ಬಾಳುಕುನ ಪುರಾಣ ಒಂದು ರೀತಿಯ ಕೃಷ್ಣನ ಪುರಾಣವೇ ಆಗಿದೆ: ಬಸು ಬೇವಿನಗಿಡದ
"ಇಲ್ಲಿಯ ಕೆಲವು ಕತೆಗಳನ್ನು ನಾನು ಓದಿದಾಗ ನನ್ನ ಮನಸ್ಸಿನಲ್ಲಿ ಮೂಡಿದ ಕೆಲವು ವಿಚಾರಗಳನ್ನು ಓದುಗರ ಮುಂದಿಡುತ್ತಿರುವೆ. 'ಬಾಳುಕನ ಪುರಾಣ' ಎನ್ನುವ ಕಥೆಯನ್ನು ವಿಶಿಷ್ಟ ರೀತಿಯಲ್ಲಿ ಕಟ್ಟಲಾಗಿದೆ. ಘಟನೆಯೊಂದು ತುಂಬ ಕುತೂಹಲಕರವಾಗಿ ಸಾಗುತ್ತ ಆ್ಯಂಟಿ ಕ್ಲೈಮ್ಯಾಕ್ಸ್ ಸಾಧಿಸುವುದು ಈ ಕಥೆಯ ವೈಶಿಷ್ಠವಾಗಿದೆ" ಎನ್ನುತ್ತಾರೆ ಲೇಖಕ ಬಸು ಬೇವಿನಗಿಡದ. ಅವರು ಲೇಖಕ ಪ್ರಕಾಶ ಗ. ಖಾಡೆ ಅವರ ‘ಬಾಳುಕುನ ಪುರಾಣ’ ಕೃತಿಗೆ ಬರೆದ ಮುನ್ನುಡಿ...
“ಬಾಳುಕುನ ಪುರಾಣ” ಎನ್ನುವ ತಮ್ಮ ಈ ಕಥಾ ಸಂಕಲನದ ಬಗ್ಗೆ ನಾನು ಕೆಲವು ಮಾತುಗಳನ್ನು ಬರೆಯಬೇಕೆಂದು ಗೆಳೆಯರಾದ ಡಾ.ಪ್ರಕಾಶ ಖಾಡೆ ಅವರು ಇಚ್ಛೆ ಪಟ್ಟಿದ್ದು ಅವರ ಪ್ರೀತಿ ಹಾಗೂ ಆತ್ಮೀಯತೆಯ ದ್ಯೋತಕವೆಂದೇ ನಾನು ತಿಳಿದಿದ್ದೇನೆ. ಕಳೆದು ಎರಡು ಮೂರು ದಶಕಗಳಿಂದ ಪ್ರಕಾಶ ಅವರು ಸಾಹಿತ್ಯದಲ್ಲಿ ನಿರಂತರ ಕೃಷಿ ಮಾಡುತ್ತ ಬಂದಿದ್ದಾರೆ. ಒಂದಿಲ್ಲೊಂದು ಬಗೆಯಲ್ಲಿ ಅವರು ಸದಾ ಕ್ರಿಯಾಶೀಲರಾಗಿದ್ದುಕೊಂಡು ಬಾಗಲಕೋಟೆ ಪ್ರದೇಶದ ಸೀಮೆಯಲ್ಲಿ ಸಾಹಿತ್ಯದ ಗಂಧ ಸದಾ ಹರಡಿರುವಂತಹ ಒಂದು ಪ್ರಯತ್ನವನ್ನು ಹಿರಿಕಿರಿಯ ಸ್ನೇಹಿತರೊಂದಿಗೆ ಮಾಡುತ್ತಿರುವುದು ತುಂಬ ಶ್ಲಾಘನೀಯವಾಗಿದೆ. ಡಾ. ಪ್ರಕಾಶ ಖಾಡೆ ಅವರಲ್ಲಿಯ ಇನ್ನೂ ಒಂದು ಮೆಚ್ಚುಗೆಯ ಮಾತೆಂದರೆ ಅವರಲ್ಲಿನ ವ್ಯಾಸಂಗ ಗುಣ ಮತ್ತು ಬರವಣಿಗೆಯಲ್ಲಿನ ಶಿಸ್ತು. ಸಾಹಿತ್ಯದ ಯಾವುದೆ ಕೆಲಸ, ಪುಸ್ತಕ ಪ್ರಕಟನೆ, ಸಮಾರಂಭ ಹಾಗೂ ವಿಚಾರ ಸಂಕಿರಣ ಮತ್ತಿತರ ಕಾರ್ಯಗಳಲ್ಲಿ ಅವರು ತಮ್ಮನ್ನು ಶ್ರದ್ಧೆಯಿಂದ ತೊಡಗಿಸಿಕೊಳ್ಳುತ್ತ ಬಂದವರು. ಹೀಗಾಗಿ ಆಲಸ್ಯತನ, ಮುಂದೂಡುವ ಪ್ರವೃತ್ತಿ, ಯಾವುದೇ ಲೇಖನ ಬರೆಯುತ್ತೇನೆಂದು ಹೇಳಿ ಕೊನೆಗೆ ಕೈಕೊಡುವುದು ಮುಂತಾದ ಹೊಸ ಕಾಲದ ಕೆಲವು ಗೋಳಾಟಗಳಿಂದ ಅವರು ದೂರವಿದ್ದಾರೆ.
