚ್ಯವೆನಿಸುವುದಿಲ್ಲ, ಒಂದರ್ಥದಲ್ಲಿ ಅಸಂಗತವೂ ಅಲ್ಲ, ನಿಗೂಢ ನೆಲೆಯ ಅರ್ಥವನ್ನು ಹೊತ್ತುಕೊಂಡು ಅಷ್ಟೇ ಗಾಢವಾಗಿ ಪ್ರೇಕ್ಷಕರನ್ನು ಕಾಡುವ ವಸ್ತುಗಳುಳ್ಳ ನಾಟಕಗಳಾಗಿವೆ. ಚಂಪಾ ಅವರ ಕೊಡೆಗಳು, ಟಿಂಗರ ಬುಡ್ಡಣ್ಣ ನಾಟಕಗಳು ಯಾವ ಕಾಲಕ್ಕೂ ಸಲ್ಲುವಂಥವು. 

        ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಅವರು ಹೊರತರುತ್ತಿದ್ದ ಸಂಕ್ರಮಣ ಪತ್ರಿಕೆಯು ಒಂದು ರೀತಿಯಲ್ಲಿ ಸಾಹಿತಿಗಳ ತವರು ಮನೆಯಂತೆ ಇತ್ತು, ಇವತ್ತು ಖ್ಯಾತ ನಾಮರೆಲ್ಲಾ ತಮ್ಮ ಮೊದಲ ಬರಹಗಳನ್ನು ಪ್ರಕಟಿಸಿದ್ದು ಸಂಕ್ರಮಣವೇ. ಸಂಕ್ರಮಣದ ಮೂಲಕ ಒಂದು ಸಾಹಿತ್ಯ ಪತ್ರಿಕೆಯನ್ನಷ್ಟೇ ನಡೆಸಲಿಲ್ಲ, ಅವರು ಒಂದು ಸಾಹಿತ್ಯ ಪಡೆಯನ್ನೇ ಕಟ್ಟಿದರು. ಧಾರವಾಡ ವಿಶ್ವವಿದ್ಯಾಲಯವನ್ನು ಒಂದು ಪ್ರಖರ ಚಿಂತನೆಯ ನೆಲೆಯಾಗಿ ರೂಪಿಸಿದರು, ಸಾಹಿತ್ಯ ಜನಸಾಮಾನ್ಯರಿಗಾಗಿ ಮಿಡಿಯಬೇಕೆಂದು ಅವರು ಬಯಸಿದರು. ಬಂಡಾಯ ಸಾಹಿತ್ಯ ಸಂಘಟನೆಗೆ ಚಾಲನೆ ನೀಡಿ ಕನ್ನಡ ಸಾಹಿತ್ಯದ ಮಗ್ಗಲು ಬದಲಿಸಿದರು.ಹೊಸಗನ್ನಡ ನವ್ಯದ ನಂತರ ಬಂಡಾಯ ಸಾಹಿತ್ಯ ಚಳುವಳಿಯ ಸಂಘಟಕರಾಗಿ ,ನೇತಾರರಾಗಿ ಸಾಹಿತ್ಯಿಕ, ಸಾಂಸ್ಕøತಿಕ ಲೋಕಕ್ಕೆ ಹೊಸ ಆಯಾಮ ತಂದು ಕೊಟ್ಟರು.  ಒಂದೆಡೆ ಬರಗೂರ ರಾಮಚಂದ್ರಪ್ಪನವರು, ಇನ್ನೊಂದೆಡೆ ಚೆನ್ನಣ್ಣ ವಾಲೀಕಾರ ಅವರು ಬಂಡಾಯ ಸಂಘಟಣೆಗೆ ಹೆಗಲಾಗಿದ್ದರೆ ಚಂದ್ರಶೇಖರ ಪಾಟೀಲರು ನಮ್ಮ ಉತ್ತರ ಕರ್ನಾಟಕದ ಲೇಖಕರಿಗೆ ಒಂದು ಮಾದರಿಯಾಗಿದ್ದರು. ರಾಜಕಾರಣಿಯ ಕಪಟತನವನ್ನು, ಸ್ವಾಮಿಜಿಗಳ ಲಂಪಟತನವನ್ನು ಅವರೆಂದೂ ಸಹಿಸಲಿಲ್ಲ. ತಮ್ಮ ಹೋರಾಟಗಳ ಮೂಲಕ ಕಳೆದ ಶತಮಾನದ ಕೊನೆಯ ದಶಕಗಳಲ್ಲಿ ಅವರು ಹುಟ್ಟು ಹಾಕಿದ ವೈಚಾರಿಕ ಕ್ರಾಂತಿ , ಕರ್ನಾಟಕವನ್ನು ವೈಚಾರಿಕ ಕರ್ನಾಟಕವಾಗಿ ಕಟ್ಟುವಲ್ಲಿ ನೆರವಾದವು. ಸಾಹಿತ್ಯಕ್ಕಷ್ಟೇ ಅವರ ಹೋರಾಟಗಳು ಸೀಮಿತವಾಗಿರಲಿಲ್ಲ ಕನ್ನಡ ನಾಡು ನುಡಿ, ನೆಲ ಜಲ, ,ಸಮಾಜ, ಧರ್ಮ, ಶಿಕ್ಷಣ, ರಾಜಕೀಯ, ಭಾಷೆ ಯಾವುದೇ ಇರಲಿ ಎಲ್ಲದಲ್ಲಿಯೂ ಅನ್ಯಾಯ, ಪಕ್ಷಪಾತ, ಶೋಷಣೆ ಕಂಡರೆ ತೀವ್ರವಾಗಿ ಹೋರಾಟಕ್ಕೆ ಅಣಿಯಾಗುತ್ತಿದ್ದರು, ಅವರ ಹೋರಾಟಕ್ಕೆ ಒಂದು ಶಕ್ತಿಯಿತ್ತು. ಗೋಕಾಕ ಚಳುವಳಿ ಸಂದರ್ಭದ ಹೋರಾಟ, ‘ಕನ್ನಡ ಕನ್ನಡ ಬರಿ ನನ್ನ ಸಂಗಡ’ ಎನ್ನುತ್ತಲೆ ಮಾತೃಭಾಷೆಯ ಆದ್ಯತೆಗಾಗಿ ಉಸಿರಿರುವವರೆಗೂ ದುಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾಗಿ ಪ್ರಭುತ್ವದ ಹಿಡಿತವನ್ನು ಬಿಡಿಸಿಕೊಂಡು ಅವರು ನಡೆಸಿಕೊಟ್ಟ ಶಿವಮೊಗ್ಗ ಮೊದಲಾದ ಸಮ್ಮೇಳನಗಳು ಒಂದು ಮಾದರಿಯಾಗಿದ್ದವು. ಪ್ರೊ.ಚಂಪಾ ಅವರು  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗಲೂ ಯಾರ ಭಿಡೆ ಮುರುವತ್ತುಗಳನ್ನಿಟ್ಟುಕೊಳ್ಳದೇ ಕನ್ನಡವನ್ನು ಆಡಳಿತ ಭಾಷೆಯಾಗಿ ಗಟ್ಟಿಗೊಳಿಸಿದರು.  ‘ಕನ್ನಡ ಬೇಡದವರು, ಕನ್ನಡಿಗರಿಗೂ ಬೇಡ’ ಎಂದು ಸಾರಿದರು. ಧಾರವಾಡದ ಮಣ್ಣು ಬೇಂದ್ರೆ, ಪಾಪು, ಕಣವಿ ಅವರನ್ನು ನಾಡಿಗೆ ನೀಡಿದಂತೆ ಚಿರಕಾಲ ನೆನಪಿನಲ್ಲಿ ಉಳಿಯುವಂತೆ ಚಂಪಾ ಧಾರವಾಡದ ಹೆಸರಿನಲ್ಲಿ ಹೆಸರಾದರು.