ಡಾ. ಪ್ರಕಾಶ ಖಾಡೆ ಅವರ ಮೊದಮೊದಲು ಕತೆಗಳನ್ನು ಬರೆಯುತ್ತಿದ್ದರೂ ನಡುವೆ ಈ ಪ್ರಕಾರದಲ್ಲಿ ಅಷ್ಟು ತೊಡಗಿಸಿಕೊಳ್ಳಲಿಲ್ಲವೆಂದು ಕಾಣುತ್ತದೆ. ಆದರೆ ಇತ್ತೀಚೆಗೆ ಅವರ ಹಲವು ಕತೆಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾದವು. ಕೆಲವು ಪ್ರಶಸ್ತಿ ಪುರಸ್ಕಾರಗಳನ್ನೂ ಪಡೆದವು. ಹತ್ತು ಕಥೆಗಳನ್ನೊಳಗೊಂಡ ಮೊದಲ ಕಥಾ ಸಂಕಲನ 'ಚೆಲುವಿ ಚಂದ್ರಿ' 2021 ರಲ್ಲಿ ಬಂತು ನಂತರ ಈಗ ಮತ್ತೇ ಹತ್ತು ಹೊಸ ಕಥೆಗಳ 'ಬಾಳುಕುನ ಪುರಾಣ' ಕಥಾ ಸಂಕಲನ ನಮ್ಮ ಕೈಯಲ್ಲಿದೆ.
ಇಲ್ಲಿಯ ಕೆಲವು ಕತೆಗಳನ್ನು ನಾನು ಓದಿದಾಗ ನನ್ನ ಮನಸ್ಸಿನಲ್ಲಿ ಮೂಡಿದ ಕೆಲವು ವಿಚಾರಗಳನ್ನು ಓದುಗರ ಮುಂದಿಡುತ್ತಿರುವೆ. 'ಬಾಳುಕನ ಪುರಾಣ' ಎನ್ನುವ ಕಥೆಯನ್ನು ವಿಶಿಷ್ಟ ರೀತಿಯಲ್ಲಿ ಕಟ್ಟಲಾಗಿದೆ. ಘಟನೆಯೊಂದು ತುಂಬ ಕುತೂಹಲಕರವಾಗಿ ಸಾಗುತ್ತ ಆ್ಯಂಟಿ ಕ್ಲೈಮ್ಯಾಕ್ಸ್ ಸಾಧಿಸುವುದು ಈ ಕಥೆಯ ವೈಶಿಷ್ಠವಾಗಿದೆ. ಹಿಂದಿನ ಕಾಲವನ್ನು ಈಗಿನ ಕಾಲಕ್ಕೆ ಲೀಲಾಜಾಲವಾಗಿ ತರುವಲ್ಲಿ ನಿಪುಣರಾಗಿರುವ ಮತ್ತು ಪೌರಾಣಿಕ ಪ್ರಸಂಗಗಳನ್ನು ತುಂಬ ಸ್ವಾರಸ್ಯಕರವಾಗಿ ಪ್ರದರ್ಶನ ಮಾಡುವಲ್ಲಿ ಸೈ ಎನಿಸಿಕೊಂಡಿರುವ ಬಹುರೂಪಿ ತಂಡವೊಂದು ಬಾಳುಕುನ ಊರಿಗೆ ಬಂದು ತಮ್ಮ ಪ್ರದರ್ಶನ ತೋರಿಸುವ ಸಂದರ್ಭವೊಂದನ್ನು ಇಟ್ಟು, ಕಥೆಯನ್ನು ಪ್ರಕಾಶ ಖಾಡೆ ಅವರು ತಿಳಿ ಹಾಸ್ಯ ಹಾಗೂ ವಿನೋದಮಯ, ಪ್ರಸಂಗಗಳೊಂದಿಗೆ ಚಿತ್ರಿಸಿರುವುದು ಎಲ್ಲರ ಗಮನ ಸೆಳೆಯುತ್ತದೆ. ಈ ಕತೆಯಲ್ಲಿ ಏನೋ ರಹಸ್ಯವಿದೆಯೆಂದು ಅನಿಸಿದರೂ ಅದನ್ನು ಎಲ್ಲಿಯೂ ತೋರಗೊಡದೂರ, ಕತೆಯನ್ನು ನಿರ್ವಹಿಸಿರುವ ಕಥಾತಂತ್ರ ಮೆಚ್ಚುಗೆಯಾಗುತ್ತದೆ. ಕಳೆದು ಹೋಗಿರುವ, ಒಂದು ಕಾಲವನ್ನು ಅದರ ಎಲ್ಲ ಗುಣಾವಗುಣಗಳೊಂದಿಗೆ ಮುಂದಿರುವುದನ್ನುಇಲ್ಲಿ ಕಾಣಬಹುದಾಗಿದೆ.
ಈ ಕತೆಯಲ್ಲಿ ಬಹುರೂಪಿ ನಾಟಕ ತಂಡದವರು ಕೇವಲ ಪೌರಾಣಿಕ ಕಥೆಯೊಂದನ್ನು ಹೇಳುತ್ತಿಲ್ಲ. ಬದಲಾಗಿ ಆ ಕಥೆಯ ಮೂಲಕ ನಮ್ಮ ಅನೇಕ ಊರುಗಳ ವಾಸ್ತವ ನೋಟವೊಂದನ್ನು ಕಟ್ಟಿಕೊಡುವಲ್ಲಿ ಶಕ್ತರಾಗಿದ್ದಾರೆ ಎನಿಸುತ್ತದೆ. ಬಾಳುಕ ಎನ್ನುವ ಊರ ಗೌಡನ ಲೋಲುಪ ವ್ಯಕ್ತಿತ್ವವನ್ನು ತೋರಿಸುವುದು ಕಥೆಗಾರರ ಆಶಯವಾದಂತಿದೆ. ಇಲ್ಲಿಯ ಗೌಡ ಕಚ್ಚೆಹರುಕ ಸ್ವಭಾವದವನಾದರೂ ಅವನಲ್ಲಿಯ ಒಂದೆರಡು ಒಳ್ಳೆಯ ಗುಣಗಳನ್ನು ಕತೆಗಾರರು ಚಿತ್ರಿಸುತ್ತಾರೆ. ಆ ಮೂಲಕ ಕೇವಲ ಕಪ್ಪು-ಬಿಳುಪಿನ ವ್ಯತ್ಯಾಸಗಳಿಂದ ಗುರುತಿಸಬಹುದಾಗಿದ್ದ ಪಾತ್ರಗಳಿಗೆ ಇನ್ನೂ ಹಲವು ಮುಖಗಳಿರುವುದನ್ನು ಕತೆಗಾರರು ತೋರಿಸುತ್ತಾರೆ. ಮನುಷ್ಯರಲ್ಲಿಯ ಗುಣ-ಸ್ವಭಾವಗಳು ಎಷ್ಟೊಂದು ವಿಚಿತ್ರವಾಗಿರುತ್ತವೆ ಎನ್ನುವುದನ್ನು ಮುನ್ನೆಲೆಗೆ ತರಲು ಪ್ರಕಾಶ ಖಾಡೆ ಅವರು ಪ್ರಯತ್ನಿಸಿದ್ದಾರೆ. ಊರಲ್ಲಿಯ ವ್ಯಕ್ತಿಗಳು ಹೀಗೀಗೆ ಎಂದು ಸಾಮಾನ್ಯವಾಗಿ ಗುರುತಿಸಲಾಗುವ ಸಿದ್ಧಸೂತ್ರವನ್ನು ಕತೆಗಾರರು ನಿರಾಕರಿಸಿ ಹೊಸ ನೋಟವೊಂದನ್ನು ಲಾಲಿತ್ಯಮಯವಾಗಿ ಹೆಣೆಯುವಲ್ಲಿ ಸಫಲರಾಗಿದ್ದಾರೆ. ಆ ಮೂಲಕ ಸಾಮಾನ್ಯ ಕಥಾಹಂದರದ ಅಪಾಯವೊಂದನ್ನು ಅವರು ದಾಟಿದ್ದಾರೆ. ಸೀತೆಯ ಪಾತ್ರ ಮಾಡುವ ಮಹಿಳೆಯೊಂದಿಗೆ ಮೋಹಿತನಾಗಿ, ಅವಳೊಂದಿಗೆ ರಮ್ಯ ಕ್ಷಣಗಳನ್ನು ಕಳೆಯಬೇಕೆಂಬ ಜಾತಿಬಲಾಡ್ಯನೊಬ್ಬನ, ದುಡ್ಡು ಉಳ್ಳವನೊಬ್ಬನ ಇಚ್ಛೆಯನ್ನು ಕತೆಗಾರರು ಇಲ್ಲಿ ನವಿರಾಗಿ ನಿರೂಪಿಸಿದ್ದಾರೆ. ಕಲಾವಿದರನ್ನು, ಅದರಲ್ಲೂ ಮಹಿಳಾ ಕಲಾವಿದರನ್ನು ಹಗುರವಾಗಿ ಪರಿಗಣಿಸುವ ಅನೇಕರ ಸ್ವಭಾವ ಹಾಗೂ ವರ್ತನೆಗಳನ್ನು ಲೇಖಕರು ಹರಿತ ವ್ಯಂಗ್ಯ-ವಿಡಂಬನೆಯೊಂದಿಗೆ ಇಲ್ಲಿ ಟೀಕಿಸಿರುವುದು ಎದ್ದು ಕಾಣುತ್ತದೆ. ರಾವಣ ಸೀತೆಯನ್ನು ಹುಡುಕಿ ಹೋಗುವ, ಅವಳನ್ನು ವಶ ಪಡಿಸಿಕೊಳ್ಳಬೇಕೆನ್ನುವ ಅವನ ದುರಾಸೆ, ಸ್ವಚ್ಛಾ ಪ್ರವೃತ್ತಿ ಮುಂತಾದವು ಇಲ್ಲಿ ಬಾಳುಕುನ ವ್ಯಕ್ತಿತ್ವದೊಂದಿಗೆ ಸಮೀಕರಣಗೊಂಡಿರುವುದು ನಮ್ಮ ಮನ ಸೆಳೆಯುತ್ತದೆ.