- ಡಾ.ಪ್ರಕಾಶ ಗ.ಖಾಡೆ, ಬಾಗಲಕೋಟೆ

ಮೊ.9845500890

  


ಸಮಾಜಮುಖಿ ಆಶಯ ಮತ್ತು ಸಾಹಿತ್ಯದ ಸಾರ್ಥಕತೆ: ಡಾ.ಪ್ರಕಾಶ ಗ.ಖಾಡೆ


ಸಮಾಜಮುಖಿ ಆಶಯ ಮತ್ತು ಸಾಹಿತ್ಯದ ಸಾರ್ಥಕತೆ

ಡಾ.ಪ್ರಕಾಶ ಗ.ಖಾಡೆ

           ಸಾಹಿತ್ಯ ಸಮಾಜದ ಮೇಲೆ ಪ್ರಭಾವ ಬೀರಿ ಸಾಮಾಜಿಕ ಬದಲಾವಣೆಗೆ ಪ್ರೇರಕಶಕ್ತಿಯಾಗಿದೆ. ನಿತ್ಯ ಪರಿವರ್ತನಾ ಶೀಲವಾದ ಸಮಾಜವು ವ್ಯಕ್ತಿಗಳ ಪರಸ್ಪರ ಸಂಬಂಧಗಳ ಕೊಂಡಿಯಾಗಿದೆ. ವ್ಯಕ್ತಿಗಳ ಸಂಬಂಧಗಳು ವಿವಿಧ ರೀತಿಯಲ್ಲಿ ಬದಲಾವಣೆಗಳನ್ನು ಹೊಂದುತ್ತವೆ. ಸಾಮಾಜಿಕ ಬದಲಾವಣೆ ಎಂದರೆ ಸಾಮಾಜಿಕ ಸಂಬಂಧಗಳಲ್ಲಿ ಆಗುವ ಬದಲಾವಣೆ ಎಂಬುದಾಗಿದೆ. ಈ ಬದಲಾವಣೆಗಳು ಸರ್ವವ್ಯಾಪಕವಾದುದರಿಂದ ನಾವು ಸಮಾಜವನ್ನು ನಿತ್ಯ ಪರಿವರ್ತನಾಶೀಲವೆಂದು ಕರೆಯುತ್ತೇವೆ.

ಸಾಹಿತ್ಯ ಒಂದರ್ಥದಲ್ಲಿ ಜನಜೀವನದ ಪ್ರತಿಬಿಂಬ ಎಂಬ ಮಾತಿದೆ. ಒಬ್ಬ ಅಥವಾ ಹಲವರ ಸೃಜನಶೀಲವಾದ ಮನಸ್ಸಿನ ಅಭಿವ್ಯಕ್ತಿ ಸಾಹಿತ್ಯವಾಗಿ ಅದು ಸಹೃದಯದಲ್ಲಿ ವ್ಯಾಪಕವಾಗುತ್ತದೆ. ಸಾಹಿತ್ಯದ ಉದ್ದೇಶ ವಿಶಾಲವಾದುದು, ವ್ಯಾಪಕವಾದುದು ಆಗಿದೆ. ಸಾಹಿತ್ಯ ಸಾಮಾಜಿಕ ಬದುಕನ್ನು ಆಧರಿಸಿ ಹುಟ್ಟುವ ಸೃಜನಶೀಲ ಕ್ರಿಯೆಯಾಗಿದೆ. ಸಾಹಿತ್ಯ ಬಾಳಿನ ಸಮಂಜಸ ಚಿತ್ರಣ ಅರ್ಥಪೂರ್ಣದರ್ಶನ, ಚಿರಂತನ ಮೌಲ್ಯಗಳ ನಿರೂಪಣೆಯನ್ನು ಒಳಗೊಂಡಿರುತ್ತದೆ.



ಸಾಹಿತ್ಯ ಮತ್ತು ಸಾಮಾಜಿಕ ಬದಲಾವಣೆಗೆ ಎರಡು ಮುಖಗಳುಂಟು. ಸಾಹಿತ್ಯ ಸಮಾಜದ ಮೇಲೆ ಪ್ರಭಾವ ಬೀರಿ ಸಾಮಾಜಿಕ ಬದಲಾವಣೆಗೆ ಒಂದು ಪ್ರೇರಕ ಶಕ್ತಿಯಾಗಿ ಪರಿಣಮಿಸುತ್ತದೆ ಎನ್ನುವುದು ಒಂದು. ಧಾರ್ಮಿಕ ರಾಜಕೀಯ ಮುಂತಾದ ಕಾರಣಗಳಿಂದ ನಡೆಯುವ ಸಾಮಾಜಿಕ ಪರಿವರ್ತನೆ ಆ ಕಾಲದ ಸಾಹಿತ್ಯ ಕೃತಿಗಳಲ್ಲಿ ಪ್ರತಿಬಿಂಬಿತವಾಗಿರುತ್ತದೆ ಎನ್ನುವದು ಇನ್ನೊಂದು. ಈ ದಿಸೆಯಲ್ಲಿ ಸಾಹಿತ್ಯದ ದೃಷ್ಟಿ ವಿಶಾಲವಾಗುತ್ತದೆ. ಅದು ಸಮಾಜದ ಕೈಗನ್ನಡಿ ಎಂಬ ಮಾತಿಗೆ ಪುಷ್ಟಿ ಕೊಡುತ್ತದೆ. ಕಾಲ ಕಾಲಕ್ಕೆ ಬದಲಾಗುವ ಮೌಲ್ಯಗಳು ಸಾಹಿತ್ಯದ ಸಂದರ್ಭದಲ್ಲಿಯೂ ಬದಲಾವಣೆ ಕಾಣುವಂತಾಗುತ್ತವೆ. ಹತ್ತನೆಯ ಶತಮಾನದ ವೀರಯುಗ, ಹನ್ನೆರಡನೆಯ ಶತಮಾನದ ಭಕ್ತಿಯುಗ, ಇಪ್ಪತ್ತನೆಯ ಶತಮಾನದ ವೈಜ್ಞಾನಿಕ ಯುಗ ಎಂದಾಗ ಆಯಾ ಕಾಲದ ಪ್ರಮುಖವಾದ ಜನಮನೋಧರ್ಮವನ್ನು ಸೂಚಿಸುತ್ತದೆ. ಸಾಮಾಜಿಕ ಬದಲಾವಣೆಗಳಿಂದ ಆಯಾ ಕಾಲದಲ್ಲಿ ವ್ಯೆಚಾರಿಕ ಕ್ರಾಂತಿಯಾಗಿರುತ್ತದೆ. ಅದರ ಪರಿಣಾಮವಾಗಿ ಹೊಸ ಮೌಲ್ಯಗಳು ಕಾಣಿಸಿಕೊಳ್ಳುತ್ತವೆ. ಸಾಹಿತ್ಯವು ಇದೆಲ್ಲವನ್ನು ಅಂದಂದಿನ ಸಂದರ್ಭವನ್ನು ದಾಖಲಿಸುತ್ತ ಬರುತ್ತದೆ.

ಸಾಹಿತ್ಯ ಸಮಾಜದ ಕೈ ಗನ್ನಡಿ ಎಂಬ ಮಾತು ಹೆಚ್ಚು ಬಳಕೆಯಲ್ಲಿರುವಲ್ಲಿ ಸಾಹಿತಿಯ ಪಾತ್ರ ವಿಶಿಷ್ಟತೆಯನ್ನು ಇದು ಸಾರುತ್ತದೆ. ಸಾಮಾಜಿಕ ವ್ಯವಸ್ಥೆಯ ಬದ್ರತೆಯನ್ನು ಕಾಪಾಡಿಕೊಂಡು ಬಂದವರೆ ಕವಿಗಳು. ಕವಿ ಸಾಮಾಜಿಕ ಸದಸ್ಯನಾಗುವುದರ ಜೊತೆಗೆ ಸಮಾಜದ ಕಣ್ಣು ಕಿವಿಯೂ ಆಗಿರುವುದರಿಂದ ಅವನು ಇತರ ಸಾಮಾಜಿಕರಿಗಿಂತ ಹೆಚ್ಚಿನ ಹೊಣೆಗಾರಿಕೆಯುಳ್ಳವನಾಗಿರುತ್ತಾನೆ. ಅವನು ಮಾಡಿದ್ದನ್ನು ಬರೆದುದ್ದನ್ನು ಮೊದಲು ಗುಮಾನಿಯಿಂದ ಅನಂತರ ಒಪ್ಪಿಗೆಯಾದಲ್ಲಿ ಮೆಚ್ಚುಗೆಯಿಂದ ನೋಡುವ ಸಮಾಜ ಅವನ ಬೇಕು ಬೇಡುಗಳನ್ನು ತನ್ನ ಬೇಕು ಬೇಡಗಳನ್ನಾಗಿ ಒಪ್ಪಿಕೊಳ್ಳುವ ಸಾಧ್ಯತೆಯೂ ಉಂಟು. ಹಾಗಾಗಿ ’ಕವಿಗಳು ವಿಶ್ವದ ಅನಧಿಕೃತ ಶಾಸನಕರ್ತರು’ ಎಂಬ ಉಕ್ತಿ ಪ್ರಸಿದ್ದವಾಗಿದೆ. ಸಾಹಿತ್ಯ ಸಮಾಜದೊಂದಿಗೆ ಸಂಬಂಧಿಕರಿಸಿ ಕೊಂಡಿರುತ್ತದೆ. ಸಾಹಿತ್ಯ ಒಂದು ಕಾಲದ ಒಂದು ದೇಶದ ಒಂದು ಭಾಷೆಯ ರಾಜಕೀಯ, ಸಾಮಾಜಿಕ, ಧಾರ್ಮಿಕ ಮತ್ತು ಸಂಸ್ಕೃತಿ ಜೀವನದ ಕೈಗನ್ನಡಿಯಾಗುವದು ಈ ಅರ್ಥದಲ್ಲಿಯೆ.