ಬಹುರೂಪಿ ತಂಡ ಬಾಳುಕುನ ತೋಟದಲ್ಲಿ ರಾತ್ರಿ ಉಳಿದುಕೊಂಡಾಗ ಕುಂಭದ್ರೋಣ ಮಳೆ ಸುರಿದು ಅವರು ಅನಿವಾರ್ಯವಾಗಿ ಆ ರಾತ್ರಿ ಅಲ್ಲಿಯೇ ಉಳಿಯಬೇಕಾಗುತ್ತದೆ. ವಿದ್ಯುತ್ ಸಂಪರ್ಕ ತಪ್ಪಿಹೋಗಿ ಲ್ಯಾಟಿನ ಮಿಣಿಮಿಣಿಯೆನ್ನುವ ಚಿಮಣಿ ಹಾಗೂ ಲ್ಯಾಟಿನ್‌ನಲ್ಲಿ ತಪರುಗುಟ್ಟುವ ಮಳೆಯ ನಡುವೆ ತನಗೆ ಅವಳನ್ನು ಸಂಧಿಸುವ ಸುಸಂಧಿ ದೊರೆಯಬಹುದೆಂದು ಬಾಳುಕ ಹಿಗ್ಗಿ ಹೀರೆಕಾಯಿ ಆಗಿರುತ್ತಾನೆ.
ಸ್ವಲ್ಪ ಸಮಯದ ನಂತರ ತೋಟದ ಮನೆಯ ಕೋಣೆಯಿಂದ ಸೀತೆ ಚಿಟ್ಟನೆ ಚೀರುತ್ತಾ ಹೊರಗೆ ಓಡಿಬರುತ್ತಾಳೆ. ಇದಕ್ಕೆ ಬಹುಶ: ಬಾಳುಕನೇ ಕಾರಣ ಇರಬಹುದೆಂದು ತೋಟದ ಕೆಲಸಗಾರರು, ಅವರಿವರು ತಿಳಿದು ತಮ್ಮ ಸಾಹುಕಾರ ಬಹುರೂಪಿಗಳ ಕೈಗೆ ಸಿಕ್ಕಿ ಹಾಕಿಕೊಂಡರೆಂದು ಚಿಂತಿತಗೊಂಡು ಅಲ್ಲಿಗೆ ಧಾವಿಸುತ್ತಾರೆ. ಸೀತೆಯ ರೋದನ ಕೇಳಿ ಆಕೆಯ ಸಹರ್ತಿಗಳು ಸಹ ನೆರವಿಗೆ ಧಾವಿಸುತ್ತಾರೆ. ಆದರೆ ಎಲ್ಲರೂ ತಿಳಿದು ಕೊಂಡಂತೆ ಆಕೆ ಅಳುತ್ತಿದ್ದುದು ಬಾಳುಕುನ ಕಾರಣದಿಂದಲ್ಲ ಎಂದು ತಿಳಿದಾಗ ಕೆಲಸಗಾರರಿಗೆ ತುಸು ನಿರಾಳವಾಗುತ್ತದೆ. ತಮ್ಮ ಸಾಹುಕಾರ ಬಹೂರೂಪಿ ವೃದ್ಧನೊಬ್ಬನ ಜೊತೆ ಕುಡಿಯುತ್ತಾ ಹರಟೆ ಹೊಡೆಯುತ್ತಿದ್ದು ಅವರೂ ಸೀತೆಯ ಜೋರಾದ ಧ್ವನಿ ಕೇಳಿ ಓಡಿಬಂದಿರುತ್ತಾರೆ. ಆದದ್ದೇನೆಂದರೇ ಸೀತೆಗೆ ಆ ಕತ್ತಲ ಕೋಣೆಯಲ್ಲಿ ಕರಿಚೇಳು ಕಡಿದಿತ್ತು. ಬಾಳುಕ ಹತ್ತಿರದ ನಾಟಿ ವೈದ್ಯರನ್ನು ಕರೆದು ಉಪಚಾರ ಮಾಡಿಸುತ್ತಾರೆ. ಆಗ ಸೀತೆಗೆ ತುಸು ನೆಮ್ಮದಿ ಅನಿಸುತ್ತದೆ. ತಾನು ಅವಳಿಗೆ ಉಪಚಾರ ಮಾಡಿದ್ದಕ್ಕೆ ಅವಳಲ್ಲಿ ತನ್ನ ಪರ ಸಹಾನೂಭೂತಿ ಮೂಡಿರಬಹುದೆಂದು ಬಾಳುಕ ಒಳಗೊಳಗೆ ಖುಷಿಪಡುತ್ತಾನೆ. ಸೀತೆ ಕೋಣೆಯಲ್ಲಿ ಮಲಗುವುದು ಬಿಟ್ಟು ಎಲ್ಲರ ಜೊತೆ ಪಡಸಾಲೆಯಲ್ಲಿ ಮಲಗಿದ್ದನ್ನು ಕಂಡು ಅವನಿಗೆ ಕಸಿವಿಸಿ ಆಗುತ್ತದೆ. ತನ್ನ ಯೋಜನೆ ವಿಫಲವಾಗುತ್ತಿದೆಯೆಂದು ಅವನಿಗೆ ಹಳಹಳಿಯಾಗುತ್ತದೆ. ಮಲಗಿದ್ದವರಲ್ಲಿ ಸೀತೆ ಯಾರೆಂದು ತಿಳಿಯಲು ಆತ ಪರದಾಡುತ್ತಾನೆ. ಎಲ್ಲರೂ ಒಂದೇ ತರಹ ಇದ್ದಾರಲ್ಲ, ಇವರಲ್ಲಿ ಸೀತೆ ಯಾರು ಎಂದು ಅವನಿಗೆ ಗೋಜಲು ಗೋಜಲಾಗುತ್ತದೆ. ಎಲ್ಲರೂ ಗಂಡಸರ ಹಾಗೆ ಕಂಡು ಬಾಳುಕುನ ತಲೆ ತಿರುಗಿದಂತಾಯಿತು. ಕೊನೆಗೂ ಬಾಳುಕ ಕಷ್ಟಪಟ್ಟು ಅವಳನ್ನು ಹುಡುಕಿದಾಗ ಆತ ಬೇಸ್ತು ಬೀಳುವುದನ್ನು ಲೇಖಕರು ತುಂಬ ವಿನೋದಮಯವಾಗಿ ಚಿತ್ರಿಸಿರುವುದು ಇಲ್ಲಿ ಮೆಚ್ಚುಗೆಯಾಗುತ್ತದೆ. ಈ ಕಥೆ ಒಂದು ರೀತಿಯಲ್ಲಿ ಮನುಷ್ಯನನ್ನು ಕಾಡುವ ಮಾಯೆಯಂತೆ ಅನಿಸುತ್ತದೆ. ಮಾಯೆ ನಮ್ಮೆಲ್ಲರನ್ನೂ ಆವರಿಸಿಕೊಂಡಿರುವ ಬಗೆಯನ್ನು ಬಾಳುಕನ ವ್ಯಕ್ತಿತ್ವದ ಮೂಲಕ ಕತೆಗಾರರು ಕಟ್ಟಿಕೊಡಲು ಯತ್ನಿಸಿದ್ದಾರೆ. ಬಾಗಲಕೋಟೆ ಬಿಜಾಪುರ ಸೀಮೆಯ ಆಡುಭಾಷೆಯ ಶಬ್ದ, ನುಡಿಗಟ್ಟುಗಳು ಕಥೆಯನ್ನು ಹೃದ್ಯವಾಗಿಸುತ್ತವೆ. 'ಬಾಕಿ ಬಿರಾಡ ತುಂಬಿ ಖುಲ್ಲಾ ಆದಾ', 'ಹಸಿದು ಎಲ್ಲರ ಕಣ್ಣಲ್ಲಿ ಚಿಕ್ಕಿ ಮೂಡಿದ್ದವು', 'ತಡಾಕಿಲ್ಲದ ಸಂಜೀ ಆತು', "ಹೀಂಗ್ಯಾಕ ಮೈಮ್ಯಾಲ ಹಾಂವ ಏರಿದಾಂಗ ಮಾಡಾಕ ಹತ್ತೀರಿ?' ಮುಂತಾದ ಆಡುಮಾತಿನ ವಾಕ್ಯಗಳು ಕತೆಯ ಸನ್ನಿವೇಶವನ್ನು ಕಣ್ಣಿಗೆ ಕಟ್ಟುವಂತೆ ಮಾಡುತ್ತವೆ. ಅನೇಕ ನುಡಿಗಟ್ಟುಗಳು ನಮ್ಮನ್ನು ಕಳೆದುಹೋಗುತ್ತಿರುವ ಶಬ್ದ ಸಂಪತ್ತಿನ ಜೊತೆ ಜೋಡಿಸುತ್ತವೆ.
'ಸದ್ಯಕ್ಕಿದು ಜಮಖಂಡಿ ಸಂತಿ' ಎನ್ನುವ ಕತೆ ಮಲ್ಲಪ್ಪ ಹೆಸರಿನ ಮಾಸ್ತರರ ಪ್ರಾಮಾಣಿಕತೆಯನ್ನು ನಿರೂಪಿಸುತ್ತದೆ. ಮಾಸ್ತರರು ತಮ್ಮ ಶಿಸ್ತು, ಸಂಯಮ, ಪ್ರಾಮಾಣಿಕತೆ, ಹಾಗೂ ಕರ್ತವ್ಯಪರತೆಗೆ ಹೆಸರಾದವರು. ಮುದುಕಿಯೊಬ್ಬಳು ತನ್ನ ಬಂಗಾರದ ಒಡವೆಗಳನ್ನು ಆಸೆಬುರುಕರಿಂದ ರಕ್ಷಿಸಿಕೊಳ್ಳಲು ಮಲ್ಲಪ್ಪ ಮಾಸ್ತರರ ಬಳಿ ಇಟ್ಟು ಆಮೇಲೆ ತೆಗೆದುಕೊಳ್ಳುತ್ತೇನೆ ಎಂದು ಹೋಗುತ್ತಾಳೆ. ಸ್ವಲ್ಪ ದಿನಗಳಲ್ಲಿಯೆ ಮಾಸ್ತರರಿಗೆ ವರ್ಗವಾಗುತ್ತದೆ. ಎಷ್ಟೋ ವರ್ಷಗಳಾದ ಮೇಲೆ ಮಲ್ಲಪ್ಪ ಮಾಸ್ತರರು, ಅವಳ ದಾಗೀನುಗಳನ್ನು ಗುಲಗಂಜಿಯಷ್ಟು ಕಡಿಮೆ ಮಾಡದೆ ಮರಳಿಸುವುದು ಕಥೆಯ ವಸ್ತುವಾಗಿದೆ. ಮಾಸ್ತರರ ಜೀವನ ಜಂಜಾಟ, ಮಕ್ಕಳು-ಸೊಸೆಯರೊಂದಿಗಿನ ಘರ್ಷಣೆ, ಬಹುಶ: ಪ್ರತಿಯೊಬ್ಬರ ಮನೆಯಲ್ಲಿ ಇರಬಹುದಾದ ರಂಪಾಟ ಮುಂತಾದವುಗಳನ್ನು ವಿನೋದಮಯವಾಗಿ ಕಟ್ಟಿಕೊಡಲು ಪ್ರಕಾಶ ಖಾಡೆಯವರು ಯತ್ನಿಸಿರುವುದು ಈ ಕತೆಯಲ್ಲಿ ಮೆಚ್ಚತಕ್ಕ ಅಂಶವಾಗಿದೆ. ಒಂದು ದಿನ ಮಾಸ್ತರರ ಮನೆಗೆ ಮುದುಕಿ ಅಚಾನಕ್ಕಾಗಿ ಬರುವುದರೊಂದಿಗೆ, ಅವಳನ್ನು ಕಂಡು ವೃದ್ಧರಾಗಿರುವ ಮಾಸ್ತರರು ಮೂರ್ಛ ಬೀಳುವುದರೊಂದಿಗೆ ಕತೆಯನ್ನು ಕುತೂಹಲಕರವಾಗಿ ಪ್ರಕಾಶ ಅವರು ಆರಂಭಿಸಿದ್ದಾರೆ. ಮಾಸ್ತರರ ಜಂಜಾಟಗಳು ಮಕ್ಕಳ ಸೊಸೆಯಂದಿರ ಜಗಳಾಟ,ರಂಪಾಟ ಮುಂತಾದವುಗಳನ್ನು ವಿನೋದಮಯವಾಗಿ ಕಟ್ಟಿಕೊಡಲು ಪ್ರಕಾಶ ಖಾಡೆ ಪ್ರಯತ್ನಿಸಿದ್ದಾರೆ.