ಪರಿಣಾಮ ಮತ್ತು ಪ್ರಭಾವ
ಜಗತ್ತಿನ ಸಾಮಾಜಿಕ ಬದಲಾವಣೆಯಲ್ಲಿ ಸಾಹಿತ್ಯ ಮೂಡಿಸಿದ ಪರಿಣಾಮ, ಬೀರಿದ ಪ್ರಭಾವ ತುಂಬಾ ಮಹತ್ವದ್ದಾಗಿದೆ. ರಾಷ್ಟ್ರ ಕಟ್ಟುವಲ್ಲಿ ತಮ್ಮನ್ನು ತೇದುಕೊಂಡು ಮುಂದಾಳುಗಳಿಗೆ ಸಾಹಿತ್ಯ ದಾರಿ ಹಾಕಿಕೊಟ್ಟಿತು. ಜಗತ್ತಿನ ಬದಲಾವಣೆಯ ಮೇಲೆ ಅತ್ಯಂತ ಪ್ರಭಾವ ಬೀರಿದ ಮಾರ್ಕ್ಸ ಸ್ವತಃ ೧೯ನೇ ಶತಮಾನದ ಫ್ರೆಂಚ್ ಕಾದಂಬರಿಕಾರರಿಂದ ಸ್ಪೂರ್ತಿ ಪಡೆದಿದ್ದಾರೆ. ಲೆನಿನ್ ಲಿಯೊ ಟಾಲಸ್ಟಾಯರನ್ನು ತಮ್ಮ ಗುರು ಎಂದು ತಿಳಿದುಕೊಂಡಿದ್ದರು. ಲೆನಿನ್ನರು ತಮ್ಮ ಎಷ್ಟೋ ಕೃತಿಗಳಲ್ಲಿ ಮ್ಯಾಕ್ಸಂಗಾರ್ಕಿಯ ಉಕ್ತಿಗಳನ್ನು ಬಳಸಿಕೊಂಡಿದ್ದಾರೆ. ಹೂ-ಚಿ-ಮಿನ್, ಮಾವೋ ಸ್ವತಃ ಕವಿಗಳು. ರವೀಂದ್ರರು ಹೋರಾಟಗಳಲ್ಲಿ ಭಾಗವಹಿಸಿ ಜನರನ್ನು ಸಾಮ್ರಾಜ್ಯಶಾಹಿಯ ವಿರುದ್ದ ಹೋರಾಡಲು ಹಚ್ಚಿದರು. ಖಾಜಿ ನಜರೂಲರ ಅಗ್ನಿವೀಣಾ ಬಂಗಾಲಿಗಳ ಮೇಲೆ ಗಾಢ ಪರಿಣಾಮ ಬೀರಿದೆ. ರಾಮಧಾರಿ ಸಿಂಹ ದಿನಕರರ ಹೂಂಕಾರ್ ಅದೆಷ್ಟು ತರುಣರನ್ನು ಹೋರಾಟದೆಡೆಗೆ ಒಯ್ಯಿತು. ಮಹಾರಾಷ್ಟ್ರದ ದಲಿತ ಪ್ಯಾಂಥರರು ಆಂಧ್ರದ ದಿಗಂಬರ ಕವಿಗಳು ದೇಶದ ರಾಜಕೀಯದಲ್ಲಿಯೂ ಪಾತ್ರ ವಹಿಸಿದ್ದಾರೆ. ಚಿಲಿಯ ರಾಷ್ಟ್ರಕವಿ ಪಾಬ್ಲೊನೆರೂವಾ ರಾಜಕೀಯ ಕೇಂದ್ರ ಬಿಂದುವಾಗಿದ್ದರು. ಬಂಗ್ಲಾದೇಶದ ತರುಣ ಕವಿಗಳು, ಹಳ್ಳಿ ಹಳ್ಳಿಗೆ ಹೋಗಿ ಜನ ಜೀವನಕ್ಕೆ ಚೇತನ ತುಂಬುವ ಸಾಹಿತ್ಯ ಪ್ರಚಾರ ಮಾಡಿ ಜನರಿಗೂ ಬುದ್ದಿ ಜೀವಿಗಳಿಗೂ ಇರುವ ಕಂದರವನ್ನು ತುಂಬಿದರು ಹೀಗೆ ಸಾಹಿತ್ಯ ಸಾಮಾಜಿಕ ಬದುಕಿನೊಂದಿಗೆ ಬೆಸೆದುಕೊಂಡಿರುವದನ್ನು ಕಾಣಬಹುದಾಗಿದೆ.

ಭಾರತೀಯ ಸಮಾಜದ ಸ್ಥಿತಿಯಲ್ಲಿ ಗತಿಯಲ್ಲಿ ಸಂಕ್ರಮಣ ಕಾಲಗಳು ಕಾಣಿಸಿಕೊಂಡಿವೆ. ಅಂಥ ಕಾಲಗಳಲ್ಲಿ ಸಾಮಾಜಿಕ ಮೌಲ್ಯಗಳು ಬದಲಾಗಿವೆ. ಬುದ್ಧ ಮಹಾವೀರರು ಧರ್ಮದಲ್ಲಿ ಪ್ರಮುಖವಾಗಿದ್ದ ಸಾಮಾಜಿಕ ಪರಿವರ್ತನೆಯನ್ನುಂಟು ಮಾಡಿದರು. ಈ ಪರಿವರ್ತನೆ ಸಾಹಿತ್ಯದ ಮೇಲೂ ಪ್ರಭಾವ ಬೀರಿತು ಬುದ್ಧ ಹೇಳುವಂತೆ ಸಾಮಾಜಿಕ ಜೀವನವು ಬಹು ಜನ ಹಿತಾಯ ಆಗಿರಬೇಕು. ಬಸವಣ್ಣ ಹೇಳಿದಂತೆ ಸಕಲ ಜೀವಾತ್ಮರಿಗೆ ಲೇಸನೇ ನೀಡುವದಾಗಿರಬೇಕು. ಗಾಂಧೀಜಿ ಹೇಳಿದಂತೆ ಕೊನೆಯ ಮಾನವರ ಅಂತ್ಯ ಜನರ ಹಿತ ಸಾಧಿಸುವದಾಗಿರಬೇಕು. ಡಾ.ಅಂಬೇಡ್ಕರ ಬಯಸಿದಂತೆ ದಲಿತರ ಹಿತ ಸಾಧಿಸುವದಾಗಿರಬೇಕು. ಭಾರತೀಯ ಸಮಾಜ ವ್ಯವಸ್ಥೆ ತನ್ನ ಪ್ರಾರಂಭದ ದಿನಗಳಿಂದಲೂ ಧರ್ಮದ ಪಟ್ಟಭದ್ರರ ಹಿತಾಸಕ್ತಿಗಳನ್ನು ರಕ್ಷಿಸುವದಕ್ಕೊಸ್ಕರವೇ ರೂಪಗೊಂಡಿದ್ದರಿಂದ ಈ ಚಿಂತಕರು ಹೀಗೆ ಸಾಮಾಜಿಕ ಬದಲಾವಣೆಗೆ ರಾಜಕೀಯ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಹೊಂದಿಕೊಂಡು ನಡೆದು ಬಂದಿದೆ. ಸಾಮಾಜಿಕ ಪರಿವರ್ತನೆಗೆ ವಿವೇಕಾನಂದ, ಗಾಂಧಿ ಮುಂತಾದ ರಾಷ್ಟ್ರಚಿಂತಕರು ಪ್ರೇರಕ ಶಕ್ತಿಗಳಾಗಿದ್ದರೆ ಸಾಹಿತಿಗಳು ಅವರು ಮುಂದಿಟ್ಟ ಆದರ್ಶವನ್ನು ತಮ್ಮ ಕೃತಿಯಲ್ಲಿ ಎತ್ತಿ ಹಿಡಿಯುತ್ತ ಬಂದಿದ್ದಾರೆ. ಹೀಗಾಗಿ ಆಧುನಿಕ ಸಾಹಿತ್ಯ್ಲದ ಬರಹಗಾರರಲ್ಲಿ  ಸಾಮಾಜಿಕ ಬದಲಾವಣೆಯ ಪ್ರಜ್ಞೆ   ಕಾರ್ಯಶೀಲರಾಗುವಂತಾಯಿತು. 

ಪರಿವರ್ತನೆ ಮತ್ತು ಸಮಾಜ ವಿಮರ್ಶೆ


ಕನ್ನಡ ಸಾಹಿತ್ಯದಲ್ಲಿ ಪಂಪನ ಕಾಲಕ್ಕಿದ್ದ ತ್ಯಾಗ ವೀರ ಮೊದಲಾದ ಮೌಲ್ಯಗಳು ಎರಡು ಶತಮಾನಗಳ ಕಾಲ ಕನ್ನಡದ ಜನ ಜೀವನದಲ್ಲಿ ಸಾಮಾಜಿಕ ಮೌಲ್ಯಗಳಾಗಿ ನೆಲೆಗೊಂಡವು ಹನ್ನೆರಡನೆಯ ಶತಮಾನದ ವಚನ ಕ್ರಾಂತಿ ಹೊಸ ಸಾಮಾಜಿಕ ನೈತಿಕ ಮೌಲ್ಯಗಳನ್ನು ಜನರ ಕಣ್ಣೆದುರಿಗಿಟ್ಟಿತು. ವಚನಕಾರರು ತಮ್ಮ ಸಮಾಜವನ್ನು ಅದರ ಹಿನ್ನೆಲೆಯಲ್ಲಿ ಸೂಕ್ಷ್ಮವಾಗಿ ವಿಶ್ಲೇಷಿಸಿ ಅದರ ಲೋಪದೋಷಗಳನ್ನು ಬಯಲಿಗೆಳೆದರು. ಸಾಮಾಜಿಕವಾಗಿ ವಚನಕಾರರು ತಂದ ಬದಲಾವಣೆ ಕ್ರಾಂತಿಕಾರಿಯಾದುದು. ಬಡವ ಬಲ್ಲಿದ ಎಂಬ ವರ್ಗ ಭೇದ ತೆಗೆದು ಹಾಕುವದು, ಸಮಾಜದ ಸಿರಿವಂತರಲ್ಲಿ ತುಂಬಿದ್ದ ಧನಮದವನ್ನು ,ಬಡವರಲ್ಲಿ ಬೇರೂರಿದ್ದ ದೈನಾಸಿ ಭಾವವನ್ನು ಕಿತ್ತಿ ಹಾಕಿದರು. ’ಕುದುರೆ ಸತ್ತಿಗೆಯವರ ಕಂಡರೆ ಹೊರಳಿ ಬಿದ್ದು ಕಾಲು ಹಿಡಿಯುವ, ಬಡ ಭಕ್ತರು ಬಂದರೆ ಸಮಯವಿಲ್ಲ ಅತ್ತ ಸನ್ನಿ’ ಎನ್ನುವ ಹಣವಂತರನ್ನು  ವಚನಕಾರರು ಉದಾಸೀನ ಮಾಡಿದರು. ಅಂದಿನ ಸಮಾಜದಲ್ಲಿ ಬೇರೂರಿದ್ದ ಅಸ್ಪೃಶ್ಯತಾ ಸಮಸ್ಯೆಯನ್ನು ಕಿತ್ತೆಸೆಯುವಲ್ಲಿ ಮುಂದಾದರು. ’ಇವನಾರವ ಇವನಾರವ’ನೆಂದು ವ್ಯಕ್ತಿ ವ್ಯಕ್ತಿಯನ್ನು ಜಾತಿ; ಮತ, ಕುಲಗೋತ್ರಗಳನ್ನು ನೋಡಿ ವಿಂಗಡಿಸದೇ ಆತನನ್ನು ವಿಶಾಲ ಹೃದಯದಿಂದ ಅಪ್ಪಿಕೊಂಡರು. ಮುಂದೆ ಬಂದ ದಾಸರು ನಿಜವಾದ ಭಕ್ತನಿಗೆ ಅಗತ್ಯವಾದ ಪರಿಶುದ್ಧವಾದ ಜೀವನ ವಿಧಾನವನ್ನು ಪ್ರತಿಪಾದಿಸುವದಕ್ಕೆ ಸಮಾಜ ಸುಧಾರಣೆಯ ದೃಷ್ಟಿಯನ್ನು ಹೊಂದಿದರು. ಹರಿಹರನು ಕಾವ್ಯದ ವಸ್ತು ಬಂಧ ವರ್ಣಗಳಲ್ಲಿ ಪ್ರಯತ್ನ ರೂಪದ ಪ್ರತಿಭಟನೆಯನ್ನು ಸಾರಿದನು. ಅವನ ಕಾವ್ಯದ ವಸ್ತುವಿನಲ್ಲಿ ಶ್ರೀ ಸಾಮಾನ್ಯರು ದೈವತ್ವಕ್ಕೇರಿದರು. ಹರಿಹರನ ಕಾಲವಾದ ಮೇಲೆ ಕುಮಾರ ವ್ಯಾಸ ಕಾವ್ಯದ ಗೇಯತೆಗೆ ಪ್ರಾಧಾನ್ಯವನ್ನು ಕೊಟ್ಟರೆ ಸರ್ವಜ್ಞ ತನ್ನ ಚಿಕ್ಕ ಚಿಕ್ಕ ತ್ರಿಪದಿಗಳಲ್ಲಿ ಇಡೀ ಸಮಾಜದ ಲೋಪದೋಷಗಳನ್ನು ಎತ್ತಿ ತೋರಿದನು. ಸರ್ವಜ್ಞ ತನ್ನ ಕಾವ್ಯ ಇರುವುದು ವಿಮರ್ಶೆಯ ಆಶಯಕ್ಕಾಗಿ ಎಂಬುದನ್ನು ಪ್ರತಿಪಾದಿಸಿ ತೋರಿಸಿದ.


ನವೋದಯ ಯುಗದ ಸಾಹಿತಿಗಳು ಸಮಾಜವನ್ನು ವಿಮರ್ಶಿಸ ಹೊರಟಿದ್ದರೂ ಸಹ ಸಮಾಜವನ್ನು ಕ್ರ್ರಾಂತಿಕಾರವಾಗಿ ಬದಲಾಯಿಸುವ ಉದ್ದೇಶ ಹೊಂದಿರಲಿಲ್ಲ. ಆದರೂ ಅವರು  ಬಿತ್ತಿದ ಸಾಮಾಜಿಕ ವಿಚಾರಗಳು ಪರಿಣಾಮ ಬೀರುವಂಥವೇ ಆಗಿದ್ದವು .ನವೋದಯ ಸಾಹಿತ್ಯದಲ್ಲಿ ಕಾಣಬರುವ ಪ್ರಕೃತಿ ಪ್ರೇಮ,ಸ್ವದೇಶಾಭಿಮಾನ ,ಸಾಮಾಜಿಕ ಪ್ರಜ್ಞೆ ,ಜೀವನಾಶಕ್ತಿ ಈ ಎಲ್ಲ ಪ್ರವೃತ್ತಿಗಳು ಅಂದಿನ ರಾಷ್ರ್ಟೀಯತೆ ಹಾಗೂ ಉದಾರ ನೀತಿಯ ಶಿಕ್ಷಣದಿಂದ ಉದಿಸಿದ ಪ್ರಜ್ಞೆಯ ಅಂಶಗಳಾಗಿದ್ದವು.ಕುವೆಂಪು,ಮಾಸ್ತಿ,ಬೇಂದ್ರೆ ಅವರ ಕಾವ್ಯಗಳು,ಕೈಲಾಸಂ,ಶ್ರೀರಂಗರ ಸಾಮಾಜಿಕ ನಾಟಕಗಳು,ಕಾರಂತರ ದೇವದೂತರು, ಔದಾರ್‍ಯದ ಉರುಳಲ್ಲಿ, ಚೋಮನ ದುಡಿಯಂಥ ಕಾದಂಬರಿಗಳು ಆತ್ಮಶೋಧನೆಯ ಪ್ರಬಲ ಸಾಧನೆಗಳೇ ಆಗಿದ್ದವು.ನವೋದಯ ಬರಹಗಾರರು ಬಹು ಮುಖ್ಯವಾಗಿ ಜಾತಿ ಪದ್ದತಿ, ವಿಧವೆಯ ಸ್ಥಿತಿ, ಮೇಲು ಜಾತಿಯ ಜನರು ಧರ್ಮದ ಸೋಗಿನಲ್ಲಿ ನಡೆಸುವ ಢಾಂಭಿಕತನ ಮುಂತಾದ ಸಮಸ್ಯೆಗಳನ್ನೆತ್ತಿಕೊಂಡು ಅಂದಿನ ಬುದ್ದಿ ಜೀವಿಯ ನಿಲುವನ್ನು ಪ್ರಾಮಾಣಿಕವಾಗಿ ಸಮರ್ಥಿಸಿದರು.ಆದರೆ ಅಸಮಾನತೆ,ಅನ್ಯಾಯಗಳ ವಿರುದ್ದ ಪ್ರತಿಭಟಿಸುವಾಗ ಅವುಗಳ ಬಗೆಗೆ ರೋಷ ಹುಟ್ಟಿಸುವ ,ಅಂಥ ಸಾಮಾಜಿಕ ವಿಷಮತೆಗಳು ಅನಿವಾರ್ಯವಲ್ಲ ಎಂದು ತೋರಿಸುವ ಅವರ ಪ್ರಯತ್ನಗಳು ಒಂದು ಸಮಗ್ರ ಕ್ರಾಂತಿಕಾರಕ ವಿಚಾರಧಾರೆಯಾಗಿ ಹರಿಯಲಿಲ್ಲ.

ನವ್ಯಕ್ಕೆ ಬಂದಾಗ ಇವರು ಅತಿಯಾದ ಸಂಕೀರ್ಣ ಸುಶಿಕ್ಷಿತ ಭಾಷೆಯನ್ನು ಬಳಸಿ ,ಅನುಭವಗಳನ್ನು ಸುಕ್ಷ್ಮಾತಿಸೂಕ್ಷ್ಮವಾಗಿ ವಿಶ್ಲೇಷಿಸಿ ಸಾಹಿತ್ಯಕ್ಕೆ, ಓದುಗನಿಗೂ ನಡುವೆ ತುಂಬಲಾಗದ ಕಂದಕವನ್ನು ಸೃಷ್ಟಿಸಿದರು. ಇದರಿಂದಾಗಿ ನವ್ಯರ ಸಾಮಾಜಿಕ ಪ್ರಜ್ಞೆ ಇದ್ದಷ್ಟು ಕೂಡ ವ್ಯರ್ಥವಾಯಿತು. ನವೋದಯ ಮತ್ತು ನವ್ಯಗಳ ಮಧ್ಯ ಇದ್ದು ತನ್ನ ಇರುವನ್ನು ಪ್ರಕಟಿಸಿದ ಪ್ರಗತಿಶೀಲ ಸಾಹಿತ್ಯದಲ್ಲಿ ಮುಖ್ಯವಾಗಿ ಬರಗಾಲದ ಬವಣೆ, ಹಸಿವೆಯ ಕೂಗು ಇವುಗಳ ಮಾರ್ದನಿ ಇದೆ.ಪ್ರಗತಿಶೀಲ ಸಾಹಿತ್ಯದ ಮುಂದಾಳು ಅ.ನ.ಕೃ. ಅವರ ಕೃತಿಗಳಲ್ಲಿ ವಿಶಾಲ ಮಾನವತಾವಾದ ದೃಷ್ಟಿಯಿಂದ ಪ್ರೇರಿತವಾದ ಸಮಾಜ ದೋಷಗಳ ಕಟು ಟೀಕೆ, ಕ್ರಾಂತಿಯ  ಘೊಷಣೆ ಎದ್ದು ತೋರುತ್ತದೆ. ಬರಗಾಲ ಬಡತನ, ಅನ್ಯಾಯ, ಆಕ್ರಮಣ,ಅತ್ಯಾಚಾರ ಇವುಗಳು ಗಟ್ಟಿಗೊಂಡಿರುವುದು ಬಸವರಾಜ ಕಟ್ಟಿಮನಿ ಅವರ ಕಾದಂಬರಿಗಳಲ್ಲಿ ಕಾಣುತ್ತೇವೆ.ತ.ರಾ.ಸು. ಅವರ ಸಾಮಾಜಿಕ ಕಾದಂಬರಿಗಳಲ್ಲಿ ವೈಶ್ಯಾಜೀವನ, ಸ್ತ್ರೀ ಸ್ವಾತಂತ್ರ್ಯ ,ಕುಟುಂಬ ಸಂಸ್ಥೆಯ ಶ್ಶೆಥಿಲ್ಯ ಈ ಮುಂತಾಗಿ ಹಲವಾರು ಸಮಸ್ಯೆಗಳು ನಿರೂಪಿತವಾಗಿವೆ.

ದಲಿತ ಮತ್ತು ಬಂಡಾಯ


ಎಪ್ಪತ್ತರ ದಶಕದಲ್ಲಿ ಬಂದ ಬಂಡಾಯ ಮತ್ತು ದಲಿತ ಸಾಹಿತ್ಯ ಜನಸಮುದಾದತ್ತ ಸಾಗಿ ಸಾಮಾಜಿಕ ಪರಿವರ್ತನೆಯಲ್ಲಿ ಹೊಸ ಚಾಲನೆ ನೀಡಿದವು. ಇತಿಹಾಸದ ಪ್ರಗತಿಯನ್ನು ಗುರುತಿಸುವ ಬೌದ್ದಿಕ ಕಸರತ್ತುಗಳಿಂದ ದೂರವಾದ ವೈಯಕ್ತಿಕ ತೀಟೆಯಿಂದ ಮಕ್ತವಾದ ಜನರ ಅನೇಕ ರೀತಿಯ ಆಶೋತ್ತರಗಳನ್ನು ಪ್ರತಿನಿಧಿಸುವ ಹಾಗೂ ಈ ಆಶೋತ್ತರಗಳಿಗೆ ಕಾರಣವಾದ ಆಳವಾದ ಸಾಮಾಜಿಕ ರಾಜಕೀಯ ಸಂಗತಿಗಳನ್ನು ನಿಯಂತ್ರಿಸುವ ಜಾತಿ,ಧರ್ಮ, ವರ್ಗಇವುಗಳನ್ನು ಅರ್ಥ ಮಾಡಿಕೊಳ್ಳುವ ಹಾಗೂ ತನ್ನ ಓದುಗರಿಗೆ ಅರ್ಥಮಾಡಿಸುವ ಪ್ರಯತ್ನದಲ್ಲಿ ಬಂಡಾಯ ಸಾಹಿತ್ಯ ಒಲವು ತೋರಿತು .ಪ್ರಗತಿಶೀಲ ,ಬಂಡಾಯ ಮತ್ತು ದಲಿತ ಚಳುವಳಿಗಳಿಂದ ವಾಸ್ತವ ಲೋಕ, ಕಾವ್ಯ ಲೋಕ, ಲೋಕ ಸತ್ಯಗಳು ಬೇರೆ ಬೇರೆ ಎಂಬುದು ಬಯಲಾಗಿ ಸಾಹಿತಿಗಳು ಹಸ್ತಿದಂತ ಗೋಪುರಗಳಿಂದ ಕೆಳಗಿಳಿದು ವ್ಯಕ್ತಿ ಕೇಂದ್ರಿತ ನೆಲೆಗಳಿಂದ ಹೊರಗೆ ಬಂದು ಸಾಮಾಜಿಕ ಹೊಣೆಗಾರಿಕೆಯನ್ನು ಹೊರಲು ಸಮಾಜದಲ್ಲಿ ಆರೋಗ್ಯಕರವು ಅಮೂಲಾಗ್ರವೂ ಆದ ಬದಲಾವಣೆಗಳನ್ನು  ತರಲು ಸಿದ್ದರಾಗುವಂತಾಯಿತು. ಭಾವಪರ,ಚಿಂತನಪರ, ಕೃತಿಗಳ ಜೊತೆ ಜೊತೆಗೆ ಜನಪರ ಕೃತಿಗಳೂ ಬರತೊಡಗಿ ಆಧುನಿಕ ಕನ್ನಡ ಸಾಹಿತ್ಯಕ್ಕೆ ಇನ್ನೂ ಹೆಚ್ಚಿನ ಸಮೃದ್ದಿ , ವೈವಿಧ್ಯಗಳು ಜೀವಕಳೆ ಜೀವನ ಕಲೆಗಳು ದೊರೆಯುವಂತಾಯಿತು.