ಶಾಲೆಯ ಪರಿಸರವನ್ನು ಇಟ್ಟುಕೊಂಡು ಪರಂಪರಾಗತ ಕಲೆಗಳ ಮೂಲಕ ನಮ್ ಅರಿವನ್ನು ಹೇಗೆ ಹೆಚ್ಚಿಸಿಕೊಳ್ಳಬೇಕೆನ್ನುವ ಆಶಯವನ್ನು “ಇಲ್ಲಿಂದ ಮೇಲೆ ಶಬ್ದವಿಲ್ಲ ಕತೆಯಲ್ಲಿ ಮುನ್ನೆಲೆಗೆ ತರಲಾಗಿದೆ. ಕ್ರಿಯಾಶೀಲ ಶಿಕ್ಷಕನೊಂದಿಗೆ ಜಡತ್ವವನ್ನೇ ಹಾಸಿ ಹೊದ್ದುಕೊಳ್ಳುವ ಶಿಕ್ಷಕನೊಬ್ಬನನ್ನು ಕತೆಗಾರರು ಹೋಲಿಕೆ ಮಾಡುತ್ತಾರೆ. ಆ ಮೂಲಕ ಇಲ್ಲಿ ಎರಡು ಭಿನ್ನ ವ್ಯಕ್ತಿತ್ವಗಳ ಅನಾವರಣ ಏರ್ಪಡುತ್ತದೆ. ಹಾಡು, ಕುಣಿತ, ಮೋಜು, ಮೌನಗಳಿಗೆ ವಿಮುಖರಾಗಿರುವ ಒಬ್ಬ ಶಿಕ್ಷಕ ಹಾಗೂ ಅವುಗಳ ಮೂಲಕವೆ ಹೊಸ ಅರ್ಥಗಳನ್ನು ಹುಟ್ಟು ಹಾಕುವ ಶಿಕ್ಷಕರೊಬ್ಬರನ್ನು ಮುಖಾಮುಖಿಯಾಗಿಸುವ ಪ್ರಯತ್ನ ಈ ಕತೆಯಲ್ಲಿದೆ. ಬಯಲಾಟ, ಸಣ್ಣಾಟ ಹಾಗೂ ಜಾನಪದ ಪರಿಸರದ ಕೆಲವು ನುಡಿಗಟ್ಟು ಹಾಗೂ ನಾದಮಯ ವಾಕ್ಯಗಳು ಈ ಕತೆಯನ್ನು ಅಪರೂಪವಾಗಿಸುತ್ತವೆ. ಶಾಲಾ ಪರಿಸರದ ವಸ್ತುವನ್ನೆ ಇಟ್ಟುಕೊಂಡು ಬರೆದಿರುವ ಇನ್ನೊಂದು ಕತೆ 'ಅಕ್ಕರ ತಾಯವ್ವ'. ಇದರಲ್ಲಿ ಆಕಾಶ ಎನ್ನುವ ಆದರ್ಶ ಶಿಕ್ಷಕನೊಬ್ಬ ಊರಲ್ಲಿ ತರುವ ಪರಿವರ್ತನೆಯನ್ನು ಹೃದ್ಯವಾಗಿ ನಿರೂಪಿಸಲಾಗಿದೆ. ಗುಟಕಾ ತಿಂದವರು ಮುದುಕರು ಆಗೋದಿಲ್ಲ' ಎಂಬ ಹೊಸ ಮಾಸ್ತರನ ಮಾತು ಮೊದಲಿಗೆ ಹಳ್ಳಿಗರಿಗೆ ಮಜಾ ಅನ್ನಿಸುತ್ತದೆ. ಆದರೆ ಯಾವಾಗ ಆತ 'ಅವರು ಯಾಕ ಮುದುಕರು ಆಗಂಗಿಲ್ಲಂದ್ರ ಅವರು ಬಾಳ ದಿನ ಬದುಕಾಂಗಿಲ್ಲ... ಇನ್ನೂ ಹರೇದವರು ಇದ್ದಾಗನ ಸತ್ತು ಹೋಗ್ತಾರ' ಎನ್ನುವ ಮಾತನ್ನು ಆಡಿದಾಗ ದುಶ್ಚಟಗಳ ದೂರ ಪರಿಣಾಮಗಳನ್ನು ವಿದ್ಯಾರ್ಥಿಗಳು ಹಾಗೂ ಊರಜನರು ತಿಳಿದುಕೊಳ್ಳುತ್ತಾರೆ. ಇಚ್ಛಾಶಕ್ತಿಯಿದ್ದವರು ಏನೂ ಬೇಕಾದರೂ ಸಾಧಿಸಬಲ್ಲರು ಎಂಬುದನ್ನು ಈ ಕತೆಯಲ್ಲಿ ಆಕಾಶ ಎಂಬ ತರುಣ ಶಿಕ್ಷಕನ ಮೂಲಕ ತೋರಿಸಲಾಗಿದೆ.
'ಬೀಜ ನಿರಾಳದ ಬೆಳಸು' ಕತೆಯಲ್ಲಿ ಬಾಲ್ಯದಲ್ಲಿ ಪೋಲಿಯೋಕ್ಕೆ ತುತ್ತಾಗಿ ಸರಿಯಾಗಿ ಬೆಳವಣಿಗೆ ಕಾಣದ ಬಾಲಕನಲ್ಲಿ ಉತ್ತೇಜನ ತುಂಬಿ ಅವನನ್ನು ಹೊಸ ಬೆಳಕಿನೆಡೆಗೆ ಸಾಗಿಸುವ ಪ್ರಯತ್ನವಿದೆ. ವಿಶೇಷ ಚೇತನದ ಮಕ್ಕಳನ್ನು ಅಕ್ಕರೆ, ಪ್ರೀತಿಗಳಿಂದ ನೋಡಿಕೊಳ್ಳಬೇಕೆನ್ನುವ ಮನಸ್ಸನ್ನು ಮನುಷ್ಯರಾದವರು ಹೊಂದಿರಬೇಕು ಎಂಬ ಆಶಯ ಈ ಕತೆಯಲ್ಲಿ ಅಚ್ಚುಕಟ್ಟಾಗಿ ನಿರೂಪಿತವಾಗಿದೆ. ಅಂತಹ ಮಕ್ಕಳ ಬಗ್ಗೆ ಮನೆಯಲ್ಲಿ ತಾರತಮ್ಯ ತೋರದೆ, ಅವರಲ್ಲಿ ಕೀಳರಿಮೆ ಹುಟ್ಟುಹಾಕದೆ ಸರಿಯಾದ ಪೋಷಣೆ ಮಾಡಬೇಕೆಂಬ ಸಾರ ಇಲ್ಲಿ ಮಡುಗಟ್ಟಿದೆ. ದೈಹಿಕ ಕಸರತ್ತಿನ ಗ್ರಾಮೀಣ ಆಟವೊಂದರ ಮೂಲಕವೆ ಏಳನೆಯ ಇಯತ್ತೆಯ ವಿದ್ಯಾರ್ಥಿಗಳು ನಡೆಯಲು ಬಾರದ ಪುಟ್ಟನನ್ನು ಶಾಲೆಗೆ ತಮ್ಮ ಅಂತ:ಕರಣದ ತೋಳುಗಳಲ್ಲಿ ತರುವುದು ಸಾಮರಸ್ಯ ಹಾಗೂ ಸಮಾನತೆಯ ಸಂಕೇತವಾಗಿ ಕಾಣಿಸಿಕೊಳ್ಳುತ್ತದೆ.
'ವಾಸ್ತವ ನೆಲೆಗಟ್ಟಿನ ಇವರ ಕತೆಗಳಲ್ಲಿ ಭಾಷೆಯ ಚೆಲುವು ಎದ್ದು ಕಾಣುವಂತಹದು. ಜೊತೆಗೆ ವಿನೋದ ಪ್ರವೃತ್ತಿ ಅಲ್ಲಲ್ಲಿ ಇಣುಕುವುದು ಅವರ ಬರವಣಿಗೆಯನ್ನು ಗಮನಿಸುವಂತೆ ಮಾಡುತ್ತದೆ. 'ಒಪ್ಪಾರಿ ಮೀಸಿ' ಇಂಥ ವಿನೋದ ಕಥೆಗಳಲ್ಲೊಂದು.ಇಲ್ಲಿ ಮಿಲ್ಪಿ ಮಧುಮಗ ತನ್ನ ಒಪ್ಪಾರಿ ಮೀಸೆ ಕಳಕೊಂಡು ಮದುವೆ ಸಂದರ್ಭದಲ್ಲಿ ಅನುಭವಿಸುವ ಹಲವು ತೊಳಲಾಟಗಳನ್ನು ಕಥೆಗಾರ ಖಾಡೆ ಅವರು ತುಂಬಾ ನವಿರಾಗಿ ಕಟ್ಟಿಕೊಡುತ್ತಾರೆ. 'ಬುದ್ಧ ಪ್ರಿಯೆ ಶಾಂತಿ' ಕಥೆಯು ಸಂಕಲದ ಗಮನಾರ್ಹ ಕಥೆ, ಬಾದಾಮಿ ಮಹಾಕೂಟ ಬೆಟ್ಟದ ಮರವೊಂದರ ಸುತ್ತ ಸುತ್ತುವ ಕಥೆ ಹಲವು ರೋಮಾಂಚನಗಳಿಗೆ ಸಾಕ್ಷಿಯಾಗುತ್ತದೆ. ಇಲ್ಲಿನ ಕಲ್ಪಿತ ಹೊನ್ನಕುಸುಮ ಮರ ಬಹಳ ಕಾಡುತ್ತದೆ. ಇಲ್ಲಿ ಮೋಡಿಯಾಟದವರ ಚಿತ್ರಣ, ದನಗಳು ಒಂದಕ್ಕೊಂದು ಹಾಯ್ದುಕೊಳ್ಳುವ ಚಿತ್ರಣ, ಜೇನು ಎದ್ದು ಹದಿಹರೆಯದ ಮಕ್ಕಳು ಅನುಭವಿಸುವ ಗೋಳಾಟ ಕಥೆಯನ್ನು ಓದಿಯೇ ಅನುಭವಿಸಬೇಕು.