ಸಾಹಿತ್ಯ ಸಾಮಾಜಿಕ ಬದುಕನ್ನು ಆಧರಿಸಿ ಹುಟ್ಟುವ ಒಂದು ಸೃಜನಶೀಲ ಕ್ರಿಯೆಯಾದುದರಿಂದ ಯಾವುದೇ ಕಾಲದಲ್ಲಿ ಸೃಷ್ಟಿಯಾದ ಸಾಹಿತ್ಯ ಅಥವಾ  ಕೃತಿಗಳು ಆಯಾ ಕಾಲದ ವಿಶಿಷ್ಟ ವರ್ಗದ ಜನರ ಹಿತಾಸಕ್ತಿಗಳನ್ನು ಆಶೋತ್ತರಗಳನ್ನು ಪ್ರವೃತ್ತಿಗಳನ್ನು ಪಡಿಮೂಡಿಸುತ್ತವೆ ಎಂಬ ಮಾರ್ಕ್ಸನ ಮಾತು ಇಲ್ಲಿ ಸಾಹಿತಿ ತನ್ನ ಸಮಾಜ ಚಿತ್ರಣವನ್ನು ಒಂದಿಲ್ಲೊಂದು ರೀತಿಯಲ್ಲಿ ಅಳವಡಿಸಿಕೊಳ್ಳಲೇಬೇಕಾಗುತ್ತದೆ. ಆತ ಆ ಸಮಾಜದ ಒಂದು ಅನಿವಾರ್ಯವಾದ ಅಂಗವಾಗಿರುವುದರಿಂದ ಅವನು ತನ್ನ ಸಮಕಾಲೀನ ಸಮಾಜದ ಬಗ್ಗೆ ಎಚ್ಚರ ತಾಳಿರುತ್ತಾನೆ. ಸಮಾಜದ ಗತಿಯನ್ನು ತನ್ನ ಇತಿಮಿತಿಗಳೊಂದಿಗೆ ಸಾಹಿತ್ಯದಲ್ಲಿ ಒಡಮೂಡಿಸುವುದು ಸಾಮಾಜಿಕ ಪ್ರಜ್ಞೆಯುಳ್ಳ ಸಾಹಿತಿಯ ಮೊದಲ ಕರ್ತವ್ಯವಾಗಿದೆ. ಮಾನವೀಯ ಬಾಳಿನಲ್ಲಿ ಹಲವಾರು ವಿಕೃತಿಗಳು ಕಂಡು ಬರಬಹುದು. ಆದರೆ ಈ ವಿಕೃತಿಗಳ ಹಿಂದೆ ಅಡಗಿರುವ ಬಾಳಿನ ಅರ್ಥವನ್ನು ಸಾಹಿತ್ಯವು ಹೊರಹೊಮ್ಮಿಸಿ ತೋರಿಸಬೇಕು. ಹಾಗಾಗಿ ಮಾನವ ತನ್ನ ಪರಿಸರದಿಂದ ರೂಪುಗೊಳ್ಳುವದಾದರೆ ಮಾನವೀಯತೆಯಿಂದ ಕೂಡಿದ ಪರಿಸರವನ್ನು ರೂಪಿಸುವಲ್ಲಿ ಸಾಹಿತಿಯ ಪಾತ್ರ ಮಹತ್ವದ್ದಾಗಿದೆ.

         ಒಟ್ಟಾರೆ ಸಾಹಿತ್ಯವು ಸಾಮಾಜಿಕ ಬದಲಾವಣೆಯಲ್ಲಿ ಒಂದು ಮಹತ್ವಪೂರ್ಣವಾದ ಹೆಣಿಕೆಯಾಗಿದೆ.  ಸಾಹಿತ್ಯ ಬಿಟ್ಟು ಸಮಾಜವಿಲ್ಲ ಸಮಾಜ ಬಿಟ್ಟು ಸಾಹಿತ್ಯವಿಲ್ಲ ,ಸಾಹಿತ್ಯವನ್ನು ಬಿಟ್ಟ ಸಮಾಜ ತನ್ನ ಕಲಾತ್ಮಕತೆಯನ್ನು ಕಳೆದುಕೊಳ್ಳಬಲ್ಲದು, ಸಮಾಜವನ್ನು ಬಿಟ್ಟ ಸಾಹಿತ್ಯ ಶಾನುಭೋಗರ ಖಾತೆಯಾಗಬಲ್ಲದು .ಹೀಗಾಗಿ ಯಾವೊಂದು ಭಾಷೆಯ ಸಾಹಿತ್ಯವು ಆ ಜನರ ನಿತ್ಯ ಬದುಕಿನಲ್ಲಿ ತೇದು ಕೊಂಡಿರಬೇಕಾಗುತ್ತದೆ.ಅಂದಾಗಲೆ ಅದು ಸಾಮಾಜಿಕ ಬದಲಾವಣೆಯೊಂದಿಗೆ ಚಿರಂತನ ಮೌಲ್ಯ ಉಳಿಸಿಕೊಳ್ಳುತ್ತದೆ.    


ಡಾ.ಪ್ರಕಾಶ ಗ.ಖಾಡೆ

******


ಬೆಳಕಾಯಿತು ಬಾಗಲಕೋಟೆ ಖ್ಯಾತಿಯ ಡಾ.ಪ್ರಕಾಶ ಖಾಡೆ ಅವರಿಗೆ ಸನ್ಮಾನ

 



ಬೆಳಕಾಯಿತು ಬಾಗಲಕೋಟೆ ಖ್ಯಾತಿಯ ಡಾ.ಪ್ರಕಾಶ ಖಾಡೆ ಅವರಿಗೆ ಸನ್ಮಾನ

 143 ಅತ್ಯಂತ ಯಶಸ್ವಿ ಕಾರ್ಯಕ್ರಮಗಳನ್ನು ನೀಡಿ ಇನ್ನೂ ತೀರದ ಜ್ಞಾನದ ಹಸಿವನ್ನು ನೀಗಿಸಲು ಸರಣಿಯೋಪಾದಿಯಲ್ಲಿ ದಾಪುಗಾಲಿಕ್ಕುತ್ತಿರುವುದು ಡಾ. ಪ್ರಕಾಶ ಖಾಡೆಯವರ ಅಂತಃಸತ್ವದಲ್ಲಿ ಅಡಗಿರುವ ಉತ್ಸಾಹವನ್ನು ಎತ್ತಿ ತೋರಿಸುತ್ತದೆ ಎಂದು ಕೇಂದ್ರ ಬಸವ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯ ಮೋಹನ ಬಸನಗೌಡ ಪಾಟೀಲ ಅವರು ಹೇಳಿದರು.

ಕೇಂದ್ರ ಬಸವ ಸಮಿತಿ ಹಾಗೂ ಸಂಭ್ರಮ ಫೌಂಡೇಶನ್ ವತಿಯಿಂದ ‘ಬೆಳಕಾಯಿತು ಬಾಗಲಕೋಟೆ’ ಫೇಸ್‌ಬುಕ್ ಲೈವ್ ಸರಣಿ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿ ಮನೆಮಾತಾದ ಡಾ. ಪ್ರಕಾಶ ಖಾಡೆ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು. ಒಂದೊAದು ಕಾರ್ಯಕ್ರಮಕ್ಕೂ ವಿಭಿನ್ನವಾದ ವಿಷಯ ವಸ್ತುಗಳು ಅದರಂತೆ ನಾಡಿನಾದ್ಯಂತ ವಿಶೇಷ ಪರಿಣಿತಿ ಹೊಂದಿದAತಹ ಸಂಪನ್ಮೂಲ ವ್ಯಕ್ತಿಗಳು, ಸಾಹಿತಿಗಳು ತಮ್ಮ ಜ್ಞಾನ ಸುಧೆಯನ್ನು ಪಸರಿಸುವ ಕಾರ್ಯ ಖಾಡೆಯವರ ಸಾರಥ್ಯದಲ್ಲಿ ನಿರಂತರವಾಗಿ ಸಾಗುತ್ತಿರುವುದು ಅಭಿನಂದನಾರ್ಹ ಎಂದು ಅವರು ಅಭಿಪ್ರಾಯಪಟ್ಟರು.
ಸಂಭ್ರಮ ಫೌಂಡೇಶನ್‌ದ ಅಧ್ಯಕ್ಷ ಕಿರಣ ಗಣಾಚಾರಿ ಮಾತನಾಡಿ ಆರಂಭದಲ್ಲಿ ಸ್ವಲ್ಪವೇ ಜನರನ್ನು ತಲುಪುತ್ತಿದ್ದ ಖಾಡೆಯವರ ಈ ವಿಶಿಷ್ಟ ಕಾರ್ಯಕ್ರಮ ಇಂದು ಟಿವಿಯಲ್ಲಿ ಬರುವ ಧಾರಾವಾಹಿಗಳಂತೆ ಧಾರಾಳವಾಗಿ ಹರಿಯುವ ಹಾಗೂ ಜನಮೆಚ್ಚಿದ ಕಾರ್ಯಸರಣಿಯಾಗಿದೆ ಎಂದರು. ವಿನೂತನ ವಿಷಯಗಳನ್ನು ಹೊತ್ತು ಕಾರ್ಯಕ್ರಮದ ವೇಳಾಪಟ್ಟಿ ಪ್ರಕಟವಾದಾಗ ರಸದೌತಣ ಸವಿಯಲು ಜಾತಕ ಪಕ್ಷಿಗಳಂತೆ ಕಾದು ನೋಡುವ ಸರದಿ ಎಲ್ಲ ಶ್ರೋತೃಗಳದ್ದಾಗಿರುತ್ತದೆ ಎಂದು ಅವರು ಹೇಳಿದರು.
ಬೂದಿಹಾಳ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಎನ್.ಆರ್.ಠಕ್ಕಾಯಿ ಮಾತನಾಡಿ ಕೊರೊನ ಕಾಲಘಟ್ಟದಲ್ಲಿ ಜಗತ್ತಿನೆಲ್ಲೆಡೆ ಇರುವ ಕನ್ನಡಿಗರಿಗೆ ಅಖಂಡ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಸಾಧಕರ ಪರಿಚಯ ಮಾಡಿಕೊಟ್ಟದ್ದು ಅಭಿನಂದನೀಯ ಕಾರ್ಯ ಎಂದು ಹೇಳಿದರು. ಪ್ರಬುದ್ಧ ಸಾಹಿತಿಗಳಾದ ಡಾ. ಪ್ರಕಾಶ ಖಾಡೆಯವರ ಈಗಾಗಲೇ ಸಾಕಷ್ಟು ಸಾಹಿತ್ಯ ಕೃಷಿ ಮಾಡಿದ್ದು ಅವರ ಪ್ರಯತ್ನ ಮತ್ತು ಪರಿಶ್ರಮ ಎಲ್ಲರಿಗೂ ಮಾದರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಸಾಹಿತಿ ಪ್ರಕಾಶ ಡಂಗಿ ಉಪಸ್ಥಿತರಿದ್ದರು.








Friday, January 14, 2022

ಡಾ.ಪ್ರಕಾಶ ಗ.ಖಾಡೆ ಅವರ ಪ್ರಕಟಿತ ಕೃತಿಗಳು (1986 ರಿಂದ 2021)

 



ಡಾ.ಪ್ರಕಾಶ ಗ.ಖಾಡೆ ಅವರ ಪ್ರಕಟಿತ ಕೃತಿಗಳು (1986 ರಿಂದ 2021)

 


 
















1


ಗೀತ ಚಿಗಿತ


ಸಂಪಾದಿತ


ಕವನ ಸಂಕಲನ


1986


ನಾಡಿನ ನೂರೈವತ್ತು ಕವಿಗಳ ಕವಿತೆಗಳ ಸಂಪಾದನಾ ಕೃತಿ,ಇಳಕಲ್ಲದಿಂದ ಪ್ರಕಟ.


 


2


ತೂಕದವರು


ನಾಟಕ


1993


ಅನಿಕೇತ ಪ್ರಕಾಶನ,ಬಾಗಲಕೋಟೆ


 


3


ಪ್ರೀತಿ ಬಟ್ಟಲು


ಕವನ ಸಂಕಲನ


1997


ಅನಿಕೇತ ಪ್ರಕಾಶನ,ಬಾಗಲಕೋಟೆ


 


4


ಸಾಲು ಹನಿಗಳು


ಕವನ ಸಂಕನ


2004


ಅನಿಕೇತ ಪ್ರಕಾಶನ ,ಬಾಗಲಕೋಟೆ


 






5


ಕೃಷ್ಣಾತೀರದ ಜನಪದ ಒಗಟುಗಳು


ಜಾನಪದ ಗದ್ಯ


2005


ಹುಬ್ಬಳ್ಳಿ ಬೊಮ್ಮಾಯಿ ಪ್ರತಿಷ್ಠಾನ ಪ್ರಶಸ್ತಿ


 


6


ಜನಪದ ಕೋಗಿಲೆ ಗೌರಮ್ಮ ಚಲವಾದಿ


ಜೀವನ ಚರಿತ್ರೆ


2005


ಗದಗ ತೋಂಟದಾರ್ಯ ಸಂಸ್ಥಾನಮಠದ ಲಿಂಗಾಯತ ಪುಣ್ಯ ಪುರುಷರು ಮಾಲಿಕೆಯಲ್ಲಿ ಪ್ರಕಟ.ದ್ವಿತೀಯ ಮುದ್ರಣ -2007


 


7. ನಮ್ಮೂರ ಶಾಲೆ ನಮ್ಮೂರ ಮಕ್ಕಳು,  ಲೇಖನಗಳು  , 2006


ಶೈಕ್ಷಣಿಕ ಚಿಂತನ ಲೇಖನಗಳು


8

"ಜಿ.ಬಿ. ಖಾಡೆಯವರ ನಕ್ಕು ನಗಿಸುವ ಹಾಸ್ಯ ಪ್ರಸಂಗಗಳು"

ಸಂಪಾದನೆ

2006

ಅನಿಕೇತ ಪ್ರಕಾಶನ,ಬಾಗಲಕೋಟೆ


9

ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ


 ಸಂಶೋಧನೆ

2007

ಹಂಪಿ ಕನ್ನಡ ವಿಶ್ವವಿದ್ಯಾಲಯದ  ಪಿಎಚ್.ಡಿ. ಮಹಾಪ್ರಬಂಧ


 


10


ಬಸವ ಸಿರಿ


ಸಂಪಾದನೆ


2008


ಬಾಗಲಕೋಟೆ ಬಸವೇಶ್ವರ ಬ್ಯಾಂಕಿನ ಸ್ಮರಣ ಸಂಚಿಕೆ.


 


11


ಕೃಷಿ ಋಷಿ


ಸಂಪಾದನೆ


2009


ಬಾಗಲಕೋಟೆ ಡಿ.ಸಿ.ಸಿ.ಬ್ಯಾಂಕಿನ


ಸ್ಮರಣ ಸಂಚಿಕೆ.