ಕೃಷ್ಣಾ ತೀರ ಪ್ರದೇಶದ ಕಥೆಗಾರರಾಗಿದ್ದ ದು.ನಿಂ.ಬೆಳಗಲಿ, ರಾವಬಹಾದ್ದೂರ, ಸತ್ಯಕಾಮ ಮುಂತಾದ ಲೇಖಕರು ಕಟ್ಟಿಕೊಟ್ಟ ಪಾರಂಪರಿಕ ಲೋಕದ ಮರುದರ್ಶನ ಹಾಗೂ ಕಳೆದುಹೋದ ಕಾಲವನ್ನು ವರ್ತಮಾನಕ್ಕೆ ಜೋಡಿಸುವ ಪ್ರಯತ್ನವೊಂದನ್ನು ಪ್ರಕಾಶ ಖಾಡೆಯವರು ತಮ್ಮ ಕತೆಗಳ ಮೂಲಕ ಇಲ್ಲಿ ಮುಂದುವರೆಸಿದ್ದಾರೆ. ಸನ್ನಿವೇಶ, ಪಾತ್ರಗಳು, ಇಲ್ಲಿನ ಭಾಷಿಕ ಸೌಂದಯ್ಯ ಈ ಮಾತಿಗೆ ಸಾಕ್ಷಿ ಒದಗಿಸುತ್ತವೆ. ಅಲ್ಲದೆ ಜಾನಪದ ಪರಂಪರೆಯ ಅನೇಕ ವಸ್ತು ಸಂಗತಿಗಳು ಕಥೆಗಳಲ್ಲಿ ದಟ್ಟವಾಗಿ ಹೆಪ್ಪುಗಟ್ಟಿವೆ. ಹಳ್ಳಿ ಪರಿಸರದ ಒಡನಾಡಿಗಳಾದ ಬಹಿರೂಪಗಾರರು, ಮೋಡಿಯಾಟದವರು, ದುರಗಮುರಗಿಯವರು, ಆಯಗಾರರು ಮೊದಲಾದ ಸಕಲ ಜನಪದರು ಕಥೆಗಳಲ್ಲಿ ತೂರಿಕೊಳ್ಳುತ್ತಾರೆ.
ಇಲ್ಲಿನ ಕಥೆಗಳ ಪಾತ್ರಗಳ ಹೆಸರೂ ಮೋಹಕವಾಗಿವೆ, ಕಥೆಯ ಓದಿಗೆ ಕುತೂಹಲ ಹುಟ್ಟಿಸುತ್ತವೆ. ಜಮಖಂಡಿ ಸುತ್ತಿನ ಹಳ್ಳಿಗಳಲ್ಲಿ ಬಾಳಕೃಷ್ಣನನ್ನು ಇವತ್ತಿಗೂ ಬಾಳುಕು ಎಂದು ಕರೆಯುತ್ತಾರೆ. ಇಲ್ಲಿನ ಬಾಳುಕುನ ಪುರಾಣ ಒಂದು ರೀತಿಯಲ್ಲಿ ಕೃಷ್ಣನ ಪುರಾಣವೇ ಆಗಿದೆ. ಬೇರೆ ಬೇರೆ ಕಥೆಗಳಲ್ಲಿ ಕಾಣಿಸಿಕೊಳ್ಳುವ ಸುಕುಮಾರ, ಚಿನ್ನದಾಸಿ, ಶಾಂತಿ, ಸಿರಿವಂತೆ, ಭಾಗೀರಥಿ ಪಾತ್ರಗಳು ಬಹುಕಾಲ ನೆನಪಿನಲ್ಲುಳಿಯುತ್ತವೆ. ಲೀಲಾಜಾಲವಾಗಿ ಓದಿಸಿಕೊಂಡು ಹೋಗುವ ಕಥೆಗಳು ಕುತೂಹಲದಿಂದ ಕೂಡಿವೆ. ಗ್ರಾಮ್ಯ ಭಾಷಾ ಸೊಗಸು ಕಥೆಗಳ ಒಟ್ಟು ಆಕರ್ಷಣೆಗೆ ಜೊತೆಯಾಗಿದೆ. ಒಟ್ಟಾರೆ ಬಾಳುಕುನ ಪುರಾಣ ಸಂಕಲನದ ಕಥೆಗಾರ ಡಾ.ಪ್ರಕಾಶ ಖಾಡೆ ಅವರಿಗೆ ಎಲ್ಲ ಯಶಸ್ಸು ಕೋರುತ್ತೇನೆ.
No comments:
Post a Comment