 


12


ಮುನ್ನುಡಿ ತೋರಣ


ವಿಮರ್ಶೆ


2009


ಬೇರೆ ಬೇರೆ ಲೇಖಕರ ಕೃತಿಗಳಿಗೆ ಬರೆದ 23 ಮುನ್ನುಡಿಗಳು.


 


13


ಜತ್ತಿ ಕಾವ್ಯಾಭಿವಂದನ


ಸಂಪಾದಿತ ಕವನ ಸಂಕಲನ


2009


ಉಪರಾಷ್ಟ್ರಪತಿ ಡಾ.ಬಿ.ಡಿ.ಜತ್ತಿರವರ ಕುರಿತು ನಾಡಿನ ಕವಿಗಳು ಬರೆದ ಕವಿತೆಗಳ ಸಂಕಲನ. ಪ್ರಕಾಶನ -ಬಸವ ಸಮಿತಿ,ಬೆಂಗಳೂರು.


 


14


ಸಾಹಿತ್ಯ ಸಂಗಾತಿ


ಅಂಕಣ ಬರಹ ಸಂಕಲನ


2010


ಲಡಾಯಿ ಪ್ರಕಾಶನ ,ಗದಗ


 


 


15


ನೆಲಮೂಲ ಸಂಸ್ಕøತಿ


ಜನಪದ ಲೇಖನಗಳು


2010


 


ಈ ಕೃತಿಯಲ್ಲಿ ಪ್ರಕಟವಾದ ‘ಭಾರತೀಯ ಗ್ರಾಮೀಣ ಕ್ರೀಡೆ ಮಲ್ಲಕಂಬ’ ಲೇಖನ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಪಠ್ಯವಾಗಿದೆ. ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿ.


 


16


ಜಾನಪದ ಲೋಕ


ಜನಪದ ಲೇಖನಗಳ ಸಂಪಾದನೆ


2010


ಕನ್ನಡ ಸಾಹಿತ್ಯ ಪರಿಷತ್ತು,ಜಿಲ್ಲಾ ಘಟಕ ,ಬಾಗಲಕೋಟೆಯ ಪ್ರಕಟಣೆ.


 


17


ಆರೂಢ ಸಂಪದ


ಸ್ಮರಣ ಸಂಚಿಕೆ


2010


ಮಂಟೂರು ಮಠದ ಸ್ಮರಣ ಸಂಚಿಕೆ.


 


18


ಕನ್ನಡ ಪತ್ರಿಕೆ ಮತ್ತು ಸಾಹಿತ್ಯ


ಲೇಖನ ಸಂಕಲನ


2010


ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳ ಸಂಕಲನ.


 


19


ಕೋಟಿ ಕಾರಂಜಿ


ಸ್ಮರಣ ಸಂಚಿಕೆ


2011


ಸಾರ್ವಜನಿಕ ಶಿಕ್ಷಣ ಇಲಾಖೆ ,ಬಾಗಲಕೋಟೆ ಪ್ರಕಾಶನ.


 


20


ಹತ್ತರ ಹೊತ್ತಿಗೆ


ಸ್ಮರಣ ಸಂಚಿಕೆ


2011


 


ಇಳಕಲ್ಲ ಚಿತ್ರಕಲಾ ಮಹಾವಿದ್ಯಾಲಯದ ಪ್ರಕಟಣೆ.


 


21


ಬಾಗಲಕೋಟ ಜಿಲ್ಲೆಯ ಜನಪದ ಹಾಡುಗಳು


ಜನಪದ ಗೀತ ಸಂಕಲನ


 


 


ಕನ್ನಡ ಸಾಹಿತ್ಯ ಪರಿಷತ್ತು,ಜಿಲ್ಲಾ ಘಟಕ , ಬಾಗಲಕೋಟೆಯ ಪ್ರಕಟಣೆ.


 


22


ಶರಣ ಲೋಕ


ಲೇಖನಗಳ ಸಂಕಲನ


 


2012


ಹಂಬಲ ಪ್ರಕಾಶನ,ಬಾಗಲಕೋಟೆ.


 


23


ಮೌನ ಓದಿನ ಬೆಡಗು


ವಿಮರ್ಶಾ ಸಂಕಲನ


2012


ವಿವಿಧ ಕೃತಿಗಳಿಗೆ ಬರೆದ ವಿಮರ್ಶೆಗಳು.


 


24


ಜಾನಪದ ಹೆಬ್ಬಾಗಿಲು


ಜನಪದ ಲೇಖನಗಳು


 


2013


ಕಿಟಕಿ ಪ್ರಕಾಶನ ,ಮೈಸೂರು


 


25


ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ


ಪದ್ಯಗಳ ಸಂಕಲನ


 


2016


ಕ.ಸಾ.ಪ. ದತ್ತಿ ಪ್ರಶಸ್ತಿ


 


26


 


ಬೆಳಗುತಿದೆ ಬಸವ ಬ್ಯಾಂಕ


 


ನಾಟಕ


 


2017


ಬಸವೇಶ್ವರ ಬ್ಯಾಂಕ ಕುರಿತು ನಾಟಕ. ಬ್ಯಾಂಕಿನ ಶತಮಾನೋತ್ಸವ ಸಂದರ್ಭದಲ್ಲಿ ಪ್ರದರ್ಶನ.


 


27


ಕನ್ನಡ ದೇಸಿ ಕಾವ್ಯ ಅಧ್ಯಯನ


ವಿಮರ್ಶಾ ಸಂಕಲನ


2017


ರೂಪಾ ಪ್ರಕಾಶನ ,ಮೈಸೂರು


28


ಶಾಂತಿ ಬೀಜಗಳ ಜತನ


ಕವನ ಸಂಕಲನ


2018


1. ಕ.ಸಾ.ಪ. ಮುದ್ದಣ ಕಾವ್ಯ ಪ್ರಶಸ್ತಿ


2. ಹರಿಹರಶ್ರೀ ಪ್ರಶಸ್ತಿ,ಹರಿಹರ


3. ಆಜೂರ ಪ್ರತಿಷ್ಠಾನ ಪ್ರಶಸ್ತಿ, ಹಾರೂಗೇರಿ


 


29


ನೂರೆಂಟು ಕವಿಗಳ ಕೊರೊನಾ ಕಾಲದ ಕವಿತೆಗಳು


ಸಂಪಾದಿತ ಕವನ ಸಂಕಲನ


2020


ಯಾಜಿ ಪ್ರಕಾಶನ,ಹಂಪಿ ಹೊಸಪೇಟ.


 


30


ಬೇಂದ್ರೆ ಕಾವ್ಯದ ದೇಸಿಯತೆ


ವಿಮರ್ಶೆ ಸಂಕಲನ


2020


ಯಾಜಿ ಪ್ರಕಾಶನ,ಹಂಪಿ ಹೊಸಪೇಟ.


 


31


ಬಾಗಲಕೋಟೆ ಹೋಳಿ


ಲೇಖನಗಳ ಸಂಕಲನ


2021


ಅನಿಕೇತ ಪ್ರಕಾಶನ, ಬಾಗಲಕೋಟೆ


32


ಚೆಲುವಿ ಚಂದ್ರಿ


ಕಥಾ ಸಂಕಲನ


2021


ಯಾಜಿ ಪ್ರಕಾಶನ , ಹಂಪಿ ಹೊಸಪೇಟ


 


 


ಡಾ.ಪ್ರಕಾಶ ಗ.ಖಾಡೆ , ಮನೆ ನಂ. ಎಸ್.135, ಸೆಕ್ಟರ್ ನಂ. 63, ನವನಗರ, ಬಾಗಲಕೋಟೆ.-587103, ಮೊ.9845500890

Shivaratri -Dr.Prakash Khade

 ಶಿವರಾತ್ರಿ ವಿಶೇಷ ಲೇಖನ   : ಜನಪದರ ಹಾಡುಗಳಲ್ಲಿ ಶಿವರಾತ್ರಿ :  -ಡಾ.ಪ್ರಕಾಶ ಗ. ಖಾಡೆ,    ಬಾಗಲಕೋಟ ಮೊ. 9845500890    ಭಾರತೀಯ ಸಂಸ್ಕøತಿಯ ಬೇರುಗಳು ನಮ್ಮ ಜನಪದರ...